ತುಮಕೂರು ಮಹಾನಗರ ಪಾಲಿಕೆಯಲ್ಲಿ ಆಪರೇಷನ್ ಕಮಲ ಭೀತಿ

Tmk_Palike1 new
Published on

ತುಮಕೂರು: ಮಹಾನಗರ ಪಾಲಿಕೆಯಲ್ಲೂ ಆಪರೇಷನ್ ಕಮಲ ಭೀತಿಗೆ ಹೆದರಿ ಇಬ್ಬರು ಪಕ್ಷೇತರ ಸದಸ್ಯರು ಸೇರಿ ಜೆಡಿಎಸ್-ಕಾಂಗ್ರೆಸ್ ತಲಾ 10 ಕಾರ್ಪೋರೇಟರ್‌ಗಳು ಅಜ್ಞಾತವಾಸಕ್ಕೆ ತೆರಳಲಿದ್ದಾರೆ.

‘ಮೈತ್ರಿ’ ಕಾಪಾಡಿಕೊಂಡು ಪಾಲಿಕೆಯಲ್ಲಿ ಅಧಿಕಾರ ಭದ್ರಪಡಿಸಿಕೊಳ್ಳಲು ಉಭಯ ಪಕ್ಷಗಳ ವರಿಷ್ಠರು, ಕಾರ್ಪೋರೇಟರ್‌ಗಳ ಸರಣಿ ಸಭೆ ನಡೆಸುತ್ತಿರುವ ಬೆನ್ನಲ್ಲೇ ಜೆಡಿಎಸ್‌ನಲ್ಲೀಗ ಭಿನ್ನರಾಗ ಕೇಳಿಬಂದಿದೆ. ‘ಭಿನ್ನ’ ಇದರ ಲಾಭ ಪಡೆಯಲು ಹವಣಿಸುತ್ತಿರುವ ಬಿಜೆಪಿ ‘ಆಪರೇಷನ್ ಕಮಲ’ಕ್ಕೆ ತಂತ್ರ ರೂಪಿಸಿದೆ.

ಜೆಡಿಎಸ್‌ಗೆ ಮೇಯರ್ ‘ಗಿರಿ’ : ಹಾಲಿ ಮೇಯರ್ ಲಲಿತಾ ಅವರನ್ನು ಮತ್ತೊಂದು ಅವಧಿಗೆ ಮುಂದುವರಿಸುವ ಮೂಲಕ ‘ಮೇಯರ್’ ಗಿರಿ ಆಸೆ ತೋರಿಸಿ ಪಕ್ಷ ಇಬ್ಭಾಗ ಮಾಡುವ ರಾಜಕೀಯ ‘ಅಸ್ತ್ರ’ ಪ್ರಯೋಗಕ್ಕೆ ಬಿಜೆಪಿ ಹೆಜ್ಜೆಯಿಟ್ಟಿದೆ. ರಾಜ್ಯದಲ್ಲಿ ಸರ್ಕಾರ ಬಂದ ನಂತರವೂ ಪಾಲಿಕೆಯಲ್ಲಿ ಅಧಿಕಾರ ಹಿಡಿಯದಿದ್ದರೆ ಹೇಗೆ ಎಂಬ ಲೆಕ್ಕಾಚಾರದ ಹಿನ್ನೆಲೆಯಲ್ಲಿ ತಿಗಳ ಸಮುದಾಯದ ಕಾರ್ಪೋರೇಟರ್‌ಗಳಿಗೆ ಗಾಳ ಹಾಕಲು ಮುಂದಾಗಿರುವುದು ರಹಸ್ಯವಾಗೇನು ಉಳಿದಿಲ್ಲ. ಇದು ಲಲಿತಾಗೆ ‘ಹ್ಯಾಟ್ರಿಕ್’ ಅವಕಾಶ ಸೃಷ್ಟಿಸಲಿದೆ. ಇತ್ತ ಸದ್ದಿಲ್ಲದೆ ಬಿಜೆಪಿ ನಡೆಸುತ್ತಿರುವ ‘ಆಪರೇಷನ್’ ರಣತಂತ್ರಕ್ಕೆ ಹೆದರಿರುವ ಕಾಂಗ್ರೆಸ್-ಜೆಡಿಎಸ್ ಒಗ್ಗಟ್ಟು ಕಾಪಾಡಿಕೊಳ್ಳುವ ಅನಿವಾರ್ಯತೆಗೆ ಸಿಲುಕಿವೆ. ಹಾಗಾಗಿ, ಜ.26 ರಂದೇ ಅಜ್ಞಾತಸ್ಥಳಕ್ಕೆ ಕಾರ್ಪೋರೇಟರ್

ಗಳನ್ನು ಸ್ಥಳಾಂತರಿಸಲು ವರಿಷ್ಠರು ತೀರ್ಮಾನಿಸಿದ್ದಾರೆ.

ಪ್ರವಾಸಕ್ಕೆ ಬಸ್ ರೆಡಿ: ಕಾರ್ಪೋರೇಟರ್‌ಗಳನ್ನು ಅತ್ತ ಇತ್ತ ಜಿಗಿಯದಂತೆ ಜೋಪಾನ ಮಾಡಲು ಜೆಡಿಎಸ್‌ನ 10, ಕಾಂಗ್ರೆಸ್‌ನ 10 ಹಾಗೂ ಪಕ್ಷೇತರರಿಬ್ಬರು ಸೇರಿ ಒಟ್ಟು 22 ಕಾರ್ಪೋರೇಟರ್‌ಗಳನ್ನು ಪ್ರವಾಸಕ್ಕೆ ಕರೆದೊಯ್ಯಲು ಬಸ್ ವ್ಯವಸ್ಥೆ ಸೇರಿ ಅವರ ವಾಸ್ತವ್ಯಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭಾನುವಾರ ಯಾವ ಸಂದರ್ಭದಲ್ಲಾದರೂ

ನಗರ ತೊರೆಯುವ ಕಾರ್ಪೋರೇಟರ್‌ಗಳನ್ನು ಚುನಾವಣೆ ನಡೆಯುವ ಜ.30ರಂದು ಪಾಲಿಕೆ ಸಭಾಂಗಣಕ್ಕೆ ಕರೆತರಲಾಗುವುದು.

ಕಾಂಗ್ರೆಸ್‌ನಲ್ಲಿ ವಿಪ್ ಜಾರಿ : ಜ.30 ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಕಳೆದ ಬಾರಿಯ ಒಪ್ಪಂದದಂತೆ ಕಾಂಗ್ರೆಸ್‌ಗೆ ಈ ಬಾರಿ ಮೇಯರ್ ಹುದ್ದೆಯನ್ನು ಜೆಡಿಎಸ್ ಬಿಟ್ಟುಕೊಡಬೇಕಿದೆ. ಹಾಗಾಗಿ, ಕಾಂಗ್ರೆಸ್‌ನಲ್ಲಿ ಮೇಯರ್ ಸ್ಥಾನಕ್ಕೆ ಫರಿದಾಬೇಗಂ ಹೆಸರನ್ನು ಮಾಜಿ ಶಾಸಕ ರಫೀಕ್ ಅಹ್ಮದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಂತಿಮಗೊಳಿಸಲಾಗಿದೆ. ಕಾಂಗ್ರೆಸ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈಗಾಗಲೇ ಕಾರ್ಪೋರೇಟರ್‌ಗಳಿಗೆ ವಿಪ್ ಜಾರಿ ಮಾಡಿದೆ ಎನ್ನಲಾಗಿದೆ. ಪಕ್ಷೇತರ ಸದಸ್ಯೆ ನೂರುನ್ನಿಸಾ ಸಹ ಕಾಂಗ್ರೆಸ್ ಬೆಂಬಲಿಸಿದ್ದಾರೆ.

ಇಂದು ವಾಸು-ರಫೀಕ್ ಸಭೆ: ಪಾಲಿಕೆಯಲ್ಲಿ ಮೈತ್ರಿ ಮುಂದುವರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಜ.26 ಅಥವಾ 27 ರಂದು ಮಹತ್ವದ ಸಭೆ ನಡೆಯಲಿದ್ದಾರೆ. ಈ ಸಭೆಯಲ್ಲಿ ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್, ಕಾಂಗ್ರೆಸ್ ಮಾಜಿ ಶಾಸಕ ಎಸ್.ರಫೀಕ್ ಅಹ್ಮದ್, ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್, ಜೆಡಿಎಸ್ ಎಂಎಲ್ಸಿ ಬೆಮೆಲ್ ಕಾಂತರಾಜು ಹಾಗೂ ಜೆಡಿಎಸ್ ಮುಖಂಡ ಗೋವಿಂದರಾಜು ಮೈತ್ರಿ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net