

ಮೈಸೂರು: ಮಕ್ಕಳಿಲ್ಲದ ದಂಪತಿಗೆ ದತ್ತು ಪಡೆಯಲು ಇದ್ದ ಕಠಿಣ ನಿಯಮವನ್ನು ಸಡಿಲಿಸಿರುವ ಸರ್ಕಾರ, ಆನ್‌ಲೈನ್ ಮಾತ್ರವಲ್ಲದೆ, ಆಫ್‌ಲೈನ್‌ನಲ್ಲೂ ದತ್ತು ಪಡೆಯಲು ಅವಕಾಶ ಕಲ್ಪಿಸಿದೆ.
ಕಾನೂನು ಪ್ರಕಾರ ಅನಾಥ ಮಕ್ಕಳನ್ನು ದತ್ತು ಪಡೆಯಲು ‘ಪೋಷಕತ್ವ’ ಯೋಜನೆ ಅಡಿ ನಿಯಮ ಸಡಿಲಿಸಿರುವ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ ನಿರ್ಧಾರದಿಂದ ದತ್ತು ಪಡೆಯಬೇಕು ಎನ್ನುವ ದಂಪತಿಗಳಲ್ಲಿ ಆಶಾಭಾವನೆ ಮೂಡಿದೆ. ಈ ನಿಮಯದಿಂದಾಗಿ ಮೈಸೂರು ಸೇರಿದಂತೆ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಮಕ್ಕಳಿಲ್ಲದ ದಂಪತಿ, 94 ಮಕ್ಕಳನ್ನು ದತ್ತು ಪಡೆದು ಪಾಲನೆ, ಪೋಷಣೆ ಮಾಡುತ್ತಿದ್ದಾರೆ.
ಮೈಸೂರು ಸೇರಿದಂತೆ ರಾಜ್ಯದ 20 ಜಿಲ್ಲೆಗಳಲ್ಲಿ ಡಾನ್ ಬಾಸ್ಕೋ ಸಂಸ್ಥೆಯು ಪೋಷಕತ್ವ ಯೋಜನೆಯ ನಿರ್ವಹಣೆ ಮಾಡುತ್ತಿದ್ದು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದೊಂದಿಗೆ ಸೇರಿ ಪೋಷಕತ್ವ ಯೋಜನೆಯಡಿ ಅನಾಥ ಮಕ್ಕಳನ್ನು ಮಕ್ಕಳಿಲ್ಲದ ಅರ್ಹ ದಂಪತಿಗೆ ಕೊಡಿಸುವಂತಹ ಕೆಲಸ ಮಾಡುತ್ತಿದೆ.
ಸಾಮಾನ್ಯವಾಗಿ ಮಕ್ಕಳಿಲ್ಲದ ದಂಪತಿ ಕಾನೂನು ಪ್ರಕಾರವಾಗಿ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ (ಕಾರಾದಡಿ) ದತ್ತು ಪಡೆಯಬೇಕಾದರೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ 4ರಿಂದ 6 ವರ್ಷಗಳವರೆಗೆ ಕಾಯಬೇಕು. ಹೀಗೆ ಮಕ್ಕಳು ಬೇಕೆಂದು ಅರ್ಜಿ ಸಲ್ಲಿಸಿದ ದಂಪತಿ ಸಂಖ್ಯೆ ಈಗಾಗಲೇ ರಾಜ್ಯದಲ್ಲಿ 32 ಸಾವಿರ ಗಡಿ ದಾಟಿದೆ. ಈ ಹಿನ್ನೆಲೆಯಲ್ಲಿ ಪೋಷಕತ್ವ ಯೋಜನೆಯಡಿ ಜಿಲ್ಲಾ ಮಟ್ಟದಲ್ಲಿ ಅನಾಥ ಮಕ್ಕಳನ್ನು ದತ್ತು ಸ್ವೀಕರಿಸಲು ಅವಕಾಶ ಕಲ್ಪಿಸಲಾಗಿದೆ.
ಪೋಷಕತ್ವ ಯೋಜನೆಯಡಿ ಎರಡು ವರ್ಷ ಮಕ್ಕಳನ್ನು ಚೆನ್ನಾಗಿ ನೋಡಿಕೊಂಡರೆ ಮಾತ್ರ ಅಂತಹ ಮಗುವನ್ನು ಕಾನೂನು ಪ್ರಕಾರ ದತ್ತು ಸ್ವೀಕರಿಸಲು ಸಾಧ್ಯ. ಇಲ್ಲವಾದರೆ ದತ್ತು ಸ್ವೀಕಾರವನ್ನು ರದ್ದುಪಡಿಸಿ ಮಕ್ಕಳನ್ನು ಸರ್ಕಾರದ ಸುರ್ಪದಿಗೆ ತೆಗೆದುಕೊಳ್ಳಲಾಗುತ್ತದೆ. ಅಲ್ಲದೇ ದಂಪತಿ ವಿರುದ್ಧ ಕ್ರಮವನ್ನೂ ಜರುಗಿಸಲಾಗುತ್ತದೆ.
25ರಿಂದ 60 ವರ್ಷದವರಿಗೆ ಅವಕಾಶ:
ಅವಿವಾಹಿತರು, ವಿಧವೆಯರು, ವಿಚ್ಛೇದಿತರು ಅಥವಾ ಕಾನೂನುಬದ್ಧವಾಗಿ ಬೇರ್ಪಟ್ಟವರು ಸೇರಿದಂತೆ 25ರಿಂದ 60 ವರ್ಷ ವಯಸ್ಸಿನ ಏಕ ಪೋಷಕ ಮಹಿಳೆ ಅಥವಾ ಪುರುಷ ಕೂಡ ಮಗುವನ್ನು ದತ್ತು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ದಂಪತಿಗೆ ಅದರಲ್ಲೂ ಜತೆಯಾಗಿ ಜೀವನ ನಡೆಸುತ್ತಿರುವ ದಂಪತಿಗಷ್ಟೇ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ ಮೂಲಕ ದತ್ತು ಪಡೆಯಲು ಅವಕಾಶ ನೀಡಲಾಗಿದೆ. ಇದರಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ.
ಪುರುಷರು ಹೆಣ್ಣು ಮಗುವನ್ನು ದತ್ತು ಪಡೆಯುವಂತಿಲ್ಲ:
ಪ್ರಾಧಿಕರ ಬಿಡುಗಡೆ ಮಾಡಿರುವ ಪರಿಷ್ಕೃತ ಮಕ್ಕಳ ಆರೈಕೆ ಮಾದರಿ ಮಾರ್ಗಸೂಚಿ ಪ್ರಕಾರ ಏಕ ಪೋಷಕ ಮಹಿಳೆಯು ಗಂಡು ಇಲ್ಲವೇ ಹೆಣ್ಣು ಮಗುವನ್ನು ಪೋಷಿಸುವ ಹಾಗೂ ದತ್ತು ಪಡೆಯಬಹುದು. ಆದರೆ ಏಕ ಪೋಷಕ ಪುರುಷ ಹೆಣ್ಣು ಮಗುವನ್ನು ಪೋಷಿಸುವ ಹಾಗೂ ದತ್ತು ಪಡೆಯುವುದಕ್ಕೆ ನಿಯಮ ವಿಧಿಸಲಾಗಿದೆ.
ಸ್ಥಳೀಯರಿಗೆ ಮಾತ್ರ ಅವಕಾಶ:
ತಾತ್ಕಾಲಿಕ ಪೋಷಕತ್ವ ಯೋಜನೆಯಡಿ ಮಕ್ಕಳನ್ನು ದತ್ತು ಪಡೆಯಲು ಸ್ಥಳೀಯರಿಗೆ ಮಾತ್ರ ಅವಕಾಶವಿದ್ದು, ನೇರವಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಅರ್ಜಿ ಸಲ್ಲಿಸಬೇಕು. ಜಿಲ್ಲೆಯಲ್ಲಿರುವ ಮಕ್ಕಳ ಪಾಲನಾ ಕೇಂದ್ರಗಳಲ್ಲಿರುವ 6ರಿಂದ 18 ವರ್ಷದೊಳಗಿನ ಮಕ್ಕಳನ್ನು ದತ್ತು ಪಡೆಯಬಹುದು. ಆದರೆ ದತ್ತು ತಾತ್ಕಾಲಿಕ ಪ್ರಕ್ರಿಯೆಯಾಗಿದ್ದು, ಎರಡು ವರ್ಷಗಳವರೆಗೆ ಮಕ್ಕಳನ್ನು ದಂಪತಿ ಚೆನ್ನಾಗಿ ನೋಡಿಕೊಂಡರೆ ಮತ್ತು ಮಕ್ಕಳು ಸಹ ಅವರೊಂದಿಗೆ ಹೊಂದಿಕೊಂಡರೆ ಮಾತ್ರ ನಿಯಮದಂತೆ ಅಧಿಕೃತವಾಗಿ ದತ್ತು ನೀಡುವ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ.
ಸಂಬಂಧಿಕರ ಮಕ್ಕಳನ್ನು ದತ್ತು ಪಡೆಯಲು ಸಹ ಪೋಷಕತ್ವ ಯೋಜನೆಯಡಿ ಅವಕಾಶವಿದ್ದು, ಕಾನೂನು ಪ್ರಕಾರ ದತ್ತು ಪಡೆಯಬೇಕಾದರೆ ಈ ಯೋಜನೆ ಸದ್ಬಳಕೆ ಮಾಡಿಕೊಳ್ಳಬಹುದು ಎನ್ನುತ್ತಾರೆ ಡಾನ್ ಬಾಸ್ಕೋ ಸಂಸ್ಥೆಯ ನಿರ್ದೇಶಕ ಫಾದರ್ ಸಿಜೂ ಥಾಮಸ್.
==========
ಜಿಲ್ಲೆಯಲ್ಲಿ ಅವಕಾಶ
ಮಕ್ಕಳಿಲ್ಲದ ದಂಪತಿಗೆ ಮಕ್ಕಳ ಕೊರಗು ನೀಗಿಸಲು ಹಾಗೂ ಅನಾಥ ಮಕ್ಕಳಿಗೆ ಪೋಷಕರನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ದತ್ತು ಸ್ವೀಕಾರಕ್ಕೆ ಇದ್ದ ನಿಯಮವನ್ನು ಕೊಂಚ ತಿದ್ದುಪಡಿಸಿ ಪೋಷಕತ್ವ ಯೋಜನೆ ಜಾರಿಗೊಳಿಸಿದೆ. ಇದರ ಪ್ರಕಾರ ಜಿಲ್ಲೆ ಸ್ಥಳೀಯರಿಗೆ ಇದುವರೆಗೆ 7 ಮಕ್ಕಳನನ್ನು ದತ್ತು ನೀಡಲಾಗಿದ್ದು, ಎರಡು ವರ್ಷದಲ್ಲಿ ಮಗು ಹೊಂದಾಣಿಕೆಯಾದರೆ, ಪೋಷಕರು ಚನ್ನಾಗಿ ನೋಡಿಕೊಂಡರೆ ಮಾತ್ರ ದತ್ತು ಯೋಜನೆ ಮುಂದುವರಿಯುತ್ತದೆ.
ಎನ್.ಟಿ.ಯೋಗೇಶ್,
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ