

ಮುಧೋಳ: ಭೂ ಲೋಕದ ಸ್ವರ್ಗ ಪಹಲ್ಗಾಮ್‌ನ ಬೈಸರನ್‌ನಲ್ಲಿ ಅಮಾಯಕ ಹಿಂದುಗಳ ಮೇಲೆ ಪಾಕಿಸ್ತಾನಿ ಬೆಂಬಲಿತ ಉಗ್ರರು ಪೈಶಾಚಿಕ ದಾಳಿ ನಡೆಸಿದ್ದ ಕರಾಳ ದಿನವನ್ನು ಮರೆಯಲು ಸಾಧ್ಯವಿಲ್ಲ. ಧರ್ಮ ಯಾವುದು ಎಂದು ಕೇಳಿ ಹಣೆಗೆ ಗುಂಡಿಟ್ಟು ರಾಕ್ಷಸಿ ಕೃತ್ಯ ಮೆರೆದು, 26 ಹಿಂದು ಹೆಣ್ಣುಮಕ್ಕಳ ಸಿಂಧೂರ ಅಳಿಸಿದ್ದ ಪಹಲ್ಗಾಮ್ ದಾಳಿಗೆ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ ಎಂದು ಬಿಜೆಪಿ ಮುಖಂಡ ಅರುಣ್ ಗೋ. ಕಾರಜೋಳ ಹೇಳಿದರು.
ನಗರದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆ ಜಂಟಿಯಾಗಿ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಶತ್ರು ರಾಷ್ಟ್ರ ಪಾಕಿಸ್ತಾನದಲ್ಲಿನ ಮಿಲಿಟರಿ ಪಡೆಯನ್ನಾಗಲೀ, ಸಾರ್ವಜನಿಕ ಸ್ಥಳಗಳ ಮೇಲಾಗಲಿ ದಾಳಿ ನಡೆಸದೇ, ಒಟ್ಟು 9 ಭಯೋತ್ಪಾದಕ ಅಡಗುತಾಣಗಳ ಮೇಲೆ ದಾಳಿ ನಡೆಸಲಾಗಿದೆ ಎಂಬ ಮಾಹಿತಿ ದೃಢವಾಗಿದೆ ಎಂದರು.
ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಜೀ ಅವರೂ ಸಹ ನಿಗಾವಹಿಸಿ ಕಾರ್ಯಾಚರಣೆಯ ಭಾಗವಾಗಿ ಶ್ರಮಿಸುತ್ತಿದ್ದಾರೆ, ರಾಷ್ಟ್ರದ ಭದ್ರತೆ, ರಕ್ಷಣೆ ಹಾಗೂ ಸ್ವಾಭಿಮಾನದ ಪ್ರತೀಕವಾಗಿ ನಮ್ಮ ಸರ್ಕಾರ ಹಾಗೂ ನಮ್ಮ ಯೋಧರ ಪರವಾಗಿ ನಿಂತು ಆತ್ಮವಿಶ್ವಾಸದ ಅಭಯ ತುಂಬೋಣ. ಮನುಕುಲದ ದುಷ್ಟರ ಸಂಹಾರಕ್ಕೆ ಅಡಿಯಿಟ್ಟಿರುವ ಕೇಂದ್ರ ಸರ್ಕಾರದ ದಿಟ್ಟ ಹೆಜ್ಜೆಗೆ ಬೆಂಬಲವಾಗಿ ನಿಲ್ಲೋಣ. ಭಾರತದ ಸಾರ್ವಭೌಮತ್ವದ ಶಕ್ತಿ ಎತ್ತಿಹಿಡಿಯೋಣ ಎಂದರು.