

ಅರವಿಂದ ಅಕ್ಲಾಪುರ ಶಿವಮೊಗ್ಗ
ವಿಧಾನ ಪರಿಷತ್ ನೈಋತ್ಯ ಕ್ಷೇತ್ರದ ಪದವೀಧರರು ಸತತ 7ನೇ ಬಾರಿಗೆ ಶಿವಮೊಗ್ಗಕ್ಕೆ ಜೈ ಎಂದಿದ್ದು, ಬಿಜೆಪಿಯ ಬೆನ್ನಿಗೆ ನಿಂತಿದ್ದಾರೆ. ಇದರೊಂದಿಗೆ ಬಿಜೆಪಿ ಕೋಟೆಯನ್ನು ಮತ್ತಷ್ಟು ಭದ್ರಪಡಿಸಿದ್ದಾರೆ.
ಮೊದಲ ಬಾರಿ ಚುನಾವಣಾ ಅಖಾಡಕ್ಕಿಳಿದ ಡಾ. ಧನಂಜಯ ಸರ್ಜಿ ದೊಡ್ಡ ಗೆಲುವು ದಾಖಲಿಸುವ ಮೂಲಕ ಪಕ್ಷದ ನಾಯಕರ ತೀರ್ಮಾನ ಸರಿ ಎಂಬ ಸಂದೇಶ ರವಾನಿಸಿದ್ದಾರೆ.
ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಈ ಕ್ಷೇತ್ರದಲ್ಲಿ ಹಾಕಿಕೊಟ್ಟ ಭದ್ರ ಬುನಾದಿ ಮೇಲೆ ಸತತವಾಗಿ ಕಮಲ ಅರಳಿದೆ. 2018ರಲ್ಲಿ ಡಿಎಚ್‌ಎಸ್ ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳಿದ ಬಳಿಕ ಬಿಜೆಪಿಯಿಂದ ಸ್ಪರ್ಧೆ ಮಾಡಿದ ಆಯನೂರು ಮಂಜುನಾಥ್‌ಗೂ ಕ್ಷೇತ್ರ ಕೈ ಹಿಡಿಯಿತು. ಈಗ ಹೊಸ ಮುಖ ಡಾ.ಸರ್ಜಿ ಅವರನ್ನೂ ಇಲ್ಲಿನ ಮತದಾರರು ಗೆಲುವಿನ ದಡ ಸೇರಿಸಿದ್ದಾರೆ. ಆ ಮೂಲಕ ಸತತವಾಗಿ ಶಿವಮೊಗ್ಗದ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಿದ್ದಾರೆ.
ಆರು ಜಿಲ್ಲೆಗಳ ವ್ಯಾಪ್ತಿಯ 30 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಹಾಗೂ ಕಾಂಗ್ರೆಸ್ ಸಮಬಲವನ್ನು ಹೊಂದಿರುವುದರಿಂದ ರೋಚಕ ಹಣಾಹಣಿ ನಿರೀಕ್ಷೆಯಿತ್ತು. ಪದವೀಧರ ಕ್ಷೇತ್ರ ಮಲೆನಾಡಿಗೆ, ಶಿಕ್ಷಕರ ಕ್ಷೇತ್ರ ಕರಾವಳಿಗೆ ಎಂಬ ಬಿಜೆಪಿಯಲ್ಲಿನ ಅಲಿಖಿತ ನಿಯಮ ಮೀರಿದ್ದರಿಂದ ಕರಾವಳಿ ಮತದಾರರು ಬಿಜೆಪಿ ಕೈ ಹಿಡಿಯುವವರೇ ಎಂಬ ಪ್ರಶ್ನೆಯೂ ಎದುರಾಗಿತ್ತು.
ಶಾಸಕರ ಸಂಖ್ಯಾಬಲದ ದೃಷ್ಟಿಯಿಂದ ಹೋಲಿಸಿದರೆ ಇದು ಸಮಬಲದ ಹೋರಾಟ. ಆದರೆ ರಾಜಕಾರಣದ ಒಳೇಟು, ಮುಖಂಡರು ತಟಸ್ಥರಾಗಿ ಉಳಿಯುವುದು, ಅಸಮಾಧಾನಿತರು ಚುನಾವಣೆಯಿಂದ ದೂರವುಳಿಯುವುದು ಇವೆಲ್ಲವೂ ಬಿಜೆಪಿ ಪಾಲಿಗೆ ಸಮಸ್ಯೆ ಆಗಬಲ್ಲದು ಎಂಬ ಅನುಮಾನವಿತ್ತು. ಈಗ ಫಲಿತಾಂಶ ಪ್ರಕಟವಾದ ಮೇಲೆ ಗೊಂದಲಗಳಿಗೆ ವಿರಾಮ ಬಿದ್ದಿದೆ.
ವರ್ಷದಲ್ಲಿ ಎರಡನೇ ಸೋಲು:ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ಪರಿಷತ್ ಪ್ರವೇಶ ಸುಲಭ ಎಂಬ ಆಯನೂರು ಮಂಜುನಾಥ್ ನಿರೀಕ್ಷೆ ಹುಸಿಯಾಗಿದೆ. ಕಳೆದ ವರ್ಷ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತಿದ್ದ ಅವರಿಗೆ ಇದೀಗ ಎರಡನೇ ಸೋಲು ಬಂದರೆಗಿದೆ. ಮತ ಎಣಿಕೆಯ ಯಾವ ಹಂತದಲ್ಲೂ ಗಮನಸೆಳೆಯದ ಆಯನೂರು ಅವರಿಗೆ ಹೀನಾಯ ಸೋಲು ಅಚ್ಚರಿ ಮೂಡಿಸಿರಬಹುದು. ವಿಶೇಷವೆಂದರೆ ಅವರ ಸೋಲಿಗೆ ಬಂಡಾಯ ಅಭ್ಯರ್ಥಿ ಎಸ್.ಪಿ.ದಿನೇಶ್ ಕೂಡಾ ಕಾರಣರಾಗಲಿಲ್ಲ. ಬಿಜೆಪಿ ಭದ್ರಕೋಟೆಯಲ್ಲಿ ಕಾಂಗ್ರೆಸ್ ಅನ್ನು ಮತದಾರರು ತಿರಸ್ಕರಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.
ದಿನೇಶ್ ಮತಗಳೆಲ್ಲಿ?:ಚುನಾವಣೆಗೆ ವರ್ಷಕ್ಕೂ ಮೊದಲೇ ಪ್ರಚಾರ ಆರಂಭಿಸಿ ಪಕ್ಷದ ಟಿಕೆಟ್ ಸಿಗದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿದ್ದ ಎಸ್.ಪಿ.ದಿನೇಶ್ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಅವರು ಕನಿಷ್ಠ 15 ಸಾವಿರ ಮತ ಪಡೆಯಬಹುದೆಂಬ ಅಂದಾಜಿತ್ತು. ಹಿಂದಿನ ಎರಡು ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಸೋತಿದ್ದರಿಂದ ಗಂಭೀರ ಸ್ಪರ್ಧೆ ನಿರೀಕ್ಷಿಸಲಾಗಿತ್ತು. ಆದರೆ ಅವರು ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ.
ಭಟ್ಟರ ಕೈ ಹಿಡಿಯದ ಕರಾವಳಿ:ಉಡುಪಿ ಮಾಜಿ ಶಾಸಕ ಕೆ.ರಘುಪತಿ ಭಟ್ ಪಕ್ಷೇತರರಾಗಿ ಸ್ಪರ್ಧಿಸಿದ ಕಾರಣ ಬಿಜೆಪಿ ಮತ ಸೆಳೆಯುತ್ತಾರೆಂಬ ಲೆಕ್ಕಾಚಾರವಿತ್ತು. ಕಡೇ ಪಕ್ಷ ಕರಾವಳಿಯ ಮತದಾರರು ಅವರ ಕೈ ಹಿಡಿಯುತ್ತಾರೆಂಬ ನಿರೀಕ್ಷೆಯಿತ್ತು. ಅದೆಲ್ಲವೂ ಹುಸಿಯಾಗಿದೆ. ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಭಟ್ಟರ ಪರ ನಿಂತಿದ್ದು, ಬಿಜೆಪಿಯಲ್ಲಿನ ಆಂತರಿಕ ಬೆಳವಣಿಗೆಗಳಿಂದ ಬೇಸತ್ತ ಕೆಲ ಮುಖಂಡರು, ಕಾರ್ಯಕರ್ತರು ಭಟ್ಟರೊಂದಿಗೆ ಕೈ ಜೋಡಿಸಿದ್ದರು. ಆದರೆ ಇದ್ಯಾವುದೂ ಹೆಚ್ಚು ಕೆಲಸ ಮಾಡಲಿಲ್ಲ. ರಘುಪತಿ ಭಟ್ ಮೂರನೇ ಸ್ಥಾನದಲ್ಲಿ ಉಳಿಯುವಂತಾಯಿತು.
ಮತದಾರರ ಮುನಿಸು:ಕಳೆದ ಚುನಾವಣೆಯಲ್ಲಿ ಆಯನೂರು ಮಂಜುನಾಥ್ ಅವರನ್ನು ಗೆಲ್ಲಿಸಿದ್ದ ನೈಋತ್ಯ ಮತದಾರರು ಈ ಚುನಾವಣೆಯಲ್ಲಿ ತಿರಸ್ಕರಿಸಲು ಆಯನೂರು ರಾಜಕೀಯ ನಡೆಯೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಪರಿಷತ್ ಸದಸ್ಯನಾಗುವುದರಿಂದ ಪರಿಣಾಮಕಾರಿ ಕೆಲಸ ಸಾಧ್ಯವಿಲ್ಲ. ಹೀಗಾಗಿ ಶಾಸನ ರೂಪಿಸುವ ಅಧಿಕಾರವಿರುವ ವಿಧಾನಸಭೆ ಶಾಸಕ ಸ್ಥಾನ ಬೇಕು. ಹೀಗಾಗಿ ಪರಿಷತ್‌ಗೆ ರಾಜೀನಾಮೆ ನೀಡಿ ವಿಧಾನಸಭೆಗೆ ಸ್ಪರ್ಧಿಸುತ್ತೇನೆ ಎಂದು ಏಕಾಏಕಿ ಆಯನೂರು ಘೋಷಿಸಿದ್ದರು. ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತರು. ಆನಂತರ ಕಾಂಗ್ರೆಸ್ ಸೇರಿ ಪರಿಷತ್ ಟಿಕೆಟ್ ಪಡೆದರು. ಈ ಸಂಗತಿ ಮತದಾರರ ಮೇಲೆ ಪರಿಣಾಮ ಬೀರಿದ್ದಂತೂ ಸುಳ್ಳಲ್ಲ.