

ನೆಲಮಂಗಲ: ರಾಜ್ಯದಲ್ಲಿ ಡ್ರಗ್ಸ್, ಗಾಂಜಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಮಾರ್ಗದರ್ಶನದಂತೆ ಗುರುವಾರ ರಾತ್ರಿ ಉಪವಿಭಾಗಕ್ಕೆ ಒಳಪಡುವ 5 ಠಾಣಾ ವ್ಯಾಪ್ತಿಯ ಡಾಬಾ, ಲಾಡ್ಜ್ ಮತ್ತು ಬಾರ್ ಆ್ಯಂಡ್ ರೆಸ್ಟೋರೆಂಟ್ ಮೇಲೆ ಪೊಲೀಸರು ದಾಳಿ ನಡೆಸಿ, ಪರಿಶೀಲಿಸಿದರು. ಹೆದ್ದಾರಿಗಳಲ್ಲಿರುವ ಡಾಬಾಗಳಲ್ಲಿ ಅಕ್ರಮ ಮದ್ಯ, ಡ್ರಗ್ಸ್, ಗಾಂಜಾ ಸೇವನೆ ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಿವೈಎಸ್‌ಪಿ ಬಿ.ಎಸ್.ಮೋಹನ್‌ಕುಮಾರ್ ತಿಳಿಸಿದರು.
ದಾಳಿ ವೇಳೆ ಡಾಬಾ ಬಳಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಗಳಿಗೆ ಎಸ್‌ಐ ವಸಂತ್‌ಕುಮಾರ್ ಎಚ್ಚರಿಕೆ ನೀಡಿ ಬುದ್ಧಿಮಾತು ಹೇಳಿದರು. ರಾತ್ರಿಯಿಡೀ ಕಾರ್ಯಾಚರಣೆ ನಡೆಸಿರುವ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡ ನಗರ, ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ, ದಾಬಸ್‌ಪೇಟೆ, ತ್ಯಾಮಗೊಂಡ್ಲು ಠಾಣಾ ವ್ಯಾಪ್ತಿಯ ಡಾಬಾ, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಿಗೂ ಭೇಟಿ ನೀಡಿ ಪರಿಶೀಲಿಸಿತು. ಡ್ರಗ್ಸ್, ಗಾಂಜಾ ಮಾರಾಟದ ಬಗ್ಗೆ ಯಾವುದೇ ಸುಳಿವು ದೊರೆಯಲಿಲ್ಲ ಎನ್ನಲಾಗಿದೆ.
ಸಂಜೆ ಗಾಂಜಾ ಸೇವನೆ: ನಗರ ಹೊರವಲಯ ಗೋದಾಮುಗಳು ಸೇರಿ ದಾಬಸ್‌ಪೇಟೆ ಕೈಗಾರಿಕಾ ವಲಯದ ಕಾರ್ಖಾನೆಗಳಿಗೆ ಹೊರ ರಾಜ್ಯಗಳಿಂದ ಬರುವ ಸರಕುಸಾಗಣೆ ವಾಹನಗಳ ಚಾಲಕರು ಹಾಗೂ ಸಹಾಯಕರಿಂದ ಗಾಂಜಾ ಮಾರಾಟವಾಗುತ್ತಿದ್ದು, ಸ್ಥಳೀಯ ಯುವಕರ ಕೈ ಸೇರುತ್ತಿದೆ. ಸಂಜೆಯಾಗುತ್ತಿದ್ದಂತೆ ನಗರದ ಹೊರಗೆ ಖಾಲಿ ಬಡಾವಣೆಗಳಲ್ಲಿ ಸೇರುವ ಯುವಕರು ಗಾಂಜಾ ಸೇವನೆ ಮಾಡುತ್ತಿದ್ದಾರೆಂಬ ಮಾಹಿತಿ ಇದ್ದು ಪೊಲೀಸರು ಗಮನ ಹರಿಸಬೇಕಿದೆ.