

ಹುಬ್ಬಳ್ಳಿ : ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಪ್ರಮುಖ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹ ಸಭೆ ನಗರದ ಖಾಸಗಿ ಹೋಟೆಲ್ ನಲ್ಲಿ ಶನಿವಾರ ಏರ್ಪಡಿಸಲಾಗಿತ್ತು.
ವೀಕ್ಷಕರಾಗಿದ್ದ ಬೆಂಗಳೂರು ಶಾಸಕ ರವಿ ಸುಬ್ರಮಣ್ಯಂ ಮಾತನಾಡಿ, ಧಾರವಾಡ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಸಂಘಟಿತ ಕಾರ್ಯಕರ್ತರ ಪಡೆ ಹೊಂದಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಎದುರು ಸ್ಪರ್ಧಿಸಲು ಪ್ರತಿಪಕ್ಷದಲ್ಲಿ ಅಭ್ಯರ್ಥಿಯೇ ಇಲ್ಲದಂತಾಗಿದೆ ಎಂದರು.
ನರೇಂದ್ರ ಮೋದಿ ಅವರು ಮೂರನೇ ಬಾರಿಯೂ ಪ್ರಧಾನಿ ಆಗಬೇಕೆಂದು ದೇಶದ ಜನರು ಬಯಸಿದ್ದಾರೆ. ಈ ಬಗ್ಗೆ ತೀರ್ವನವನ್ನೂ ಮಾಡಿರುವ ಜನರು, ಬಿಜೆಪಿ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಂತರ ಕ್ಷೇತ್ರದ ಪ್ರಮುಖರ ಅಭಿಪ್ರಾಯಗಳನ್ನು ರವಿ ಸುಬ್ರಮಣ್ಯಂ ಅವರು ಸಂಗ್ರಹಿಸಿದರು. ವಿಧಾನ ಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಶಾಸಕರಾದ ಸೀಮಾ ಮಸೂತಿ, ಅಶೋಕ ಕಾಟವೆ, ಲೋಕಸಭಾ ಕ್ಷೇತ್ರದ ಸಂಚಾಲಕ ಎಂ. ನಾಗರಾಜ, ಜಿಲ್ಲಾ ಅಧ್ಯಕ್ಷರಾದ ತಿಪ್ಪಣ್ಣ ಮಜ್ಜಗಿ, ನಿಂಗಪ್ಪ ಸುತಗಟ್ಟಿ, ಪ್ರಮುಖರಾದ ಡಾ. ಕ್ರಾಂತಿ ಕಿರಣ, ವಕ್ತಾರ ರವಿ ನಾಯಕ ಹಾಗೂ ಇತರರು ಉಪಸ್ಥಿತರಿದ್ದರು.