ಮನೆ ಮನೆ ಪ್ರಚಾರಕ್ಕೆ 5 ಜನರಿಗೆ ಅವಕಾಶ

Gramayana Logo
Published on

ಧಾರವಾಡ: ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷ ರಹಿತ ಚುನಾವಣೆ. ಕ್ಷೇತ್ರದ ವ್ಯಾಪ್ತಿ ಚಿಕ್ಕದಿರುವುದರಿಂದ, ಅಭ್ಯರ್ಥಿಗಳ ಪ್ರಚಾರ ಕ್ಷೇತ್ರಕ್ಕೆ ಸೀಮಿತವಾಗಿರುತ್ತದೆ. ಕಡಿಮೆ (ಗರಿಷ್ಠ 5 ಜನ) ಬೆಂಬಲಿಗರೊಂದಿಗೆ ಪರಸ್ಪರ ಅಂತರ ಕಾಯ್ದುಕೊಂಡು ಮನೆ ಮನೆಗೆ ಭೇಟಿ ನೀಡಿ ಪ್ರಚಾರ ನಡೆಸಬಹುದು. ಅಭ್ಯರ್ಥಿಗಳು ಮತ್ತು ಬೆಂಬಲಿಗರು ಫೇಸ್ ಮಾಸ್ಕ್ ಧರಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಆದಷ್ಟು ಇಲೆಕ್ಟ್ರಾನಿಕ್ ಮೀಡಿಯಾದಲ್ಲಿ ಪ್ರಚಾರ ಮಾಡಬೇಕು. ಪ್ರಚಾರಕ್ಕೆ ಮುದ್ರಿಸಿದ ಕರಪತ್ರಗಳನ್ನು ಕಡ್ಡಾಯವಾಗಿ ಫೇಸ್​ವಾಸ್ಕ್, ಕೈ ಗವಸು ಧರಿಸಿ ಹಂಚಬೇಕು. ಸ್ಯಾನಿಟೈಸರ್ ಉಪಯೋಗಿಸಬೇಕು. ಕೋವಿಡ್-19 ಹಿನ್ನೆಲೆಯಲ್ಲಿ ಗುಂಪು ಗುಂಪಾಗಿ ಪ್ರಚಾರ ಮಾಡುವಂತಿಲ್ಲ. ಸಭೆ ಅಥವಾ ಸಮಾರಂಭವನ್ನು ಕ್ಷೇತ್ರಗಳಲ್ಲಿ ಕೋವಿಡ್ ನಿಯಂತ್ರಣ ಮಾರ್ಗಸೂಚಿ ಅನುಸರಿಸಬೇಕು.

ರಾಜ್ಯ ಚುನಾವಣಾ ಆಯೋಗ ಹೊರಡಿಸಿರುವ ಸದಾಚಾರ ಸಂಹಿತೆಗಳನ್ನು ಪ್ರಚಾರದ ವೇಳೆ ಎಲ್ಲ ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕು. ಪ್ರಚಾರದ ವೇಳೆ ಮತೀಯ ಮತ್ತು ಭಾಷೆ ವಿಷಯದಲ್ಲಿ ವೈಮನಸ್ಸು ಮೂಡಿಸುವ, ದ್ವೇಷ ಹಬ್ಬಿಸುವ ಅಥವಾ ಉದ್ವೇಗಕ್ಕೆ ಕಾರಣವಾಗುವ ಅಂಶಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸುವಂತಿಲ್ಲ. ಧಾರ್ವಿುಕ ಕೇಂದ್ರಗಳಾದ ದೇವಾಲಯ, ಮಸೀದಿ, ಚರ್ಚ್ ಅಥವಾ ಇತರೆ ಪ್ರಾರ್ಥನಾ ಸ್ಥಳಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸಬಾರದು.

ಮತದಾರರಿಗೆ ಲಂಚ ನೀಡುವುದು, ಇತರ ಆಮಿಷ ಅಥವಾ ಬೆದರಿಕೆ ಹಾಕಿ ಮತ ಯಾಚನೆ ಮಾಡಬಾರದು. ಖಾಸಗಿ ಆಸ್ತಿಗಳು, ಕಟ್ಟಡಗಳ ಮೇಲೆ ಸಂಬಂಧಪಟ್ಟವರಿಂದ ಲಿಖಿತ ಅನುಮತಿ ಪಡೆಯದೆ ಚುನಾವಣಾ ಪ್ರಚಾರ ಸಾಮಾಗ್ರಿಗಳನ್ನು ಅಂಟಿಸುವುದು, ಪ್ರಕಟಿಸುವಂತಿಲ್ಲ. ಸರ್ಕಾರಿ, ಸಾರ್ವಜನಿಕ ಸ್ಥಳಗಳಿಗೂ ಇದು ಅನ್ವಯವಾಗಲಿದೆ.

ಪ್ರಚಾರ ಸಭೆ, ಸಮಾರಂಭ ಆಯೋಜನೆ ಮಾಡಬೇಕಾದರೆ ಸ್ಥಳೀಯ ಪೊಲೀಸರಿಂದ ಅನುಮತಿ ಪಡೆಯಬೇಕು. ಧ್ವನಿವರ್ಧಕಗಳನ್ನು ಜನರಿಗೆ ತೊಂದರೆಯಾಗದಂತೆ ಬೆಳಗ್ಗೆ 7ರಿಂದ ರಾತ್ರಿ 10ರವರೆಗೆ ಬಳಸಬಹುದು. ಚುನಾವಣಾ ಕರ್ತವ್ಯ ನಿರತ ಅಧಿಕಾರಿ ಸಿಬ್ಬಂದಿಗೆ ಅಡ್ಡಿಪಡಿಸಬಾರದು. ಮುಕ್ತ ಹಾಗೂ ಶಾಂತಿಯುತ ಚುನಾವಣೆಗೆ ಅಭ್ಯರ್ಥಿಗಳು ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಕೋರಿದ್ದಾರೆ.

389 ನಾಮಪತ್ರಗಳು ಸಲ್ಲಿಕೆ

ಧಾರವಾಡ: ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ನಡೆಯುವ ಗ್ರಾಮ ಪಂಚಾಯಿತಿ ಚುನಾವಣೆಗೆ ಬುಧವಾರ ವಿವಿಧ ಗ್ರಾಪಂಗಳಲ್ಲಿ ಒಟ್ಟು 389 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಧಾರವಾಡ ತಾಲೂಕಿನ ವಿವಿಧ ಗ್ರಾಪಂಗಳಲ್ಲಿ ಅನುಸೂಚಿತ ಜಾತಿಗೆ ಮೀಸಲಿರುವ ಸ್ಥಾನಗಳಿಗೆ 17 ನಾಮಪತ್ರ, ಅನುಸೂಚಿತ ಪಂಗಡಕ್ಕೆ ಮೀಸಲಿರುವ ಸ್ಥಾನಗಳಿಗೆ 13, ಹಿಂದುಳಿದ ಅ ವರ್ಗಕ್ಕೆ ಮೀಸಲಿರುವ ಸ್ಥಾನಗಳಿಗೆ 38, ಹಿಂದುಳಿದ ಬ ವರ್ಗಕ್ಕೆ ಮೀಸಲಿರುವ ಸ್ಥಾನಗಳಿಗೆ 13 ಮತ್ತು ಸಾಮಾನ್ಯ ವರ್ಗಕ್ಕೆ 144 ಸೇರಿ ಒಟ್ಟು 225 ನಾಮಪತ್ರಗಳು ಸಲ್ಲಿಕೆಯಾಗಿವೆ.

ಅಳ್ನಾವರ ತಾಲೂಕಿನಲ್ಲಿ ಅನುಸೂಚಿತ ಜಾತಿಗೆ ಮೀಸಲಿರುವ ಸ್ಥಾನಗಳಿಗೆ 1 ನಾಮಪತ್ರ, ಹಿಂದುಳಿದ ಅ ವರ್ಗಕ್ಕೆ ಮೀಸಲಿರುವ ಸ್ಥಾನಗಳಿಗೆ 2, ಹಿಂದುಳಿದ ಬ ವರ್ಗಕ್ಕೆ ಮೀಸಲಿರುವ ಸ್ಥಾನಗಳಿಗೆ 1, ಸಾಮಾನ್ಯ ವರ್ಗಕ್ಕೆ 15 ಸೇರಿ ಒಟ್ಟು 19 ನಾಮಪತ್ರಗಳು ಸಲ್ಲಿಕೆಯಾಗಿವೆ.

ಕಲಘಟಗಿ ತಾಲೂಕಿನ ವಿವಿಧ ಗ್ರಾಪಂಗಳಲ್ಲಿ ಅನುಸೂಚಿತ ಜಾತಿಗೆ ಮೀಸಲಿರುವ ಸ್ಥಾನಗಳಿಗೆ 21 ನಾಮಪತ್ರ, ಅನುಸೂಚಿತ ಪಂಗಡಕ್ಕೆ ಮೀಸಲಿರುವ ಸ್ಥಾನಗಳಿಗೆ 7, ಹಿಂದುಳಿದ ಅ ವರ್ಗಕ್ಕೆ ಮೀಸಲಿರುವ ಸ್ಥಾನಗಳಿಗೆ 27, ಹಿಂದುಳಿದ ಬ ವರ್ಗಕ್ಕೆ ಮೀಸಲಿರುವ ಸ್ಥಾನಗಳಿಗೆ 7ಮತ್ತು ಸಾಮಾನ್ಯ ವರ್ಗಕ್ಕೆ 83 ಸೇರಿ ಒಟ್ಟು 145 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

27ರವರೆಗೆ ಸಂತೆ ನಿಷೇಧ: ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಡಿ. 22ರಿಂದ 27ರವರೆಗೆ ನಡೆಯುವ ವಿವಿಧ ಸಂತೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶ ಹೊರಡಿಸಿದ್ದಾರೆ. ಡಿ. 22ರಂದು ಮೊದಲ ಹಂತದ ಚುನಾವಣೆ ನಿಮಿತ್ತ ಅಳ್ನಾವರ ತಾಲೂಕಿನ ಹೊನ್ನಾಪುರ, ಕಲಘಟಗಿ ತಾಲೂಕಿನ ಗಂಭ್ಯಾಪೂರ ಹಾಗೂ ಶೀಗಿಗಟ್ಟಿ ಗ್ರಾಮಗಳಲ್ಲಿ ನಡೆಯಬೇಕಿದ್ದ ಸಂತೆಗಳನ್ನು ಹಾಗೂ ಡಿ. 27ರಂದು ಹುಬ್ಬಳ್ಳಿ ತಾಲೂಕಿನ ವರೂರ, ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಮತ್ತು ನಲವಡಿ ಗ್ರಾಮಗಳಲ್ಲಿ ನಡೆಯಬೇಕಿದ್ದ ಸಂತೆಗಳನ್ನು ಮುಕ್ತ ಹಾಗೂ ಶಾಂತಿಯುತವಾಗಿ ಚುನಾವಣೆಯನ್ನು ಜರುಗಿಸಲು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net