ಉಗ್ರವಾದದ ವಿರುದ್ಧ ಆಪರೇಶನ್ ಸಿಂದೂರ ಯಶಸ್ವಿ

Published on

ಮಂಗಳೂರು: ಪಾಕ್ ಉಗ್ರವಾದದ ವಿರುದ್ಧ ಭಾರತದ ಆಪರೇಶನ್ ಸಿಂದೂರ ಯಶಸ್ವಿಯಾಗಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.

ಆಪರೇಶನ್ ಸಿಂದೂರ ಹಿನ್ನೆಲೆಯಲ್ಲಿ ವಿದೇಶಗಳಿಗೆ ತೆರಳಿದ ಸರ್ವಪಕ್ಷಗಳ ನಿಯೋಗದಲ್ಲಿ ಭಾಗವಹಿಸಿ ಮಂಗಳೂರಿಗೆ ಆಗಮಿಸಿದ ಸಂದರ್ಭ ಜಿಲ್ಲಾ ಬಿಜೆಪಿ ವತಿಯಿಂ ಬುಧವಾರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಪರೇಶನ್ ಸಿಂದೂರ ಮೂಲಕ ವಿಶ್ವದ ಯಾವುದೇ ದೇಶ ಮಾಡದ ಕಾರ್ಯಾಚರಣೆಯನ್ನು ಭಾರತೀಯ ಸೇನೆ ಮಾಡಿದೆ. ಪೆಹಲ್ಗಾಮ್‌ನಲ್ಲಿ ಧರ್ಮವನ್ನು ಪ್ರಶ್ನಿಸಿ ಹೆಂಡತಿ, ಮಕ್ಕಳ ಮುಂದೆಯೇ ಭಾರತೀಯ ನಾಗರಿಕರನ್ನು ಕೊಂದು ದೇಶದಲ್ಲಿ ಹಿಂದು- ಮುಸಲ್ಮಾನರ ನಡುವೆ ಜಗಳ ಸೃಷ್ಟಿಸಲು ಪ್ರಯತ್ನಿಸಿದ ಪಾಕ್ ಪ್ರೇರಿತ ಉಗ್ರವಾದದ ವಿರುದ್ಧ ಆಪರೇಶನ್ ಸಿಂದೂರ ನಡೆಸಲಾಗಿದೆ. ವೃತ್ತಿಪರತೆಯುಳ್ಳ ಸೇನೆ, ಪ್ರಧಾನಿ ಮೋದಿ ಅವರ ಜವಾಬ್ದಾರಿಯುತ ನಾಯಕತ್ವದಿಂದ ಈ ಯಶಸ್ವಿ ಕಾರ್ಯಾಚರಣೆ ಸಾಧ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ವಿದೇಶಕ್ಕೆ ತೆರಳಿದ ಸರ್ವಪಕ್ಷಗಳ ನಿಯೋಗದಲ್ಲಿ ದಕ್ಷಿಣ ಕನ್ನಡ ಸಂಸದರಿಗೆ ಅವಕಾಶ ದೊರೆತಿರುವುದು ಜಿಲ್ಲೆಗೆ ಗೌರವ ತಂದುಕೊಟ್ಟಿದೆ. ಕ್ಯಾ. ಚೌಟ ಅವರ ಸಾಮರ್ಥ್ಯವನ್ನು ಗುರುತಿಸಿ ಕೇಂದ್ರ ಸರಕಾರ ಈ ಅವಕಾಶ ನೀಡಿದೆ. ಆಪರೇಶನ್ ಸಿಂದೂರ ಮೂಲಕ ಭಾರತದ ಮುಂದೆ ಪಾಕಿಸ್ತಾನ ಮಂಡಿಯೂರಿ ಅಂಗಲಾಚುವ ಸನ್ನಿವೇಶ ಸೃಷ್ಟಿಯಾಗಿದೆ ಎಂದರು.

ಅಭಿನಂದನಾ ಭಾಷಣ ಮಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ವಿದೇಶಕ್ಕೆ ನುಗ್ಗಿ ಹೊಡೆಯುವ ಸಾಮರ್ಥ್ಯ ಭಾರತೀಯ ಸೇನೆಗೆ ಇದೆ ಎಂಬುದು ಆಪರೇಶನ್ ಸಿಂದೂರ ಮೂಲಕ ಸಾಬೀತಾಗಿದೆ. ಸರ್ವಪಕ್ಷಗಳ ನಿಯೋಗದಲ್ಲಿ ನಮ್ಮ ಸಂಸದರು ಭಾಗವಹಿಸಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ದೊಡ್ಡ ಜವಾಬ್ದಾರಿಯನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದರು.

ಶಾಸಕರಾದ ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ, ವೇದವ್ಯಾಸ ಕಾಮತ್, ಡಾ. ವೈ.ಭರತ್ ಶೆಟ್ಟಿ, ಹರೀಶ್ ಪೂಂಜ, ಪ್ರತಾಪಸಿಂಹ ನಾಯಕ್, ಕಿಶೋರ್‌ಕುಮಾರ್ ಪುತ್ತೂರು, ಮಾಜಿ ಸಚಿವ ನಾಗರಾಜ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ್ ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಸುನೀಲ್ ಆಳ್ವ ಸ್ವಾಗತಿಸಿದರು. ಪೂಜಾ ಪೈ ವಂದಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net