ಮಧ್ಯಾಹ್ನ 2 ರವರೆಗೆ ವ್ಯಾಪಾರಕ್ಕೆ ಅವಕಾಶ

19 CRP 03
Published on

ಚನ್ನರಾಯಪಟ್ಟಣ: ಜು.20ರಿಂದ ಆ.3ರವರೆಗೆ ಬೆಳಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ವ್ಯಪಾರ ವಹಿವಾಟು ಮಾಡಲು ಅವಕಾಶವಿದ್ದು, ಉಳಿದಂತೆ ಶನಿವಾರ ಹಾಗೂ ಭಾನುವಾರ ಸಂಪೂರ್ಣ ಲಾಕ್‌ಡೌನ್ ಮುಂದುವರಿಯಲಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ವರ್ತಕರು, ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈ ನಿಯಮ ಹೋಬಳಿ ಕೇಂದ್ರಗಳಿಗೂ ಅನ್ವಯವಾಗಲಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಮನೆಯಿಂದ ಹೊರ ಬರಬೇಕು. ಇನ್ನು ಗುಡಿ-ಗೋಪುರ, ಮಸೀದಿ ಹಾಗೂ ಚರ್ಚ್‌ಗಳಲ್ಲಿಯೂ ಲಾಕ್‌ಡೌನ್ ನಿಯಮ ಪಾಲನೆ ಕಡ್ಡಾಯ. ಒಂದಷ್ಟು ದಿನ ಮನೆಯಲ್ಲಿಯೇ ಪ್ರಾರ್ಥನೆ ಮಾಡುವುದು ಒಳ್ಳೆಯದು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಪಟ್ಟಣದ ಸಮೀಪದಲ್ಲಿರುವ ಗೂರಮಾರನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗುವುದು ಎಂದು ಮಾಹಿತಿ ನೀಡಿದರು. ತಹಸೀಲ್ದಾರ್ ಜೆ.ಬಿ.ಮಾರುತಿ, ತಾಲೂಕು ಆರೋಗ್ಯಾಧಿಕಾರಿ ಡಾ.ಕಿಶೋರ್‌ಕುಮಾರ್, ಬಿಸಿಎಂ ವಿಸ್ತರಣಾಧಿಕಾರಿ ಮಂಜುನಾಥ್, ಸಿಪಿಐ ಕುಮಾರ್, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ತಾಲೂಕು ವರ್ತಕರ ಸಂಘದ ಸದಸ್ಯರು ಹಾಜರಿದ್ದರು.

ತಾಲೂಕು ಆಸ್ಪತ್ರೆಯಲ್ಲಿ ಕೇವಲ ಒಂದು ವೆಂಟಿಲೇಟರ್ ಮಾತ್ರವಿದ್ದು ತಾಂತ್ರಿಕ ಸಿಬ್ಬಂದಿ ಇಲ್ಲ. ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಇನ್ನೂ ಮೂರು ವೆಂಟಿಲೇಟರ್‌ಗಳ ಅಗತ್ಯವಿದ್ದು ಶೀಘ್ರ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುವುದು.
ಸಿ.ಎನ್.ಬಾಲಕೃಷ್ಣ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net