

ಶಿವಮೊಗ್ಗ: ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಮೂರು ತಿಂಗಳು ಕಳೆದಿದ್ದರೂ ಅಭಿವೃದ್ಧಿ ಕಾರ್ಯಗಳು ಆರಂಭವಾಗಿಲ್ಲ. ಅವರು ಕೇವಲ ಗ್ಯಾರಂಟಿಗಳನ್ನು ಜಾರಿಗೆ ತರುವುದರಲ್ಲೇ ಮಗ್ನರಾಗಿದ್ದಾರೆ. ಆಡಳಿತದ ದೌರ್ಬಲ್ಯ ಮರೆಮಾಚಲು ಈಗ ಆಪರೇಷನ್ ವದಂತಿ ಹಬ್ಬಿಸುತ್ತಿದ್ದಾರೆ. ಅವರ ಆಮಿಷಕ್ಕೆ ನಮ್ಮ ಪಕ್ಷದ ಯಾವ ಜಿಲ್ಲಾ ಮುಖಂಡರೂ ಬಲಿಯಾಗುವುದಿಲ್ಲ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಕುಮಾರ್ ಬಂಗಾರಪ್ಪ ರಾಜಕೀಯದಲ್ಲಿ ಸಾಕಷ್ಟು ಅನುಭವ ಹೊಂದಿದವರು. ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರಬಹುದು. ಹಾಗೆಂದ ಮಾತ್ರಕ್ಕೆ ಅವರು ಕಾಂಗ್ರೆಸ್‌ಗೆ ಹೋಗುತ್ತಾರೆ ಎಂದು ಹೇಳುವುದು ತಪ್ಪು. ನಾನೂ ಸಿಎಂ, ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿದ್ದೇನೆ. ಇದೆಲ್ಲವೂ ಕಾಂಗ್ರೆಸ್‌ನವರ ವದಂತಿಯಷ್ಟೇ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸರ್ಕಾರಗಳು ಬದಲಾಗುವುದು ಸಹಜ. ಹಾಗೆಂದು ಅದರಿಂದ ಜನರ ಮೇಲೆ ದುಷ್ಪರಿಣಾಮ ಬೀರಬಾರದು. ಶಿಕ್ಷಣ ಸಚಿವರು ರಾಷ್ಟ್ರೀಯ ಶಿಕ್ಷಣ ನೀತಿಯನ್ನೇ ರದ್ದುಪಡಿಸುವುದಾಗಿ ಹೇಳಿದ್ದಾರೆ. ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಅವರು ಸ್ವಾತಂತ್ರೃ ಹೋರಾಟಗಾರರ ಬಗ್ಗೆ ನೀಡಿದ್ದ ಹೇಳಿಕೆಯನ್ನು ಗಮನಿಸಿದರೆ ಖೇದ ಎನಿಸುತ್ತದೆ. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆಯೂ ಆತಂಕ ಉಂಟಾಗಿದೆ ಎಂದರು.