

ಜೊಯಿಡಾ: ಪರಿಸರ ಸೂಕ್ಷ್ಮ ಪ್ರದೇಶ ನಿಯಮ ಜಾರಿಯಿಂದ ತಾಲೂಕಿಗೆ ಅನ್ಯಾಯವಾಗಲಿದೆ. ಈ ಕುರಿತು ಸರ್ಕಾರದ ಗಮನ ಸೆಳೆಯುವ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿದೆ ಎಂದು ಕಾಳಿ ಬ್ರಿಗೇಡ್ ಮುಖ್ಯ ಸಂಚಾಲಕ ಸುನೀಲ ದೇಸಾಯಿ ತಿಳಿಸಿದರು.
ತಾಲೂಕಿನ ಕುಣಬಿ ಸಮಾಜ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನ 87 ಹಳ್ಳಿಗಳು ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಬರುತ್ತವೆ. ಕರಡು ಅದಿಸೂಚನೆ ಘೊಷಣೆಯಾಗಿ 60 ದಿನದೊಳಗೆ ತಕರಾರು ಸಲ್ಲಿಸಲು ಅವಕಾಶವಿದೆ. ಪ್ರತಿ ಗ್ರಾಮ ಪಂಚಾಯಿತಿಗೆ ಲಿಖಿತವಾಗಿ ತಕರಾರು ಸಲ್ಲಿಸುವುದಕ್ಕೆ ಅವಕಾಶ ಇದೆ. ಎಲ್ಲರ ಸಹಕಾರದಿಂದ ಮಾತ್ರ ಈ ಸಮಸ್ಯೆಯಿಂದ ಪಾರಾಗುವುದು ಸಾಧ್ಯವಿದೆ ಎಂದರು.
ನಮಗಾಗುವ ಅನ್ಯಾಯದ ಬಗ್ಗೆ ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಮಾತ್ರವೇ ಈ ಸಭೆ ನಡೆಸಲಾಗುತ್ತಿದೆ ಹೊರತು ಯಾವುದೇ ಸರ್ಕಾರದ ಪರ-ವಿರೋಧದ ಸಭೆ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕಿಸಾನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿ ರೇಡ್ಕರ ಮಾತನಾಡಿ, ಮೊದಲು ಊರು ಮುಖ್ಯ. ನಂತರ ರಾಜಕೀಯ. ಪರಿಸರ ರಕ್ಷಣೆ ಹೆಸರಿನಲ್ಲಿ ಜೊಯಿಡಾ ತಾಲೂಕಿಗೆ ಆಗುತ್ತಿರುವ ಅನ್ಯಾಯವನ್ನು ಪ್ರಶ್ನಿಸಬೇಕಾಗಿದೆ. ಜನ ಸುಮ್ಮನೆ ಕುಳಿತರೆ ಇನ್ನಷ್ಟು ಸಮಸ್ಯೆ ಎದುರಾಗಲಿದೆ ಎಂದರು.
ಗೊಪಾಲ ಭಟ್ಟ ಶಿವಪುರ ಮಾತನಾಡಿ, ಒಂದು ನಿಯೋಗ ಹೋಗಿ ಅರಣ್ಯ ಸಚಿವರನ್ನು ಭೇಟಿ ಮಾಡಿ ನಮಗೆ ಆಗುವ ಸಮಸ್ಯೆ ಬಗ್ಗೆ ರ್ಚಚಿಸುವ ಕೆಲಸ ಮಾಡೋಣ ಮತ್ತು ಇಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸುವ ಕಾರ್ಯವನ್ನೂ ಮಾಡೋಣ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಯ ದೇಸಾಯಿ ಮಾತನಾಡಿ, ಅಧಿಸೂಚನೆ ಜಾರಿಯಾದರೆ ತಾಲೂಕಿನ ಜನರಿಗೆ ಸಾಕಷ್ಟು ತೊಂದರೆಯಾಗಲಿದೆ. ತಾಲೂಕಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಪಕ್ಷಾತೀತವಾಗಿ ಹೋರಾಟ ಮಾಡುವುದಕ್ಕೆ ನಮ್ಮ ಬೆಂಬಲ ಇದೆ ಎಂದರು.
ನಂತರ ಎಲ್ಲರ ಅಭಿಪ್ರಾಯ ಪಡೆದು ಮುಂದಿನ ದಿನದಲ್ಲಿ ವಿಶೇಷ ಗ್ರಾಮ ಸಭೆ ಮಾಡಿ ಅಧಿಸೂಚನೆ ಕರಡು ಜಾರಿಯಾಗುವುದಕ್ಕೆ ವಿರೋಧಿಸುವುದು, ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಪತ್ರಕರ್ತರು, ಮುಖಂಡರು, ಅಧ್ಯಕ್ಷ, ಪದಾಧಿಕಾರಿಗಳು, ಸಾರ್ವಜನಿಕರ ಜತೆಗೆ ಪಕ್ಷಾತೀತವಾಗಿ ಸೇರಿ ಬೃಹತ್ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ಉಮೇಶ್ ವೇಳಿಪ, ಸತೀಶ ನಾಯ್ಕ, ಕಿರಣ ನಾಯ್ಕ, ಸಮೀರ ಮುಜಾವರ, ಪ್ರಭಾಕರ ನಾಯ್ಕ, ನಾರಾಯಣ ಹೆಬ್ಬಾರ, ದಿನೇಶ ದೇಸಾಯಿ, ಕೆ.ಎಲ್.ನಾಯ್ಕ, ಅರೀಷ ಖಾದರ ಮುಂತಾದವರು ಉಪಸ್ಥಿತರಿದ್ದರು.