ಸಾಕಾನೆ ಸಹಾಯದಿಂದ ಹುಲಿ ಸೆರೆಗೆ ಕಾರ್ಯಾಚರಣೆ

23 gkp 001
ಗೋಣಿಕೊಪ್ಪದ ಸುಳುಗೋಡಿನಲ್ಲಿ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿ.
Published on

ಗೋಣಿಕೊಪ್ಪಲು: ರೈತರ ಜಾನುವಾರನ್ನು ಬಲಿ ತೆಗೆದುಕೊಂಡಿದ್ದ ಹುಲಿಯನ್ನು ಅರಣ್ಯಕ್ಕೆ ಅಟ್ಟುವ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಸಾಕಾನೆಗಳ ಸಹಾಯದಿಂದ ಹುಲಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಬಾಳೆಲೆ ಹೋಬಳಿಯ ಸುಳುಗೋಡು ಗ್ರಾಮದ ರೈತರಾದ ಮುದ್ದಿಯಡ ದಿನೇಶ್ ಎಂಬುವರಿಗೆ ಸೇರಿದ 2 ಹಸುವನ್ನು ಕೆಲವು ದಿನಗಳ ಹಿಂದೆ ಹುಲಿ ಬೇಟೆಯಾಡಿ ಕೊಂದು ಹಾಕಿತ್ತು. ಈ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರಾದ ಸಂಕೇತ್ ಪೂವಯ್ಯ ಭೇಟಿ ನೀಡಿ ಹುಲಿ ಕಾರ್ಯಾಚರಣೆಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

ರೈತರ ಕಾಫಿ ತೋಟ ಹಾಗೂ ಭತ್ತದ ಗದ್ದೆಗಳು ಅರಣ್ಯ ಅಂಚಿನಲ್ಲಿರುವುದರಿಂದ ಹುಲಿಯು ಅರಣ್ಯದಿಂದ ಆಗಮಿಸಿರುವ ಬಗ್ಗೆ ಮಾಹಿತಿ ತಿಳಿದ ಅರಣ್ಯ ಅಧಿಕಾರಿಗಳು ಹುಲಿಯನ್ನು ಮತ್ತೆ ಕಾಡಿಗೆ ಅಟ್ಟುವ ನಿಟ್ಟಿನಲ್ಲಿ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ.

ಮತ್ತಿಗೋಡು ಸಾಕಾನೆ ಶಿಬಿರದಲ್ಲಿರುವ ಅಭಿಮನ್ಯು ಹಾಗೂ ಶ್ರೀಕಂಠ ಎಂಬ ಸಾಕಾನೆಯ ಸಹಾಯ ಪಡೆದ ಅರಣ್ಯ ಸಿಬ್ಬಂದಿ ಸುಳುಗೋಡು ಗ್ರಾಮದ ಆಯಾಕಟ್ಟಿನ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿ ಹುಲಿಯನ್ನು ಕಾಡಿಗೆ ಅಟ್ಟುವ ಕೆಲಸಕ್ಕೆ ಮುಂದಾಗಿದ್ದಾರೆ.

ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರಾದ ಸಂಕೇತ್ ಪೂವಯ್ಯ ಕಾರ್ಯಚರಣೆ ಸ್ಥಳಕ್ಕೆ ಖುದ್ದಾಗಿ ತೆರಳಿ ಸಿಬ್ಬಂದಿ ನಡೆಸುತ್ತಿರುವ ಹುಲಿ ಕಾರ್ಯಾಚರಣೆಯನ್ನು ಪರಿಶೀಲಿಸಿದರು. ಅರಣ್ಯದ ಅಂಚಿನಲ್ಲಿ ಹುಲಿಯ ಸಂಚಾರವಿರುವ ಬಗ್ಗೆ ಮಾಹಿತಿ ಲಭ್ಯವಿರುವುದರಿಂದ ಹುಲಿಯನ್ನು ಅಲ್ಲಿಂದ ಅರಣ್ಯಕ್ಕೆ ಅಟ್ಟುವ ಕೆಲಸ ನಡೆಸಲು ಸೂಚನೆ ನೀಡಿದರು.

ಹುಲಿಯ ಕಾರ್ಯಾಚರಣೆ ಕೈಗೊಂಡಿರುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ.ಅರಣ್ಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಇಲ್ಲಿಯೇ ಮೊಕ್ಕಾಂ ಹೂಡುವ ಮೂಲಕ ಹುಲಿ ಕಾಡಿಗೆ ಅಟ್ಟುವ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.

ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿದೇರಿರ ನವೀನ್, ನಿಟ್ಟೂರು ಜೋನಾಲ್ ಕಾಂಗ್ರೆಸ್‌ನ ಅಧ್ಯಕ್ಷರಾದ ಪೊರಂಗಡ ಪವನ್ ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net