

ಬೇಲೂರು: ವಿಶ್ವ ವಿಖ್ಯಾತ ಬೇಲೂರಿನ ಅಭಿವೃದ್ಧಿ ಹಿನ್ನೆಲೆಯಲ್ಲಿ ಹೈಟೆಕ್ ಮಾದರಿಯ ಬಸ್ ನಿಲ್ದಾಣ ನಿರ್ಮಿಸಲು ಜನಾಭಿಪ್ರಾಯ ಪಡೆದು ಕಾಮಗಾರಿಗೆ ಮುಂದಾಗುತ್ತೇನೆ ಹೊರತು, ಟೀಕೆ ಟಿಪ್ಪಣಿ, ವಿರೋಧಕ್ಕೆ ಕಿವಿಗೊಡುವುದಿಲ್ಲ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದಾಸೋಹ ಭವನದಲ್ಲಿ ಬೇಲೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೈಟೆಕ್ ಬಸ್ ನಿಲ್ದಾಣ ಕುರಿತು ಚರ್ಚಿಸಲು ಕರೆದಿದ್ದ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಪೂರ್ವದಲ್ಲೇ ಬೇಲೂರಿನ ಸಮಗ್ರ ಅಭಿವೃದ್ಧಿ ಬಗ್ಗೆ ಕನಸು ಕಂಡಿರುವ ಬಗ್ಗೆ ತಿಳಿಸಿದ್ದೆ. ಅದರಂತೆ ಬೇಲೂರು-ಹಳೇಬೀಡು ಅಭಿವೃದ್ಧಿಗಾಗಿ ವಿಧಾನಸಭೆಯಲ್ಲಿ ಚರ್ಚಿಸಿದ್ದಲ್ಲದೆ, ಸಚಿವರಲ್ಲಿ ಮನವಿ ಸಲ್ಲಿಸಿದ್ದರಿಂದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಗರಾಭಿವೃದ್ಧಿ ಸಚಿವರು ಸಹ ಹೈಟೆಕ್ ಮಾದರಿಯ ನೂತನ ಬಸ್ ನಿಲ್ದಾಣ ನಿರ್ಮಿಸಲು 5 ಕೋಟಿ ರೂ. ನೀಡಿದ್ದರಿಂದ ಜನಾಭಿಪ್ರಾಯ ಪಡೆಯಲು ಸಾರ್ವಜನಿಕರ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.
ಬಸ್ ನಿಲ್ದಾಣಕ್ಕೆ ಇನ್ನೂ ಯಾವುದೇ ಶಾಶ್ವತ ಜಾಗ ಗುರುತಿಸಿಲ್ಲ. ಸಾರ್ವಜನಿಕರು ನೀಡುವ ಸಲಹೆ ಮೇರೆಗೆ ನಿರ್ಮಾಣಕ್ಕೆ ಮುಂದಾಗಲಿದ್ದೇವೆ. ಜತೆಗೆ ಕೆಲವರು ಈಗಿರುವ ಬಸ್ ನಿಲ್ದಾಣವನ್ನೇ ಹೈಟೆಕ್ ಮಾಡಿ ಎಂದಿದ್ದಾರೆ. ಮತ್ತು ಸಮೀಪದ ಹನುಮಂತ ನಗರ, ದಮಯಂತಿ ಹೊಂಡ, ಸೂರಾಪುರ ಸಮೀಪದ ಯಗಚಿ ಜಲಾಶಯಕ್ಕೆ ಸೇರಿದ ಜಾಗ ಮತ್ತು ರಾಯಾಪುರದ ಜಾಗದ ಬಗ್ಗೆ ತಿಳಿಸಿದ್ದಾರೆ. ಹೀಗಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಪಂ ಮಾಜಿ ಸದಸ್ಯ ಸಿ.ಎಸ್.ಪ್ರಕಾಶ್ ಮಾತನಾಡಿ, ಈಗಿರುವ ಬಸ್ ನಿಲ್ದಾಣ ಅಗಲೀಕರಣ ಅಸಾಧ್ಯ. ಬೇಲೂರಿನ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಪಟ್ಟಣದ ಹೊರಗೆ ಬಸ್ ನಿಲ್ದಾಣ ನಿರ್ಮಿಸಲು ರಾಯಾಪುರದ ಸ್ಥಳ ಸೂಕ್ತವಾಗಿದೆ. ಈಗಾಗಲೇ ಬೈಪಾಸ್ ರಸ್ತೆ ಪ್ರಗತಿಯಿಂದ ಬೇಲೂರು ಅಭಿವೃದ್ಧಿಯಲ್ಲಿ ಕೂಡ ವಿಸ್ತರಣೆಯಾಗಲಿದೆ ಎಂದರು.
ಮುಖ್ಯರಸ್ತೆ ವರ್ತಕರ ಸಂಘದ ಅಧ್ಯಕ್ಷ ಉಮಾಶಂಕರ್, ಬಿಜೆಪಿ ಮುಖಂಡ ಜೆ ಕೆ.ಕುಮಾರ್, ಪಿಎಲ್‌ಡಿ ಬ್ಯಾಂಕ್ ಮಾಜಿ ಸದಸ್ಯ ದೇವರಾಜ್ ಮಾತನಾಡಿದರು. ತಹಸೀಲ್ದಾರ್ ಎಂ.ಮಮತಾ, ತಾಪಂ ಇಒ ಸತೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ, ಪುರಸಭೆ ಮುಖ್ಯಾಧಿಕಾರಿ ಸುಜಯ್ ಕುಮಾರ್, ಕೆಎಸ್‌ಆರ್‌ಟಿಸಿ ಚಿಕ್ಕಮಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಕುಮಾರ್, ವಿಭಾಗೀಯ ಸಂಚಾರ ಅಧಿಕಾರಿ ಚನ್ನಬಸಪ್ಪ, ಕಿರಿಯ ಅಭಿಯಂತರ ಅರವಿಂದ, ಚನ್ನಕೇಶವಸ್ವಾಮಿ ದೇಗುಲ ಇಒ ಯೋಗೀಶ್, ಮುಖಂಡರಾದ ಸ್ವಾಮಿಗೌಡ, ಭೋಗ ಮಲ್ಲೇಶ್, ಚಂದ್ರಶೇಖರ್, ಭೋಜೇಗೌಡ, ಎಸ್.ಎಂ.ರಾಜು ಇತರರಿದ್ದರು.