

ಸಿದ್ದಾಪುರ: ವಿರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಕಾವಾಡಿ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಅಂತ್ಯಗೊಂಡಿದೆ.
ಕಳೆದ ಕೆಲವು ದಿನಗಳಿಂದ ಇಲ್ಲಿನ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಕಾಫಿ ಫಸಲು ನಾಶಪಡಿಸುವುದರೊಂದಿಗೆ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಒತ್ತಾಯ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ವಿರಾಜಪೇಟೆ ವಲಯ ಉಪ ವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಹಾಗೂ ಎಸಿಎಫ್ ಗೋಪಾಲ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಶಿವರಾಂ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಪಟಾಕಿ ಸಿಡಿಸಿ ಆನೆಗಳನ್ನು ಅಟ್ಟಿಸಲು ಮುಂದಾದರು. ಈ ವೇಳೆ ಕೆಲ ಆನೆಗಳು ಸಿಬ್ಬಂದಿ ಮೇಲೆ ದಾಳಿಗೆ ಮುಂದಾದವು.
ಕಾರ್ಯಾಚರಣೆ ನಡೆಸುವ ಸಂದರ್ಭ ಕಾಫಿ ತೋಟದಿಂದ 19 ಕಾಡಾನೆಗಳ ಹಿಂಡು ಕಾಡಿನತ್ತ ತೆರಳುವ ಸಂದರ್ಭ ಹಳೆಯ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದು ತಂತಿ ನೆಲಕ್ಕೆ ಬಿದ್ದಿದೆ. ಈ ಸಂದರ್ಭ ಕಾಡಾನೆಗಳ ಹಿಂಡಿನಲ್ಲಿದ್ದ ಮರಿಯೊಂದು ತಂತಿಗೆ ಸಿಲುಕಿ ಕೆಳಕ್ಕೆ ಬಿದ್ದಿತು. ವಲಯ ಅರಣ್ಯ ಅಧಿಕಾರಿ ಶಿವರಾಂ ತಕ್ಷಣ ಕರೆ ಮಾಡಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದರು. ಇದರಿಂದಾಗಿ ಮರಿಯಾನೆ ಪ್ರಾಣಾಪಾಯದಿಂದ ಪಾರಾಗಿದೆ. ಅಲ್ಲದೆ ವಲಯ ಅರಣ್ಯ ಅಧಿಕಾರಿ ಶಿವರಾಂ ಹಾಗೂ ಸಿಬ್ಬಂದಿ ಕೂಡ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾಡಾನೆಗಳ ಗುಂಪಿನಲ್ಲಿದ್ದ ಸಲಗವೊಂದು ಕಾರ್ಯಾಚರಣೆ ತಂಡದ ಉಪವಲಯ ಅಧಿಕಾರಿ ಸಂಜೀತ್ ಸೋಮಯ್ಯ ಹಾಗೂ ಆನೆ ಕಾರ್ಯಪಡೆ ಸಿಬ್ಬಂದಿ ಪೊನ್ನಣ್ಣ ಅವರ ಮೇಲೆ ಎರಡು ಬಾರಿ ದಾಳಿ ನಡೆಸಲು ಮುಂದಾಗಿತ್ತು. ಮಳೆಯ ನಡುವೆ ಮಾಲ್ದಾರೆ ಭಾಗದ ಅರಣ್ಯದ ಕಡೆಗೆ ಅಟ್ಟಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಉಪವಲಯ ಅರಣ್ಯ ಅಧಿಕಾರಿ ಸಂಜೀತ್ ಸೋಮಯ್ಯ, ರಾಘವ, ದೇವರಾಜ್, ಶ್ರೀನಿವಾಸ್, ಲೋಕೇಶ್, ತಿತಿಮತಿ ವಿರಾಜಪೇಟೆ ಹಾಗೂ ಅಮ್ಮತ್ತಿಯ ಆರ್‌ಆರ್‌ಟಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.