ಆಪರೇಷನ್ ಕಮಲಕ್ಕೂ ಹಿಂದೇಟು ಹಾಕಲ್ಲ: ಈಶ್ವರಪ್ಪ

eeshwarappa press meet
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಡಿ.ಎಸ್.ಅರುಣ್, ಗಿರೀಶ್ ಪಟೇಲ್, ಎಸ್.ಎನ್.ಚನ್ನಬಸಪ್ಪ, ಕೆ.ವಿ.ಅಣ್ಣಪ್ಪ ಮುಂತಾದವರಿದ್ದರು.
Published on

ಶಿವಮೊಗ್ಗ: ಲೋಕಸಭೆ ಚುನಾವಣೆಗೂ ಮುನ್ನ ಅಥವಾ ಫಲಿತಾಂಶದ ನಂತರ ರಾಜ್ಯ ಸರ್ಕಾರ ಪತನವಾಗುವುದು ನಿಶ್ಚಿತ ಎಂದು ಪುನರುಚ್ಚರಿಸಿರುವ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ನಾವು ಆಪರೇಷನ್ ಕಮಲಕ್ಕೂ ಹಿಂದೇಟು ಹಾಕುವುದಿಲ್ಲ ಎಂದಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸರ್ಕಾರ ಪತನದ ಬಗ್ಗೆ ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕೆ.ಎಸ್.ಈಶ್ವರಪ್ಪ, ಸಂತೋಷ್ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಟೀಕೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019ರ ಇತಿಹಾಸ ಮರುಕಳಿಸಲಿದೆ. ಅಂದು ಕೂಡ ಯಾರೂ ಪಕ್ಷ ಬಿಡಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ 17 ಶಾಸಕರು ಸರ್ಕಾರದಿಂದ ಹೊರಬರಲಿಲ್ಲವೇ ಎಂದು ಪ್ರಶ್ನಿಸಿದರು. ಈಗಲೂ ಸರ್ಕಾರದಲ್ಲಿ ತಾಳಮೇಳವಿಲ್ಲ. ಸಚಿವ ಕೆ.ಎಚ್.ಮುನಿಯಪ್ಪ, ಶಾಸಕ ಬಸವರಾಜ ರಾಯರೆಡ್ಡಿ ಮುಂತಾದವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಬರುತ್ತಾರೆಂದು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಪದೇಪದೆ ಹೇಳುತ್ತಿದ್ದಾರೆ. ಇದುವರೆಗೆ ಒಬ್ಬರೂ ಬಿಜೆಪಿ ತೊರೆದಿಲ್ಲ. ರಾಜ್ಯ ನಡೆಸುವ ಶಕ್ತಿ ಕಾಂಗ್ರೆಸ್‌ಗೆ ಇಲ್ಲ. ಗ್ಯಾರಂಟಿಗಳನ್ನು ತೋರಿಸಿ ಜನರಿಗೆ ಟೋಪಿ ಹಾಕಿದ್ದಾರೆ. ಈಗ ಯಾವುದಕ್ಕೂ ಹಣ ಇಲ್ಲ ಎನ್ನುತ್ತಿದ್ದಾರೆ. ಹೀಗಾದರೆ ರಾಜ್ಯದ ಜನರ ಕತೆಯೇನು ಎಂದು ಕಿಡಿಕಾರಿದರು.
ರಾಷ್ಟ್ರ ನಡೆಸುವವರಿಗೆ ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆ ಯಾವಾಗ ಮಾಡಬೇಕೆಂಬುದು ತಿಳಿಯುವುದಿಲ್ಲವೇ ಎಂದು ಬಿಜೆಪಿ ನಾಯಕರ ನಡೆಯನ್ನು ಸಮರ್ಥಿಸಿಕೊಂಡ ಕೆ.ಎಸ್.ಈಶ್ವರಪ್ಪ, ಯಾರು ಇರಲಿ-ಇಲ್ಲದಿರಲಿ ಪಕ್ಷದ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತವೆ. ಸೂಕ್ತ ಸಮಯದಲ್ಲಿ ಅಧ್ಯಕ್ಷರ ಆಯ್ಕೆಯಾಗಲಿದೆ. ಸೋನಿಯಾ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಎರಡು ವರ್ಷ ಆ ಪಕ್ಷಕ್ಕೆ ಅಧ್ಯಕ್ಷರೇ ಇರಲಿಲ್ಲ. ಹೀಗಾಗಿ ನಮ್ಮ ಪಕ್ಷದ ಆಂತರಿಕ ಸಂಗತಿಗಳ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ನಾಯಕರಿಗೆ ಇಲ್ಲ ಎಂದು ಹೇಳಿದರು.
ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಶಾಸಕ ಎಸ್.ಎನ್.ಚನ್ನಬಸಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ್, ಪ್ರಮುಖರಾದ ಎಸ್.ಜ್ಞಾನೇಶ್ವರ್, ಕೆ.ವಿ.ಅಣ್ಣಪ್ಪ, ಚಂದ್ರಶೇಖರ್, ಶಶಿಧರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net