

ಹುಬ್ಬಳ್ಳಿ: ಇಂಜಿನಿಯರ್ ಮಸೂದೆ ಮಂಡನೆ ಕುರಿತು ಮೊದಲು ಕಾನೂನಾತ್ಮಕ ಅಭಿಪ್ರಾಯ ಸಂಗ್ರಹಿಸಲಾಗುವುದು. ನಂತರ ರಾಜ್ಯ ಸರ್ಕಾರ ಮತ್ತು ಸಂಬಂಧಿಸಿದ ಮಂಡಳಿಗಳ ಗಮನ ಸೆಳೆಯಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಭರವಸೆ ನೀಡಿದರು.
ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ ಹುಬ್ಬಳ್ಳಿ ಶಾಖೆ ವತಿಯಿಂದ ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಇಂಜಿನಿಯರ್ಸ್ ಡೇ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಟ್ಟಿಗೆ ನಿರ್ಮಾಣ ಪರವಾನಗಿ, ನಿರ್ಮಾಣ್-2 ಸಮಸ್ಯೆ ಪರಿಹಾರ ಕುರಿತು ಅಧಿಕಾರಿಗಳ ಸಭೆ ಕರೆದು ಚರ್ಚಿಸುವೆ. ಮಸೂದಗೆ ಸಂಬಂಧಿಸಿದಂತೆಯೂ ಚರ್ಚಿಸಲಾಗುವುದು. ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್)ಯನ್ನು ಸಾಮಾಜಿಕ ಅಭಿವೃದ್ಧಿಗೆ ಬಳಕೆ ಮಾಡಬೇಕು ಎಂದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರು, ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದವರು ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು. ಹುಬ್ಬಳ್ಳಿ ಶಾಖೆಯ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.
ಮಣಕವಾಡದ ಶ್ರೀ ಗುರು ಅಭಿನವ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ ಹುಬ್ಬಳ್ಳಿ ಶಾಖೆ ಅಧ್ಯಕ್ಷೆ ದೇವಕಿ ಜಿ. ಅಧ್ಯಕ್ಷತೆ ವಹಿಸಿದ್ದರು.
ಮೇಯರ್ ವೀಣಾ ಬರದ್ವಾಡ, ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಇಸ್ರೋ ವಿಜ್ಞಾನಿ ಸುಧೀಂದ್ರ ಬಿಂದಗಿ, ಜೆಎಸ್‌ಡಬ್ಲುೃ ಉಪಾಧ್ಯಕ್ಷೆ ಲೋಪಮುದ್ರ ಸೇನಗುಪ್ತಾ, ರೀಜನಲ್ ಹೆಡ್ ಶ್ರೀವತ್ಸವ ಎಸ್., ಪ್ರದೀಪ ಕೆ. ಶೆಟ್ಟಿ, ಅಶೋಕ ಬಸವಾ, ಶ್ರೀಕಾಂತ ಪಾಟೀಲ, ಎನ್.ಎ. ಖಾತೆವಾಡಿ, ವಸಂತ ಪಾಲನಕರ, ಆದರ್ಶ ಗುಪ್ತಾ ಇತರರು ಇದ್ದರು.