

ಸದೇಶ್ ಕಾರ್ಮಾಡ್ ಮೈಸೂರು
ಹೆಚ್ಚುತ್ತಿರುವ ವಾಯು ಮಾಲಿನ್ಯದ ಪರಿಣಾಮದಿಂದ ನಗರ ಪ್ರದೇಶಗಳಲ್ಲಿ ವಾತಾವರಣ ದೊಡ್ಡ ಪ್ರಮಾಣದಲ್ಲಿ ಕಲುಷಿತಗೊಳ್ಳುತ್ತಿದ್ದು, ಜನರು ನೆಮ್ಮದಿಯಾಗಿ ಉಸಿರಾಡಲು ಸಹ ಕಷ್ಟಪಡುವ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿದೆ. ವಾತಾವರಣದ ಕಲುಷಿತ ಪ್ರಮಾಣ ಕಡಿಮೆಗೊಳಿಸಲು ಗಿಡ ಮರಗಳನ್ನು ನೆಟ್ಟು ಬೆಳೆಸುವುದು ಅನಿವಾರ್ಯ. ನಗರದಲ್ಲಿ ಗಿಡ ಮರಗಳನ್ನು ನೆಟ್ಟು ಬೆಳೆಸಲು ಉದ್ಯಾನಗಳಿಗೆ ಕೊರತೆಯೇನು ಇಲ್ಲ. ಆದರೆ, ನಿರ್ವಹಣೆಯದ್ದೇ ದೊಡ್ಡ ತಲೆನೋವಾಗಿದೆ.
ರಾಜಧಾನಿ ಬೆಂಗಳೂರು ಉದ್ಯಾನ ನಗರಿ ಎಂದೇ ಹೆಸರುವಾಸಿ. ಆದರೆ, ಉದ್ಯಾನಗಳ ವಿಚಾರದಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಬೆಂಗಳೂರು ನಗರವನ್ನೂ ಮೀರಿಸಿದೆ. ಬೆಂಗಳೂರು ನಗರದ ವಿಸ್ತೀರ್ಣ ಹಾಗೂ ಜನಸಂಖ್ಯೆಗೆ ಹೋಲಿಕೆ ಮಾಡಿದರೆ ಮೈಸೂರಿನಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಉದ್ಯಾನಗಳು ಇವೆ. ಸಾಕಷ್ಟು ಪ್ರಮಾಣದಲ್ಲಿ ಉದ್ಯಾನಗಳು ಇರುವ ಹಿನ್ನೆಲೆಯಲ್ಲಿ ಅವುಗಳನ್ನು ನಿರ್ವಹಣೆ ಮಾಡುವುದು ಹೇಗೆ ಎಂಬುದು ಪಾಲಿಕೆ ಮುಂದಿರುವ ಚಿಂತೆ. ಬೆಂಗಳೂರಿನಲ್ಲಿ ಒಟ್ಟು 1,247 ಉದ್ಯಾನಗಳು ಇದ್ದು, 1.31 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಮೈಸೂರು ನಗರದ ಜನಸಂಖ್ಯೆ ಕೇವಲ 12 ಲಕ್ಷ ಇದ್ದು, ಉದ್ಯಾನಗಳ ಸಂಖ್ಯೆ ಬರೋಬ್ಬರಿ 580 ಇವೆ. ಬೆಂಗಳೂರಿನ ವಿಸ್ತೀರ್ಣ ಹಾಗೂ ಜನಸಂಖ್ಯೆಗೆ ಹೋಲಿಕೆ ಮಾಡಿದರೆ ಮೈಸೂರು ನಗರದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಾನಗಳು ಇವೆ.
ನಗರದ ಎಲ್ಲ ಉದ್ಯಾನಗಳನ್ನು ನಿರ್ವಣೆ ಮಾಡುವಷ್ಟು ಅನುದಾನ ಪಾಲಿಕೆ ಬಳಿ ಇಲ್ಲ. ಹೀಗಾಗಿ ಹಲವಾರು ಉದ್ಯಾನಗಳು ನಿರ್ವ ಹಣೆಯ ಕೊರತೆ ಎದುರಿಸುತ್ತಿವೆ. ಉದ್ಯಾನಗಳು ಅಭಿವೃದ್ಧಿಗೊಂಡರೆ ಆ ಪ್ರದೇಶದ ಅಂದವೂ ಹೆಚ್ಚಾಗುತ್ತದೆ. ಹೀಗಾಗಿ ಸಾಧ್ಯವಾದಷ್ಟು ಉದ್ಯಾನಗಳನ್ನು ನಗರ ಪಾಲಿಕೆಯೇ ಅಭಿವೃದ್ಧಿ ಪಡಿಸಿ ನಿರ್ವಹಣೆ ಮಾಡುತ್ತಿದೆ. ಆದರೆ, ಉಳಿದ ಉದ್ಯಾನಗಳು ಸಹ ಅಭಿವೃದ್ಧಿ ಕಾಣುವ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ‘ನಮ್ಮ ಮೈಸೂರು- ನಮ್ಮ ಕೊಡುಗೆ’ ಹೆಸರಿನಲ್ಲಿ ಸಿಎಸ್‌ಆರ್ ನಿಧಿಯಲ್ಲಿ ಉದ್ಯಾನ ಅಭಿವೃದ್ಧಿ ಪಡಿಸುವ ಅಥವಾ ದತ್ತು ಪಡೆಯುವ ಯೋಜನೆಗೆ ಚಾಲನೆ ನೀಡಲಾಗಿದೆ.
ಖಾಸಗಿ ಕಂಪನಿಗಳ ಸಿಎಸ್‌ಆರ್ ನಿಧಿಯಡಿ ಉದ್ಯಾನಗಳ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಅವಕಾಶವಿದ್ದು, ನಗರದಲ್ಲಿರುವ ಕಂಪನಿಗಳು ಈ ಕುರಿತು ಆಸಕ್ತಿ ತೋರಬೇಕಾಗಿದೆ. ನಗರದಲ್ಲಿ ಒಟ್ಟು 234 ಅಭಿವೃದ್ಧಿ ಹೊಂದದೆ ಇರುವ ಉದ್ಯಾನಗಳು ಇದ್ದು, ಇವುಗಳನ್ನು ದತ್ತು ನೀಡಲು ನಿರ್ಧರಿಸಲಾಗಿದೆ.
ದತ್ತು ಯೋಜನೆ ಷರತ್ತುಗಳೇನು?: ಉದ್ಯಾನ ದತ್ತು ಯೋಜನೆಗೆ ಒಟ್ಟು 18 ಷರತ್ತುಗಳನ್ನು ವಿಧಿಸಲಾಗಿದೆ. ಪಾಲಿಕೆ ವಿಧಿಸಿರುವ ಷರತ್ತುಗಳನ್ನು ಒಪ್ಪುವವರು ಮಾತ್ರ ಉದ್ಯಾನಗಳನ್ನು ದತ್ತು ಪಡೆಯಬಹುದು. ಉದ್ಯಾನವನ್ನು ದತ್ತು ಪಡೆಯುವ ಖಾಸಗಿ ಕಂಪನಿ ಅಥವಾ ಸಂಘ ಸಂಸ್ಥೆಗಳು ಸ್ವಂತ ಖರ್ಚಿನಲ್ಲಿ ಉದ್ಯಾನ ಅಭಿವೃದ್ಧಿ ಪಡಿಸಬೇಕು, ಇದಕ್ಕೆ ನಗರ ಪಾಲಿಕೆಯಿಂದ ಅನುದಾನ ದೊರೆಯುವುದಿಲ್ಲ. ಉದ್ಯಾನದ ಮಾಲಿಕತ್ವ ವನ್ನು ನಗರ ಪಾಲಿಕೆ ಹೊಂದಿದ್ದು, ಪರಭಾರೆಗೆ ಅವಕಾಶವಿಲ್ಲ. ಉದ್ಯಾನದಲ್ಲಿ ಯಾವುದೇ ಖಾಯಂ ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲ. ಪಾಲಿಕೆ ಅನುಮತಿ ಇಲ್ಲದೆ ಉದ್ಯಾನವನ್ನು ಖಾಸಗಿ ಕಾರ್ಯಕ್ರಮ, ಸಭೆ ಸಮಾರಂಭಗಳಿಗೆ ನೀಡುವಂತಿಲ್ಲ.
ಉದ್ಯಾನದ ಸೌಂದರ್ಯಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಯಾವುದೇ ಮಾರ್ಪಾಡುಗಳನ್ನು ಮಾಡಲು ಅವಕಾಶವಿಲ್ಲ. ಉದ್ಯಾನಗಳಿಗೆ ಹೊಸದಾಗಿ ಹೆಸರು ಇಡುವಂತಿಲ್ಲ ಹಾಗೂ ಈಗ ಇಟ್ಟಿರುವ ಹೆಸರುಗಳನ್ನು ಬದಲಿಸುವಂತಿಲ್ಲ. ಉದ್ಯಾನದಲ್ಲಿ ನಗರ ಪಾಲಿಕೆ ನಿಗದಿ ಪಡಿಸಿದ ಗಾತ್ರದ ಎರಡು ನಾಮಫಲಕಗಳನ್ನು ಮಾತ್ರ ಅವಳವಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಉದ್ಯಾನದಲ್ಲಿ ಸಂಗ್ರಹವಾಗುವ ಹಸಿಕಸವನ್ನು ಉದ್ಯಾನದಲ್ಲಿ ಕಾಂಪೋಸ್ಟ್ ಗೊಬ್ಬರವಾಗಿ ಪರಿವರ್ತಿಸಿ ಗಿಡಗಳಿಗೆ ಬಳಕೆ ಮಾಡಬಹುದು, ಪ್ಲಾಸ್ಟಿಕ್ ಮುಂತಾದ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು, ಉದ್ಯಾನದಲ್ಲಿರುವ ಗಿಡ ಮರಗಳು, ವಿದ್ಯುತ್ ದೀಪಗಳು, ಆಟಿಕೆಗಳು, ವ್ಯಾಯಾಮ ಸಲಕರಣೆಗಳು, ಬೆಂಚುಗಳು ಸೇರಿದಂತೆ ವಿವಿಧ ಪರಿಕರಗಳನ್ನು ಇರುವ ಸ್ಥಿತಿಯಲ್ಲಿ ಉಳಿಸಿಕೊಳ್ಳಬೇಕು.
ಒಪ್ಪಂದದ ಅವಧಿಯು 11 ತಿಂಗಳವರೆಗೆ ಇರುತ್ತದೆ. ಉದ್ಯಾನದ ಯಾವುದೇ ಭಾಗದಲ್ಲಿ ಸಣ್ಣ ವ್ಯಾಪಾರಿಗಳಿಗೆ ವೃತ್ತಿ ನಡಿಸಲು ಬಾಡಿಗೆ ಅಥವಾ ಗುತ್ತಿಗೆ ನೀಡುವುದನ್ನು ಪೂರ್ಣವಾಗಿ ನಿಷೇಧಿಸಲಾಗಿದೆ. ಉದ್ಯಾನ ಬಳಸುವ ವಿಚಾರದಲ್ಲಿ ಸಾರ್ವಜನಿಕರಿಗೆ ಯಾವುದೇ ನಿರ್ಬಂಧ ಹೇರುವಂತಿಲ್ಲ, ಇದಕ್ಕೆ ಸಂಬಂಧಿಸಿದ ಸಂಪೂರ್ಣ ಅಧಿಕಾರ ನಗರ ಪಾಲಿಕೆಗೆ ಬಳಿ ಇರುತ್ತದೆ. ಅವಧಿ ಮುಗಿದ ನಂತರ ಉದ್ಯಾನವನ್ನು ಸುಸ್ಥಿತಿಯಲ್ಲಿ ನಗರ ಪಾಲಿಕೆ ಹಸ್ತಾಂತರಿಸಬೇಕು ಅಥವಾ ಒಪ್ಪಂದ ಕರಾರನ್ನು ನವೀಕರಿಸಬೇಕು. ಸಾರ್ವಜನಿಕರಿಂದ ನಿರ್ವಹಣೆಗೆ ಸಂಬಂಧಿಸಿದ ಆಕ್ಷೇಪಗಳು ಕೇಳಿ ಬಂದರೆ ಯಾವುದೇ ಮುನ್ಸೂಚನೆ ನೀಡದೆ ನೀಡಿರುವ ಅನುಮತಿ ಆದೇಶವನ್ನು ರದ್ದು ಪಡಿಸುವ ಅಧಿಕಾರವನ್ನು ಪಾಲಿಕೆ ಹೊಂದಿದೆ.
ನಗರದಲ್ಲಿ ಒಟ್ಟು 234 ಅಭಿವೃದ್ಧಿ ಹೊಂದದೆ ಇರುವ ಉದ್ಯಾನಗಳು ಇವೆ. ‘ನಮ್ಮ ಮೈಸೂರು-ನಮ್ಮ ಕೊಡುಗೆ’ ಶೀರ್ಷಿಕೆಯಡಿ ಈ ಉದ್ಯಾನಗಳನ್ನು ಸಿಎಸ್‌ಆರ್ ನಿಧಿಯಡಿ ಅಭಿವೃದ್ಧಿ ಪಡಿಸುವ ಅಥವಾ ದತ್ತು ಪಡೆಯಲು ಖಾಸಗಿ ಕಂಪನಿಗಳು ಹಾಗೂ ಸಂಘ ಸಂಸ್ಥೆಗಳನ್ನು ಪ್ರೇರೇಪಿಸಲು ಉದ್ದೇಶಿಸಲಾಗಿದೆ. ನಗರ ಪಾಲಿಕೆ ವಿಧಿಸುವ ಷರತ್ತುಗಳಿಗೆ ಅನುಗುಣವಾಗಿ ಖಾಸಗಿ ಕಂಪನಿಗಳು ಉದ್ಯಾನಗಳನ್ನು ದತ್ತು ಪಡೆಯಬಹುದು.
ಆಸಾದ್ ಉರ್ ರೆಹಿಮಾನ್ ಷರೀಫ್, ನಗರ ಪಾಲಿಕೆ ಆಯುಕ್ತ