ಅವಕಾಶ ಮನೆಬಾಗಿಲಿಗೆ ಬರುವುದಿಲ್ಲ

ಹುಣಸೂರು ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಈ ಸಾಲಿನ ವಿವಿಧ ಘಟಕಗಳನ್ನು ಶಾಸಕ ಜಿ.ಡಿ.ಹರೀಶ್‌ಗೌಡ ಉದ್ಘಾಟಿಸಿದರು. ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸಿಡಿಸಿ ಉಪಾಧ್ಯಕ್ಷ ಧರ್ಮಾಪುರ ನಾರಾಯಣ್, ಪ್ರಾಂಶುಪಾಲ ಡಾ.ಸುರೇಶ್, ಡಾ.ಉಮಾಕಾಂತ್, ಸಿ.ಕುಮಾರ್ ಮತ್ತು ವಿದ್ಯಾರ್ಥಿಗಳು ಇದ್ದಾರೆ.
ಹುಣಸೂರು ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಈ ಸಾಲಿನ ವಿವಿಧ ಘಟಕಗಳನ್ನು ಶಾಸಕ ಜಿ.ಡಿ.ಹರೀಶ್‌ಗೌಡ ಉದ್ಘಾಟಿಸಿದರು. ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸಿಡಿಸಿ ಉಪಾಧ್ಯಕ್ಷ ಧರ್ಮಾಪುರ ನಾರಾಯಣ್, ಪ್ರಾಂಶುಪಾಲ ಡಾ.ಸುರೇಶ್, ಡಾ.ಉಮಾಕಾಂತ್, ಸಿ.ಕುಮಾರ್ ಮತ್ತು ವಿದ್ಯಾರ್ಥಿಗಳು ಇದ್ದಾರೆ.
Published on

ಹುಣಸೂರು: ಸಾಮಾಜಿಕ ಜಾಲತಾಣಗಳ ಸದ್ಬಳಕೆ ಮಾಡಿಕೊಳ್ಳುವಲ್ಲಿ ಯುವಸಮೂಹ ವಿಫಲವಾಗುತ್ತಿದೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ವಿಷಾದ ವ್ಯಕ್ತಪಡಿಸಿದರು.

ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ 2024-25ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್‌ಕ್ರಾಸ್ ಚಟುವಟಿಕೆಗಳಿಗೆ ಚಾಲನೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಎಕ್ಸ್, ಫೇಸ್‌ಬುಕ್, ಇನ್ಸ್ಟಾಗ್ರಾಂ, ವ್ಯಾಟ್ಸ್‌ಅಪ್‌ನಂತಹ ಸಾಮಾಜಿಕ ಜಾಲತಾಣಗಳನ್ನು ಸತತವಾಗಿ ಬಳಸುತ್ತಿರುತ್ತಾರೆ. ಚಿತ್ರನಟರ ಫಾಲೋ ಕೂಡ ಮಾಡುತ್ತಾರೆ. ಆದರೆ ಅದೇ ತಾಣಗಳಲ್ಲಿ ಸಾಧಕರ, ಸಾಧನೆಗೈದ ಮಹನೀಯರನ್ನು ಫಾಲೋ ಮಾಡುವಲ್ಲಿ ವಿಫಲರಾಗುತ್ತಾರೆ ಎಂದು ವಿಷಾದಿಸಿದರು.

ಸರ್ಕಾರಿ ಉದ್ಯೋಗದ ಪರಿಕಲ್ಪನೆ ಸತ್ತಿದೆ: ಉದ್ಯೋಗವನ್ನರಸುವ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಧನೆಗೈದ ಮಹನೀಯರು ಉದ್ಯೋಗಾವಕಾಶಗಳ ಕುರಿತು, ಸಿಇಟಿ, ನೀಟ್, ಜೆಇಇ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕುರಿತು ಉಚಿತವಾಗಿ ತರಬೇತಿ ನೀಡುತ್ತಿರುತ್ತಾರೆ. ಇಂತಹ ಯಾವುದೇ ಪ್ರಮುಖ ವಿಷಯಗಳನ್ನು ಬಹುತೇಕ ವಿದ್ಯಾರ್ಥಿಗಳು ಫಾಲೋ ಮಾಡುವುದಿಲ್ಲ. ಸರ್ಕಾರಿ ಉದ್ಯೋಗ ಎನ್ನುವ ಪರಿಕಲ್ಪನೆ ಮುಂದಿನ ದಿನಗಳಲ್ಲಿ ಮಾಯವಾಗಲಿದೆ. ಅವಕಾಶ ನಿಮ್ಮ ಮನೆ ಬಾಗಿಲಿಗೆ ಬರುವುದಿಲ್ಲ, ಬದಲಾಗಿ ನೀವೇ ಕಂಡುಕೊಳ್ಳಬೇಕು. ಸ್ವಯಂ ಪ್ರಯತ್ನದಿಂದ ಮಾತ್ರ ಇದು ಸಾಧ್ಯ. ಈಗಿನ ಸರ್ಕಾರಗಳು ಎಲ್ಲವನ್ನೂ ಫ್ರೀಯಾಗಿ ನೀಡುತ್ತಿದ್ದೇವೆ ಎನ್ನುತ್ತಿರುವಾಗ ಉದ್ಯೋಗ ಸೃಷ್ಟಿ ಎಲ್ಲಿಂದ ಸಾಧ್ಯ? ಸತತ್ರ ಪರಿಶ್ರಮ, ಸಾಧಿಸುವ ಛಲ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ನಿಮ್ಮ ವ್ಯಕ್ತಿತ್ವವನ್ನು ಸಕಾರಾತ್ಮಕವಾಗಿ ವೃದ್ಧಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಪ್ರಧಾನ ಭಾಷಣ ಮಾಡಿ, ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ವೇದಿಕೆಯಾಗಿವೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಕ್ರಿಯಾಶೀಲ ಚಿಂತನೆಗಳು, ಸಕಾರಾತ್ಮಕ ಆಲೋಚನೆಗಳು ಹೆಚ್ಚಲು ವಿವಿಧ ಚಟುವಟಿಕೆಗಳಲಿ ಪಾಲ್ಗೊಳ್ಳುವುದು ಅಗತ್ಯ. ಕ್ರೀಡೆಗಳಲ್ಲಿ ಪಾಲ್ಗೊಂಡು ಸಾಧನೆಗೈದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಉದ್ಯೋಗ ಮೀಸಲಾತಿಯ ಸೌಲಭ್ಯ ಪಡೆಯಬಹುದು. ನಿಮ್ಮ ಭವಿಷ್ಯದ ಕುರಿತು ನಿರ್ಧಿಷ್ಟ ಗುರಿಯಿರಲಿ. ಗುರಿ ಸಾಧಿಸುವತ್ತ ಗುರುವಿನ ಸಹಕಾರದೊಂದಿಗೆ ನಿರಂತರ ಪ್ರಯತ್ನ, ಸಕಾರಾತ್ಮಕ ಚಿಂತನೆಗಳನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಎಲ್ಲಿಂದ ಬಂದಿರಿ ಎನ್ನುವುದನ್ನು ಗಮನಿಸುವುದಕ್ಕಿಂತ ಎಲ್ಲಿ ತಲುಪಿದ್ದೀರಿ ಎನ್ನುವುದು ಮುಖ್ಯವಾಗಲಿ. ಕೌಶಲ, ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ವ್ಯಾಸಂಗ ಮಾಡುವುದು ಕೇವಲ ಉದ್ಯೋಗಕ್ಕಾಗಿ ಎನ್ನುವ ಮನೋಭಾವ ತೊರೆದು ಜ್ಞಾನ ದಾಹಿಗಳಾಗಬೇಕು. ಎಲ್ಲದಕ್ಕೂ ಮುಖ್ಯವಾಗಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಲ್ಲಿ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದರು.

ಇದೇ ವೇಳೆ ಕಳೆದ ಸಾಲಿನಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಶಾಸಕ ಹರೀಶ್‌ಗೌಡ ಸನ್ಮಾನಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಧರ್ಮಾಪುರ ನಾರಾಯಣ್ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಸಿ.ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಐಕ್ಯುಎಸಿ ಸಂಚಾಲಕ ಡಾ.ಬಸವರಾಜ, ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ.ಆರ್.ಉಮಾಕಾಂತ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೈಹಿಕ ಶಿಕ್ಷಣ ನಿರ್ದೇಶಕ ಸಿ.ಕುಮಾರ್, ರೆಡ್‌ಕ್ರಾಸ್ ಸಂಚಾಲಕ ವಿ.ಸಂತೋಷ್, ಎನ್‌ಎಸ್‌ಎಸ್ ಸಂಚಾಲಕರಾದ ಜಿ.ಭೋಜರಾಜ್, ಎಂ.ವಿ.ಜಗದೀಶ್ ಇತರರು ಇದ್ದರು.

ಸುವರ್ಣ ಮಹೋತ್ಸವಕ್ಕೆ ಅಗತ್ಯ ಸಹಕಾರ: ಈ ಕಾಲೇಜು ಆರಂಭಗೊಂಡು 53 ವಸಂತಗಳು ಸಂದಿವೆ. 50ರ ಸಂಭ್ರಮದ ಸುವರ್ಣ ಮಹೋತ್ಸವವನ್ನು ಈಗಾಗಲೇ ಆಚರಿಸಬೇಕಿತ್ತು. ಕಾರಣಾಂತರಗಳಿಂದ ಸಾಧ್ಯವಾಗಿಲ್ಲ. ಹಾಗಾಗಿ ಸಿಡಿಸಿ ಸಮಿತಿ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಒಟ್ಟುಗೂಡಿ ಒಂದು ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆಗೆ ಕ್ರಮ ವಹಿಸಿರಿ. ಅದಕ್ಕೆ ಬೇಕಾದ ಎಲ್ಲ ಸಹಕಾರಗಳನ್ನು ನಾನು ನೀಡಲು ಸಿದ್ಧನಿದ್ದೇನೆ ಎಂದು ಶಾಸಕ ಹರೀಶ್‌ಗೌಡ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net