ಅಕ್ರಮ ಮ್ಯಾಕ್ಸಿ ಕ್ಯಾಬ್​ಗಳ ಸಕ್ರಮಕ್ಕೆ ಅವಕಾಶ: ತೆರಿಗೆ ಪಾವತಿಸಿ ಹೆಚ್ಚುವರಿ ಆಸನ ಅಳವಡಿಕೆಗೆ ಸೂಚನೆ, ವಿಜಯವಾಣಿ ವರದಿಯಿಂದ ಎಚ್ಚೆತ್ತ ಸಾರಿಗೆ ಇಲಾಖೆ

Maxicab
Published on

ಬೆಂಗಳೂರು: ಹೆಚ್ಚುವರಿ ಆಸನಗಳನ್ನು ಅಳವಡಿಸಿಕೊಂಡು ಖಜಾನೆಗೆ ಕೋಟ್ಯಂತರ ರೂ. ತೆರಿಗೆ ವಂಚಿಸುತ್ತಿರುವ ಅನಧಿಕೃತ ಮ್ಯಾಕ್ಸಿಕ್ಯಾಬ್​ಗಳ ಕುರಿತು ವಿಜಯವಾಣಿ ಪ್ರಕಟಿಸಿದ ವಿಶೇಷ ವರದಿಯಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ತೆರಿಗೆ ಪಾವತಿಸಿ ನಿಯಮಬದ್ಧವಾಗಿ ಕಾರ್ಯಾಚರಣೆ ನಡೆಸಲು ಮ್ಯಾಕ್ಸಿ ಕ್ಯಾಬ್ ಮಾಲೀಕರಿಗೆ ಅವಕಾಶ ಕಲ್ಪಿಸಿದೆ.

15 ಸಾವಿರ ವಾಹನಗಳು ಹೆಚ್ಚುವರಿ ಆಸನ ಅಳವಡಿಸಿಕೊಂಡು ಓಡಾಡುವ ಮುಖಾಂತರ 100 ಕೋಟಿ ರೂ. ತೆರಿಗೆ ವಂಚಿಸುತ್ತಿರುವ ಬಗ್ಗೆ ಫೆ.13ರಂದು ‘ಸರ್ಕಾರಕ್ಕೆ ತೆರಿಗೆ ಟೋಪಿ’ ಶೀರ್ಷಿಕೆಯಲ್ಲಿ ವಿಜಯವಾಣಿ ಮುಖಪುಟದಲ್ಲಿ ವರದಿ ಪ್ರಕಟವಾಗಿತ್ತು. ಜತೆಗೆ ಅನಧಿಕೃತ ಮ್ಯಾಕ್ಸಿ ಕ್ಯಾಬ್ ವಾಹನಗಳನ್ನು ಸಕ್ರಮಗೊಳಿಸಬೇಕೆಂಬ ಮ್ಯಾಕ್ಸಿ ಕ್ಯಾಬ್ ಮಾಲೀಕರ ಸಂಘದ ಮನವಿಯನ್ನು ಉಲ್ಲೇಖಿಸಲಾಗಿತ್ತು.

12+1 ಸೀಟಿನ ಮ್ಯಾಕ್ಸಿ ಕ್ಯಾಬ್​ಗಳನ್ನು ಅನುಮತಿ ಇಲ್ಲದೆ 20+1 ನಿಂದ 25+1 ಸೀಟುಗಳವರೆಗೆ ಮಾರ್ಪಾಡು ಮಾಡಿ ಸಂಚರಿಸಲಾಗುತ್ತಿದೆ. ಇಂಥ ವಾಹನಗಳ ಮಾಲೀಕರು ಹೆಚ್ಚುವರಿ ಆಸನಗಳ ಬಗ್ಗೆ ನೋಂದಣಿ ಪುಸ್ತಕದಲ್ಲಿ ನಮೂದಿಸಿ ಹೊಸದಾಗಿ ರಹದಾರಿ ಪಡೆದು ನಿಯಮಬದ್ಧವಾಗಿ ಕಾರ್ಯಾಚರಣೆ ನಡೆಸುವಂತೆ ಸರ್ಕಾರ ಸೂಚಿಸಿದೆ.

ವಾಹನಗಳ ಮಾಲೀಕರು ಹೆಚ್ಚುವರಿ ಆಸನಗಳ ನೋಂದಣಿ ಬಗ್ಗೆ ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ತಮ್ಮ ಕೋರಿಕೆಯನ್ನು ಸಲ್ಲಿಸಿದ್ದಲ್ಲಿ ಅಂತಹ ವಾಹನಗಳ ನೋಂದಣಿ ಪ್ರಮಾಣಪತ್ರದಲ್ಲಿ ಮಾರ್ಪಾಡು ಮಾಡುವಂತೆ ಎಲ್ಲ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸರ್ಕಾರ ನಿರ್ದೇಶನ ಕೊಟ್ಟಿದೆ.

ಹೆಚ್ಚುವರಿ ಆಸನ ಅಳವಡಿಸಿಕೊಂಡಿರುವ ವಾಹನ ಮಾಲೀಕರು ವಾಹನಗಳನ್ನು ಸಕ್ರಮಗೊಳಿಸಿಕೊಳ್ಳಲು ಮುಂದೆ ಬಂದರೆ ನಿಯಮಬದ್ಧವಾಗಿ ನಿಗದಿಪಡಿಸಿರುವ ತೆರಿಗೆ ಕಟ್ಟಬೇಕಾಗುತ್ತದೆ. ಒಪ್ಪಂದದ ವಾಹನಗಳಿಗೆ ಪ್ರತಿ ಸೀಟಿಗೆ 1500 ರೂ. ತೆರಿಗೆ ನಿಗದಿಪಡಿಸಲಾಗಿದೆ. ಅದೇ ತೆರಿಗೆ ಮೊತ್ತವನ್ನು ಮ್ಯಾಕ್ಸಿ ಕ್ಯಾಬ್ ವಾಹನಗಳಿಗೂ ಪಾವತಿಸ ಬೇಕಾಗುತ್ತದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

15 ಸಾವಿರ ಅನಧಿಕೃತ ವಾಹನ

ಇತ್ತೀಚೆಗೆ ನಡೆದ ಬಜೆಟ್ ಪೂರ್ವ ಸಭೆಯಲ್ಲಿ 15 ಸಾವಿರ ಅನಧಿಕೃತ ವಾಹನಗಳ ಓಡಾಟ ವಿಚಾರ ಸಿಎಂ ಯಡಿಯೂರಪ್ಪ ಗಮನಕ್ಕೆ ಬಂದಿತ್ತು. ಸಿಎಂ ಸೂಚನೆ ಮೇರೆಗೆ ಆರ್​ಟಿಒ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಾಹನಗಳ ವಿರುದ್ಧ ಕಳೆದ 3 ದಿನಗಳಿಂದ ಕೇಸ್ ದಾಖಲಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net