ರಾಜ್ಯಾದ್ಯಂತ ಸ್ಥಳೀಯ ಕಲೆ ಪ್ರದರ್ಶನಕ್ಕೆ ಅವಕಾಶ

Lalita kala
Published on

ಶಿರಸಿ: ಸ್ಥಳೀಯ ಕಲೆಗಳನ್ನು ರಾಜ್ಯಾದ್ಯಂತ ಪ್ರದರ್ಶಿಸಲು ಲಲಿತಕಲಾ ಅಕಾಡೆಮಿಯಿಂದ ಅವಕಾಶ ಕಲ್ಪಿಸಲಾಗುವುದು ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಬಿ. ನೀಲಮ್ಮ ಹೇಳಿದರು.

ನಗರದ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ನಾಲ್ಕು ದಿನಗಳ ಕಾವಿಕಲೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಶಿರಸಿಯ ಬೇಡರವೇಷ ಅದ್ಭುತ ಕಲೆ. ಇದು ನಮ್ಮ ಅಕಾಡೆಮಿ ವ್ಯಾಪ್ತಿಯಲ್ಲಿ ಬಾರದಿದ್ದರೂ ಬೆಂಗಳೂರು ಹಾಗೂ ರಾಜ್ಯದ ವಿವಿಧೆಡೆ ಪ್ರದರ್ಶನ ನಡೆಸಲು ಸಹಕಾರ ನೀಡಲಾಗುವುದು. ನಮಗೆ ಅರಿವಿಲ್ಲದಂತೆಯೇ ಅನೇಕ ಕಲೆಗಳು ನಶಿಸಿಹೋಗುತ್ತಿವೆ. ಯುವಪೀಳಿಗೆಗೆ ಕಲೆಯ ಬಗ್ಗೆ ಅರಿವು ಮೂಡಿಸಿ, ಹೆಚ್ಚು ಹೆಚ್ಚು ಪಾಲ್ಗೊಳ್ಳುವಂತೆ ಮಾಡಲು ಕಾರ್ಯಾಗಾರ ನಡೆಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಕಲಾವಿದರನ್ನು ಲಲಿತಕಲಾ ಅಕಾಡೆಮಿ ಗುರುತಿಸುವಂತಹ ಕೆಲಸ ಮಾಡುತ್ತದೆ ಎಂದರು.

ಎಂಇಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಮಾತನಾಡಿ, ಮಲೆನಾಡಿನ ಜನಜೀವನದೊಂದಿಗೆ ಕಾವಿಕಲೆ ಹಾಸು ಹೊಕ್ಕಾಗಿದ್ದು, ದೀಪಾವಳಿ ಹಬ್ಬದಲ್ಲಿ ಈಗಲೂ ಮೂಡಿ ಬರುತ್ತದೆ. ಸಂಸ್ಕೃತಿ ಉಳಿಸುವ ಇಂತಹ ಕಲೆಗಳನ್ನು ಬೆಳೆಸಬೇಕು. ದೇಶದ ಇತಿಹಾಸ, ಸಂಸ್ಕೃತಿಯನ್ನು ಕಲೆಗಳನ್ನು ಆಧರಿಸಿಯೇ ಗುರುತಿಸುತ್ತೇವೆ. ಇಂತಹ ಕಲೆಗಳ ಪುನರುತ್ಥಾನ ಮಾಡಬೇಕು. ಪಾಶ್ಚಾತ್ಯ ಸಂಸ್ಕೃತಿಗೆ ವಾಲುತ್ತಿರುವ ಯುವ ಸಮೂಹಕ್ಕೆ ನಮ್ಮ ಸಂಸ್ಕೃತಿಯ ಅರಿವು ಮೂಡಿಸುವುದಕ್ಕೆ ಕಲೆಗಳ ಉಳಿವು ಅಗತ್ಯ ಎಂದರು.

ಕಾಲೇಜು ಉಪಸಮಿತಿ ಅಧ್ಯಕ್ಷ ಎಸ್.ಕೆ. ಭಾಗ್ವತ ಮಾತನಾಡಿ, ಈ ಭಾಗದ ಕಲೆಗಳಿಗೆ, ಕಲಾವಿದರಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಅಕಾಡೆಮಿಗಳು ಮಾಡಬೇಕು. ಅದರಲ್ಲೂ ಲಲಿತಕಲಾ ಅಕಾಡೆಮಿಯಿಂದ ಕೊಡಮಾಡುವ ಪ್ರಶಸ್ತಿಗಳಿಗೆ ಜಿಲ್ಲೆಯ ಕಲಾವಿದರನ್ನು ಪರಿಗಣಿಸಬೇಕು ಎಂದರು.

ಕಲಾವಿದ ರವಿ ಗುನಗಾ ಮಾತನಾಡಿ, ಕೇರಳದಿಂದ-ಗೋವಾ ಭಾಗದವರೆಗೂ ಕಲೆ ಕಂಡುಬರುತ್ತದೆ. ಮಣ್ಣಿನ ಗೋಡೆಗಳಲ್ಲಿ ಇದನ್ನು ಚಿತ್ರಿಸಲಾಗುತ್ತಿಒತ್ತು. ನಂತರ ಸಿಮೆಂಟ್ ಗೋಡೆಗಳು ಬಂದ ಮೇಲೆ ಅವು ನಶಿಸುತ್ತಿವೆ ಎಂದರು.

ಕಾಲೇಜು ಪ್ರಾಚಾರ್ಯ ಪ್ರೊ.ಜಿ.ಟಿ. ಭಟ್ಟ ಮಾತನಾಡಿ, ಕಾವಿಕಲೆ ವಿಚಿತ್ರವಾದ ಕಲೆ. ಅದರ ಮೂಲ ಎಲ್ಲಿ ಎಂಬುದು ಗೊತ್ತಿಲ್ಲ. ಇದು ಕರಾವಳಿ ಭಾಗದಲ್ಲಿ ಜಾಸ್ತಿ ಕಂಡುಬರುತ್ತದೆ. ಬುಡಕಟ್ಟು ಅಲೆಮಾರಿ ಜನಾಂಗದವರ ಮುಖ್ಯ ಕಲೆ ಇದಾಗಿದೆ. ಶೇಡಿ ಮಣ್ಣು, ಕೆಮ್ಮಣ್ಣಿನಿಂದ ಬಿಡಿಸುತ್ತಿದ್ದರು. ಈ ಕಲೆಯನ್ನು ಮನೆಗೆ ಚಿತ್ರಿಸುವುದರಿಂದ ಯಾವುದೇ ಆತಂಕ ಎದುರಾಗಬಾರದು ಎಂಬುದು ಅದರ ಹಿಂದಿನ ಉದ್ದೇಶವಿತ್ತು ಎಂದರು.

ಲಲಿಕಲಾ ಅಕಾಡೆಮಿಯ ಸಂಚಾಲಕಿ ಶಾಂತಾ ಪ್ರವೀಣ ಕೊಲ್ಲೆ ಸ್ವಾಗತಿಸಿದರು. ಉಪನ್ಯಾಸಕಿ ವಿಜಯಾ ಭಟ್ಟ ನಿರೂಪಿಸಿದರು. ಅಕಾಡೆಮಿ ಸಿಬ್ಬಂದಿ ವೆಂಕಟೇಶ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net