

ಕಲಘಟಗಿ: ಭಾರತೀಯ ಸೇನೆ ಪಾಕಿಸ್ತಾನದ ಉಗ್ರ ತಾಣಗಳ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಪಟ್ಟಣದ ಆಂಜನೇಯ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಬಿಜೆಪಿ ಜಿಲ್ಲಾ ಗ್ರಾಮೀಣ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ ಮಾತನಾಡಿ, ಪಹಲ್ಗಾಮ್ಲ್ಲಿ ಉಗ್ರರ ದಾಳಿಯಿಂದ ಅಮಾಯಕರು ಬಲಿಯಾಗಿದ್ದರು. ಇದಕ್ಕೆ ಪ್ರತಿಕಾರವಾಗಿ ಭಾರತೀಯ ವಾಯುಪಡೆ ಪಾಕಿಸ್ತಾನ ಉಗ್ರರ ಅಡಗು ತಾಣಗಳ ಮೇಲೆ ದಾಳಿ ಮಾಡಿ ಉಗ್ರರನ್ನು ಕೊಂದು ಹಾಕಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದೆ ಎಂದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸದಾನಂದ ಚಿಂತಾಮಣಿ ಮಾತನಾಡಿ, ಭಾರತವನ್ನು ಕೆಣಕುವ ಸಾಹಸವನ್ನು ಪಾಕಿಸ್ತಾನ ಪದೇ ಪದೆ ಮಾಡುತ್ತಿದೆ. ಇದು ನವ ಭಾರತ. ಪಾಕಿಸ್ತಾನದ ಯಾವುದೇ ಮೂಲೆಗೂ ಹೋಗಿ ನುಗ್ಗಿ ಹೊಡೆಯುವ ಸಾಮರ್ಥ್ಯವನ್ನು ಭಾರತ ಹೊಂದಿದೆ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಯಲ್ಲಾರಿ ಶಿಂಧೆ ಹಾಗೂ ತಾಪಂ ಮಾಜಿ ಅಧ್ಯಕ್ಷ ಫಕೀರೇಶ ನೇಸರೇಕರ ಮಾತನಾಡಿ, ಈ ಹಿಂದೆಯೂ ಪಾಕಿಸ್ತಾನಕ್ಕೆ ಪಾಠ ಕಲಿಸಿದ್ದರೂ ಮತ್ತೆ ತನ್ನ ದುಷ್ಟಬುದ್ಧಿ ಪ್ರದರ್ಶಿಸುವುದನ್ನು ಬಿಟ್ಟಿಲ್ಲ. ಪ್ರತಿ ಬಾರಿ ಉಗ್ರರ ದಾಳಿ ಆದಾಗಲೂ ಭಾರತೀಯ ಸೇನೆ ತಕ್ಕ ಉತ್ತರ ಕೊಟ್ಟಿದೆ. ಇನ್ಮುಂದೆ ಭಾರತದ ಮೇಲೆ ದಾಳಿ ಮಾಡಲು ಪಾಕಿಸ್ತಾನ ನೂರು ಸಲ ವಿಚಾರ ಮಾಡುವಂತೆ ಪಾಠ ಕಲಿಸಿದ್ದಾರೆ ಎಂದು ಹೇಳಿದರು.
ಪಪಂ ಉಪಾಧ್ಯಕ್ಷ ಗಂಗಾಧರ ಗೌಳಿ, ಸದಸ್ಯರಾದ ಕಲ್ಮೇಶ ಬೆಣ್ಣಿ, ಬಸವರಾಜ ಕಡ್ಲಾಸ್ಕರ, ಪ್ರಮೋದ ಪಾಲ್ಕರ, ಪರಶುರಾಮ ಹುಲಿಹೊಂಡ, ಬಸವರಾಜ ಪುಟ್ಟಪ್ಪನವರ, ರಾಘವೇಂದ್ರ ಹುಲಿಹೊಂಡ, ಪ್ರವೀಣ ಇಜಾರೆ, ರಾಘವೇಂದ್ರ ಅಳ್ನಾವರ, ಶ್ರೀಕಾಂತ ಪಾಟೀಲ, ವಿಜಯ ಬೆಣ್ಣಿ, ಬಸವರಾಜ ಮಾದರ, ವಿನಾಯಕ ಗೌಳಿ ಇತರರಿದ್ದರು.