

ತುಮಕೂರು: ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಮಹಾನಗರ ಪಾಲಿಕೆ ಅಧಿಕಾರ ಕೈತಪ್ಪುವ ಹಿನ್ನೆಲೆಯಲ್ಲಿ ಬಿಜೆಪಿ ‘ಆಪರೇಷನ್ ಕಮಲ’ಕ್ಕೆ ಮುಂದಾಗುವ ಸಾಧ್ಯತೆ ಕಾಂಗ್ರೆಸ್-ಜೆಡಿಎಸ್ ‘ದೋಸ್ತಿ’ ಪಾಳಯದಲ್ಲಿ ಆತಂಕ ಸೃಷ್ಟಿಸಿದೆ.
ಮೇಯರ್, ಉಪಮೇಯರ್ ಚುನಾವಣೆ ಸೆ.9ರಂದು ನಿಗದಿಯಾದ ಬೆನ್ನಲ್ಲೇ ಪಾಲಿಕೆಯಲ್ಲೂ ಆಪರೇಷನ್ ಕಮಲದ ಭೀತಿ ಎದುರಾಗಿದೆ. 4ನೇ ಅವಧಿಗೆ ಮೇಯರ್ ಸ್ಥಾನ- ಪರಿಶಿಷ್ಟ ಜಾತಿ ಮಹಿಳೆ ಹಾಗೂ ಉಪಮೇಯರ್ ಹುದ್ದೆ- ಹಿಂದುಳಿದ ವರ್ಗ(ಎ)ಗೆ ಮೀಸಲು ನಿಗದಿಯಾಗಿದ್ದು, ಹಳೇ ದೋಸ್ತಿಗಳಾದ ಕಾಂಗ್ರೆಸ್-ಜೆಡಿಎಸ್ ಮತ್ತೆ ಅಧಿಕಾರ ಗದ್ದುಗೆಗೇರುವುದು ಬಹುತೇಕ ಖಚಿತವಾಗಿದೆ. ಆದರೆ, ಜಾತಿ ಲೆಕ್ಕಾಚಾರ ಮುಂದಿಟ್ಟುಕೊಂಡು ದೋಸ್ತಿಯಲ್ಲಿ ಬಿರುಕು ತರುವ ಪ್ರಯತ್ನಕ್ಕೆ ಬಿಜೆಪಿ ಮುಂದಾಗಿದೆ ಎನ್ನಲಾಗಿದೆ. 35 ಸದಸ್ಯ ಬಲಾಬಲವುಳ್ಳ ಮಹಾನಗರ ಪಾಲಿಕೆಯಲ್ಲಿ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿ 12 ಸದಸ್ಯರನ್ನು ಹೊಂದಿದೆ. ಜತೆಗೆ ನಗರ ಶಾಸಕ, ಸಂಸದರ ಹಾಗೂ ಪಕ್ಷೇತರ ಸದಸ್ಯನೊಬ್ಬನ ಬೆಂಬಲವು ಬಿಜೆಪಿಗೆ ಇದೆ. ಇನ್ನು ಕಾಂಗ್ರೆಸ್, ಜೆಡಿಎಸ್ ತಲಾ 10 ಸದಸ್ಯರನ್ನು ಹೊಂದಿದ್ದು, ಇಬ್ಬರು ಪಕ್ಷೇತರರು ಜತೆಗೆ ಕಾಂಗ್ರೆಸ್ ಎಂಎಲ್ಸಿ ಸಹ ‘ದೋಸ್ತಿ’ ಪಾಳಯದಲ್ಲಿದ್ದಾರೆ. ಸರಳ ಬಹುಮತಕ್ಕೆ 20 ಸದಸ್ಯರ ಅಗತ್ಯವಿದ್ದು ಹಳೇ ದೋಸ್ತಿಗಳು ಒಂದಾದಲ್ಲಿ ಅಧಿಕಾರ ಹಾದಿ ಸುಗಮವೆನಿಸಲಿದೆ.
ಜೆಡಿಎಸ್‌ನಲ್ಲಿ ಬಿರುಕು?: ನಾವಿಕನಿಲ್ಲದ ದೋಣಿಯಂತಾಗಿರುವ ಜೆಡಿಎಸ್‌ನಲ್ಲಿ ಒಡಕು ಮೂಡಿಸಲು ಬಿಜೆಪಿ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದೆ ಎನ್ನಲಾಗಿದೆ. ಜೆಡಿಎಸ್ ಕಾರ್ಪೋರೇಟರ್‌ಗಳನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದ್ದು, ಇದೇ ಅಸ್ತ್ರ ಬಳಸಿಕೊಂಡು ಬಿಜೆಪಿ ‘ಆಪರೇಷನ್ ಕಮಲ’ಕ್ಕೆ ಕೈಹಾಕಿರುವುದು ಜೆಡಿಎಸ್‌ನಲ್ಲಿ ಆತಂಕ ಉಂಟುಮಾಡಿದೆ. 2024ರ ಜನವರಿ 31ಕ್ಕೆ ಪಾಲಿಕೆ ಚುನಾಯಿತ ಆಡಳಿತ ಮಂಡಳಿ ಅವಧಿ ಅಂತ್ಯಗೊಳ್ಳಲಿದ್ದು, ಬಹುತೇಕ ಇದೇ ಕಡೇ ಅವಧಿ ಆಗುವ ಸಾಧ್ಯತೆ ಇರುವುದರಿಂದ 4-5 ಸದಸ್ಯರನ್ನು ಜತೆಗೆ ಕರೆತರುವವರಿಗೆ ಉಪಮೇಯರ್ ಚುನಾವಣೆಯಲ್ಲಿ ಬೆಂಬಲಿಸುವ ಆಮಿಷವನ್ನು ಬಿಜೆಪಿ ಒಡ್ಡಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಈ ರಾಜಕೀಯ ಬೆಳವಣಿಗೆ ಕಾಂಗ್ರೆಸ್-ಜೆಡಿಎಸ್ ವರಿಷ್ಠರ ನಿದ್ದೆಗೆಡಿಸಿದೆ. ಬಿಜೆಪಿ ಇಂತಹ ದುಸ್ಸಾಹಸಕ್ಕೆ ಕೈಹಾಕುವ ಸಾಧ್ಯತೆಗಳು ಕಡಿಮೆ ಇದ್ದು ಮುಂದಿನ ವಾರ ಈ ಕುತೂಹಲಕ್ಕೆ ತೆರೆಬೀಳಲಿದೆ.
ಉಪಮೇಯರ್‌ಗೆ ಅಧಿಕಾರ ಹಂಚಿಕೆ ಸೂತ್ರ ?: ಕಾಂಗ್ರೆಸ್-ಜೆಡಿಎಸ್ ದೋಸ್ತಿ ಪಕ್ಕಾ ಆಗಿರುವ ಹಿನ್ನೆಲೆಯಲ್ಲಿ ಪರಿಶಿಷ್ಟ ಮಹಿಳಾ ಸದಸ್ಯರಿಬ್ಬರನ್ನು ಹೊಂದಿರುವ ಕಾಂಗ್ರೆಸ್‌ಗೆ ಮೇಯರ್ ಸ್ಥಾನ ಬಿಟ್ಟುಕೊಡಲು ನಿರ್ಧರಿಸಲಾಗಿದೆ. ಜೆಡಿಎಸ್‌ನಲ್ಲಿ ಉಪಮೇಯರ್ ಸ್ಥಾನಕ್ಕೆ ತೀವ್ರ ಪೈಪೋಟಿ ಇದ್ದು, ಗುರುವಾರ ಸಂಜೆ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ನಿವಾಸದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಜೆಡಿಎಸ್ ಮುಖಂಡ ಎನ್.ಗೋವಿಂದರಾಜು ನೇತೃತ್ವದಲ್ಲಿ ಕಾರ್ಪೋರೇಟರ್‌ಗಳ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ತಲಾ 6 ತಿಂಗಳ ಅಧಿಕಾರ ಹಂಚಿಕೆ ಸೂತ್ರ ಅನುಸರಿಸಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ. 17ನೇ ವಾರ್ಡ್‌ನ ಬಿ.ಎಸ್.ಮಂಜುನಾಥ್ ಹಾಗೂ 23ನೇ ವಾರ್ಡ್‌ನ ಟಿ.ಕೆ.ನರಸಿಂಹಮೂರ್ತಿ ನಡುವೆ ಅಧಿಕಾರ ಹಂಚುವ ಸೂತ್ರವನ್ನು ಮುಖಂಡರು ಕೈಗೊಂಡಿದ್ದಾರೆ.
9ರಂದು ಚುನಾವಣೆ: ಮೇಯರ್, ಉಪಮೇಯರ್ ಸ್ಥಾನಕ್ಕೆ ಸೆ.9ರಂದು ಚುನಾವಣೆ ನಿಗದಿಪಡಿಸಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಆದೇಶ ಹೊರಡಿಸಿದ್ದಾರೆ. ಪಾಲಿಕೆ ಸಭಾಂಗಣದಲ್ಲಿ ಚುನಾವಣೆ ಕಾರ್ಯಕಲಾಪ ನಡೆಯಲಿದ್ದು, ಮಧ್ಯಾಹ್ನ 12 ರಿಂದ 1 ಗಂಟೆಯೊಳಗೆ ನಾಮಪತ್ರ ಸಲ್ಲಿಸಬಹುದು. ಮಧ್ಯಾಹ್ನ 3ಕ್ಕೆ ಸಭೆ ಪ್ರಾರಂಭವಾಗಲಿದ್ದು, ನಾಮಪತ್ರ ಪರಿಶೀಲನೆ, ಉಮೇದುವಾರಿಕೆ ಹಿಂಪಡೆಯಲು ಕಾಲಾವಕಾಶ ಬಳಿಕ ಅವಶ್ಯಬಿದ್ದಲ್ಲಿ ಕೈ ಎತ್ತುವ ಮೂಲಕ ಮತದಾನ ನಡೆಸಲಾಗುವುದು.
ಯಾರಿಗೆ ಒಲಿಯಲಿದೆ ಪಟ್ಟ: ಪಾಲಿಕೆಯ 35 ಚುನಾಯಿತ ಸದಸ್ಯರಲ್ಲಿ ಪರಿಶಿಷ್ಟ ಜಾತಿಯ ಇಬ್ಬರು ಮಹಿಳಾ ಸದಸ್ಯರು ಕಾಂಗ್ರೆಸ್‌ಗೆ ಸೇರಿದವರು. 9ನೇ ವಾರ್ಡ್ ನ ಎಂ.ಪ್ರಭಾವತಿ, 19ನೇ ವಾರ್ಡ್ ಬಿ.ಎಸ್.ರೂಪಶ್ರೀಗೆ ಮೇಯರ್ ಗಾದಿಗೇರುವ ಸುವರ್ಣಾವಕಾಶ ಒದಗಿಬಂದಿದೆ. ಜಿಲ್ಲೆಯ ವರಿಷ್ಠರು ಮೇಯರ್ ಹೆಸರು ಅಂತಿಮಗೊಳಿಸಲಿದ್ದಾರೆ.