ಮರಿಯಾನೆಗಳಿಂದ ಆಪರೇಷನ್ ಗಜಪಡೆ ತಡ: 15 ದಿನದಲ್ಲಿ 180 ಕಿ.ಮೀ ಸಂಚಾರ, ಕಾಡಿಗಟ್ಟಲು ಕಾರ್ಯಪಡೆಯ ಹರಸಾಹಸ

2 (2)
Published on

ಮಂಡ್ಯ: ರಾಮನಗರ ಜಿಲ್ಲೆ ಸಾತನೂರು ಅರಣ್ಯ ಪ್ರದೇಶದಿಂದ ಬಂದಿರುವ ಬರೋಬರಿ ಹತ್ತು ಕಾಡಾನೆಗಳ ಹಿಂಡು ಜಿಲ್ಲೆಗೆ ಪ್ರವೇಶಿಸಿ ಹದಿನೈದು ದಿನ ಕಳೆದಿದೆ. ಈ ನಡುವೆ ಮೂರು ತಾಲೂಕಿನಲ್ಲಿ ಅಪಾರ ಪ್ರಮಾಣದ ನಷ್ಟ ಮಾಡಿವೆ. ಇತ್ತ ಗಜಪಡೆಯನ್ನು ಕಾಡಿಗಟ್ಟಲು ಕಾರ್ಯಪಡೆ ತಂಡವೂ ಹರಸಾಹಸ ಪಡುತ್ತಿದ್ದು, ಮೂರು ಮರಿಯಾನೆ ಇರುವುದರಿಂದ ಕಾರ್ಯಾಚರಣೆ ಸ್ವಲ್ಪ ತಡವಾಗುತ್ತಿದೆ.

ಮೊದಲು ಮದ್ದೂರನ್ನು ಪ್ರವೇಶಿಸಿದ ಗಜಪಡೆ ಬಳಿಕ ಶ್ರೀರಂಗಪಟ್ಟಣಕ್ಕೆ ದಾಂಗುಡಿ ಇಟ್ಟಿತ್ತು. ಬಳಿಕ ಬನ್ನೂರು ಕಡೆ ತೆರಳಿ ವಾಪಸ್ ಮಳವಳ್ಳಿಯತ್ತ ಬಂದಿತು. ಮಂಗಳವಾರ ಮಂಡ್ಯ ತಾಲೂಕಿನ ಹೆಬ್ಬಕವಾಡಿ ಭಾಗದಲ್ಲಿ ವಾಸ್ತವ್ಯ ಹೂಡಿದ್ದವು. ಇಷ್ಟು ಅವಧಿಯಲ್ಲಿ ಸುಮಾರು 180 ಕಿ.ಮೀ ಸಂಚಾರ ನಡೆಸಿವೆ. ಇವುಗಳ ಹಿಂದೆಯೇ ಕಾರ್ಯಪಡೆಯ ಕಾರ್ಯಾಚರಣೆ ಸಾಗಿದೆ. ಈ ಹಿನ್ನೆಲೆಯಲ್ಲಿ ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಕಾಡಾನೆಗಳನ್ನು ಅಟ್ಟಲು ಹರಸಾಹಸ ಪಡಲಾಗುತಿದೆ. ಇನ್ನು ರಾತ್ರಿ ಹೊತ್ತು ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

ಭೀಮ, ಗಜೇಂದ್ರ ಸಾಥ್: ಕಾಡಾನೆ ಹಿಂಡಿನಲ್ಲಿ ಒಂದು ಸಲಗವಿದೆ. ಇದಲ್ಲದೆ ಮರಿಯಾನೆಗಳಿರುವುದರಿಂದ ಅವುಗಳನ್ನು ರಕ್ಷಣೆ ಮಾಡಿಕೊಂಡೇ ಉಳಿದ ಆನೆಗಳು ಸಾಗುತ್ತಿವೆ. ಸಾಮಾನ್ಯವಾಗಿ ದಿನಕ್ಕೆ 30 ಕಿ.ಮೀನಷ್ಟು ಸಂಚಾರ ನಡೆಸುವ ಕಾಡಾನೆ, ಮರಿಗಳಿರುವುದರಿಂದ ಕೇವಲ 10 ಕಿ.ಮೀ ಅಷ್ಟೇ ಸಾಗುತ್ತಿವೆ.

ಇನ್ನು ಹುಣಸೂರಿನ ಆನೆ ಕಾರ್ಯಪಡೆಯ 32 ಹಾಗೂ ಜಿಲ್ಲೆಯ 68 ಸಿಬ್ಬಂದಿ ಸೇರಿದಂತೆ 100 ಜನರು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅರಣ್ಯ ಪ್ರದೇಶಕ್ಕೆ ಕಳುಹಿಸುವವರೆಗೂ ಈ ಕಾರ್ಯಾಚರಣೆ ನಡೆಯಲಿದೆ. ಇನ್ನು ಮಹಾರಾಷ್ಟ್ರದ ಭೀಮ ಹಾಗೂ ಕರ್ನಾಟಕದ ಭೀಮ, ಗಜೇಂದ್ರ ಆನೆ ಸಿಬ್ಬಂದಿಗೆ ಸಾಥ್ ಕೊಡುತ್ತಿವೆ. ಮುಂಜಾಗ್ರತಾ ಕ್ರಮವಾಗಿ ಅರಣ್ಯ ಇಲಾಖೆಯಿಂದ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಿ ಆನೆಗಳನ್ನು ಕಾಡಿಗಟ್ಟುವ ಕೆಲಸ ಮಾಡಲಾಗುತಿದೆ. ಈ ನಡುವೆ ಆನೆಗಳ ಹಿಂಡು ಕಂಡು ರೈತರೊಬ್ಬರು ತೆಂಗಿನ ಮರವೇರಿದ್ದು, ಅಲ್ಲಿಂದಲೇ ವಿಡಿಯೋ ಮಾಡಿದ್ದಾರೆ. ಆದರೆ ಅದು ಎಲ್ಲಿಯ ದೃಶ್ಯಗಳೆಂಬುದು ಖಚಿತವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net