

ಹುಬ್ಬಳ್ಳಿ: ಕಾಂಗ್ರೆಸ್ನಲ್ಲಿಯೇ ಆಪರೇಷನ್ ಹಸ್ತ ಮಾಡುವ ತಂಡ ಸಿದ್ಧವಾಗಿದೆ. ಇದರಲ್ಲಿ ಬಿಜೆಪಿಯವರ ಸಹಕಾರ ಇಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಬಣ ರಾಜಕೀಯ ಎದ್ದು ಕಾಣುತ್ತಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ, ಡಾ.ಜಿ. ಪರಮೇಶ್ವರ ಎಂಬ ಮೂರು ಬಣಗಳಿವೆ. ದುರ್ದೈವದ ಸಂಗತಿ ಎಂದರೆ ಸಚಿವ ಎಚ್.ಕೆ.ಪಾಟೀಲ ಅವರನ್ನು ಯಾರೂ ಊಟ ಹಾಗೂ ಉಪಹಾರಕ್ಕೂ ಕರೆದಿಲ್ಲ ಎಂದು ಕುಟುಕಿದರು.
ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಗಾದಿ ಬಗ್ಗೆ ಸುದೀರ್ಘ ಚರ್ಚೆ ನಡೆಯುತ್ತಿದೆ. ಮುಖ್ಯಮಂತ್ರಿ ಆಗಬೇಕೆಂದು ಸತೀಶ ಜಾರಕಿಹೊಳಿ ಓಡಾಡುತ್ತಿದ್ದಾರೆ. ನಾವು ಯಾವುದೇ ಆಪರೇಷನ್ ಕಮಲ ಮಾಡುವುದಿಲ್ಲ. ಬಿಜೆಪಿಯ ಯಾವೊಬ್ಬ ಶಾಸಕರು ಕಾಂಗ್ರೆಸ್ಗೆ ಹೋಗುವುದಿಲ್ಲ. ಫೆಬ್ರುವರಿ ಮತ್ತು ಮಾರ್ಚ್ ತಿಂಗಳವರೆಗೆ ನೋಡಿ ಏನೇನಾಗುತ್ತದೆ ಎಂಬುದು ಗೊತ್ತಾಗುತ್ತದೆ ಎಂದು ಭವಿಷ್ಯ ನುಡಿದರು.
ರಾಜ್ಯದಲ್ಲಿ ಮತಾಂತರ ಪಿಡುಗು ಮತ್ತೆ ತಲೆ ಎತ್ತಿದೆ. ಮುಖ್ಯಮಂತ್ರಿಗಳ ಸಮುದಾಯದವರು ಮತಾಂತರ ಆಗುತ್ತಿದ್ದಾರೆ. ಇದಕ್ಕೆ ಸಿದ್ದರಾಮಯ್ಯನವರು ಪ್ರೋತ್ಸಾಹಿಸುತ್ತಿದ್ದಾರಾ ಅಥವಾ ವಿರೋಧಿಸುತ್ತಿದ್ದಾರಾ? ಎಂಬುದನ್ನು ಹೇಳಬೇಕು. ಇದೇ ಕಾರಣಕ್ಕೆ ಮತಾಂತರ ಕಾಯ್ದೆ ಜಾರಿ ಮಾಡಿದ್ದು. ಸಿದ್ದರಾಮಯ್ಯ ಅವರು ತಮ್ಮ ಸಮುದಾಯದವರನ್ನು ಉಳಿಸಿಕೊಳ್ಳುತ್ತಾರೋ ಅಥವಾ ಬಿಡುತ್ತಾರೋ? ನೋಡೋಣ ಎಂದರು.