

ಹುಬ್ಬಳ್ಳಿ: ಧಾರವಾಡ ಜಿಲ್ಲಾಡಳಿತ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ಸಹಯೋಗದಲ್ಲಿ ‘ಆಪರೇಷನ್ ಅಭ್ಯಾಸ್’ ಕಾರ್ಯಕ್ರಮದಡಿ ನಗರದ ವಿಮಾನ ನಿಲ್ದಾಣದಲ್ಲಿ ಸೋಮವಾರ ತಾಲೀಮು (ಮಾಕ್ ಡ್ರಿಲ್) ನಡೆಯಿತು.
ವಿಪತ್ತು ಸಂಭವಿಸಿದ ತತಕ್ಷಣ ಮೊದಲ ತುರ್ತು ಪರಿಸ್ಥಿತಿ ಎಚ್ಚರಿಕೆಗಾಗಿ ಸೈರನ್ ಮೊಳಗಿತು. ಎರಡನೇ ಸೈರನ್ ಶಬ್ದವನ್ನು
ಬೆಂಕಿ ಅವಘಡ ಸಂಭವಿಸಿದ ನಂತರ ಧ್ವನಿಸಿತು. ಕೂಡಲೇ ನಾಗರಿಕರು ಕೈಗೊಳ್ಳಬೇಕಾದ ಎಚ್ಚರಿಕೆ ಹಾಗೂ ದುರ್ಘಟನೆಯಲ್ಲಿ ಸಿಲುಕಿರುವ ನಾಗರಿಕರನ್ನು ಸುಸಜ್ಜಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಆರೋಗ್ಯ ಇಲಾಖೆಯಿಂದ ತುರ್ತಾಗಿ ಅಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ನಿಲ್ದಾಣದ ಕೂಗಳತೆ ದೂರದಲ್ಲೇ ಪ್ರಥಮ ಚಿಕಿತ್ಸಾ ಕೇಂದ್ರ ಸ್ಥಾಪಿಸಿ, ಕಾಳಜಿ ಕೇಂದ್ರ ಹಾಗೂ ಕಮಾಂಡಿಂಗ್ ಸೆಂಟರ್ ರೂಂ ತೆರೆದು ರಕ್ಷಣಾ ಕಾರ್ಯ ಕೈಗೊಳ್ಳಲಾಯಿತು. ತುರ್ತು ಪರಿಸ್ಥಿತಿ ವೇಳೆ ವಿವಿಧ ಇಲಾಖೆಗಳಿಂದ ಯಾವ ರೀತಿ ಕಾರ್ಯ
ನಿರ್ವಹಣೆ ಮಾಡಬೇಕು ಮತ್ತು ಸಾರ್ವಜನಿಕರು ಯಾವ ರೀತಿ ಸಹಕಾರ ನೀಡಬೇಕು ಎಂಬುದನ್ನು ಮನವರಿಕೆ ಮಾಡಿಕೊಡಲು ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಭದ್ರತಾ ಪಡೆ ಪ್ರಾತ್ಯಕ್ಷಿಕೆ ನೀಡಿದವು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ದಿವ್ಯಪ್ರಭು, ಹೊರಗಡೆಯಿಂದ ವಿಮಾನ ನಿಲ್ದಾಣದ ಮೇಲೆ ದಾಳಿಯಾದಾಗ ಪರಿಸ್ಥಿತಿ ಹೇಗೆ ನಿರ್ವಹಿಸಬೇಕೆಂಬುದನ್ನು ತಿಳಿಸಿದ್ದೇವೆ. ಬೆಂಕಿ, ದಟ್ಟ ಹೊಗೆ ಹರಡಿದಾಗ ವಿಮಾನ ನಿಲ್ದಾಣದಲ್ಲಿನ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸುವ ನಿಟ್ಟಿನಲ್ಲಿ ಸಿಬ್ಬಂದಿ ರಿಹರ್ಸಲ್ ಮಾಡಿದ್ದಾರೆ. ಅವಘಡದ ಬಗ್ಗೆ ಎಟಿಸಿ (ಏರ್ ಟ್ರಾಫಿಕಲ್ ಕಂಟ್ರೋಲ್)ಗೆ ಮಾಹಿತಿ ನೀಡಿ
ವಿಮಾನ ಸಂಚಾರ ರದ್ದುಪಡಿಸುವ ಮತ್ತು ಮಾರ್ಗ ಬದಲಾಯಿಸುವ ಬಗ್ಗೆಯೂ ತರಬೇತಿ ನೀಡಲಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಾವು-ನೋವು ಸಂಭವಿಸದಂತೆ ವಿಪತ್ತು ನಿರ್ವಹಣೆ ಮಾಡುವುದೇ ಮಾಕ್ ಡ್ರಿಲ್ ಉದ್ದೇಶವಾಗಿದೆ ಎಂದರು.
ಅಣಕು ಪ್ರದರ್ಶನದಲ್ಲಿ ಭದ್ರತೆಗೆ ಸಂಬಂಧಿಸಿದಂತೆ ಬಳಕೆಗೆ ಬೇಕಾದ ಎಲ್ಲ ಸಾಮಗ್ರಿ ಬಳಸಲಾಗಿತ್ತು. ವಿವಿಧ ಇಲಾಖೆಗಳ ಸಮನ್ವಯತೆಯೂ ಉತ್ತಮವಾಗಿತ್ತು. ನಮ್ಮಲ್ಲಿರುವ ಉಪಕರಣಗಳನ್ನು ಎಲ್ಲಿ, ಹೇಗೆ ಬಳಸಬೇಕು ಮತ್ತು ಅವುಗಳ ನ್ಯೂನ್ಯತೆ ಖಚಿತಪಡಿಸಿಕೊಳ್ಳಲು ಈ ಅಣಕು ಪ್ರದರ್ಶನ ಸಹಕಾರಿಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಅಣಕು ಪ್ರದರ್ಶನ ಮಾಡಿ ಯಶಸ್ವಿಯಾಗಿದ್ದೇವೆ. ವರದಿಯನ್ನು ಸರ್ಕಾರಗಳಿಗೆ ಕಳುಹಿಸಿಕೊಡಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ, ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ ಸಿ.ಆರ್., ಜಿ.ಪಂ. ಸಿಇಒ ಭುವನೇಶ ಪಾಟೀಲ, ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶ ಕುಮಾರ, ಡಿಎಚ್‌ಒ ಡಾ.ಎಸ್.ಎಂ. ಹೊನಕೇರಿ ಇತರರು ಇದ್ದರು.