ರಾಜ್ಯಮಟ್ಟದ ಯುವಜನೋತ್ಸವಕ್ಕೆ ತೆರೆ: ಸಾಂಸ್ಕೃತಿಕ ಕಲೆಗಳ ಅನಾವರಣ

Published on

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿರುವ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ನಾಡಿನ ವಿವಿಧ ಜಿಲ್ಲೆಗಳ ಸಾಂಸ್ಕೃತಿಕ ಕಲಾಲೋಕವೇ ನೆರೆದಿತ್ತು.

ಕರುನಾಡು ಗ್ರಾಮೀಣ ಕಲೆ ಜಾನಪದ ನೃತ್ಯ, ಕುಣಿತವನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿಯಲು ಮುಗಿಬೀಳುತ್ತಿದ್ದರು. ಇನ್ನು ಮಕ್ಕಳು, ಯುವಕರು ಜಾನಪದ ಕಲಾವಿದರೊಂದಿಗೆ ಸೆಲ್ಫಿ ಫೋಟೊಗೆ ಪೋಸು ಕೊಡುವುದು ಸಾಮಾನ್ಯವಾಗಿತ್ತು.

ನಗರದ ವಾಲ್ಮೀಕಿ ಭವನದಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ವತಿಯಿಂದ ಭಾನುವಾರ ಮುಕ್ತಾಯಗೊಂಡ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ನಾಡಿನ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 30ಕ್ಕೂ ಹೆಚ್ಚು ಕಲಾತಂಡಗಳು ಸಾಂಸ್ಕೃತಿಕ, ಜಾನಪದ ಕಲಾಪ್ರಪಂಚವನ್ನು ಅನಾವರಣ ಮಾಡಿದ್ದು, ನೋಡುಗರಿಗೆ ಮುದ ನೀಡಿದವು.

ಕರಗ ಕುಣಿತ, ವೀರಗಾಸೆ, ಜಾಂಜ್ ಮೇಳ, ವಾದ್ಯ, ಕಂಸಾಳೆ ಕುಣಿತ, ಡೊಳ್ಳು ಕುಣಿತ ಜೊತೆಗೆ ಲಲನೆಯರ ನವಿಲಿನ ನರ್ತನ ಸದಾ ಒತ್ತಡದಲ್ಲಿರುವ ನಗರದ ಜನತೆಗೆ ನಾಡಿನ ಸಂಸ್ಕೃತಿ ಕಲಾ ಹಿರಿಮೆ ಪರಿಚಯ ಮಾಡಿಸಿತು.

ಯುವಜನೋತ್ಸವದ ಸಾಂಸ್ಕೃತಿಕ ಲೋಕದಲ್ಲಿ ಕರುನಾಡಿನ ವಿವಿಧ ಕಲೆಗಳು ಅನಾವರಣಗೊಂಡವು. ಜೊತೆಗೆ ಸಿಳ್ಳೆ, ಕೇಕೆ, ಚಪ್ಪಾಳೆ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಿದರು. ರಾಮನಗರ ಜಿಲ್ಲೆಯ ತಲೆ ಮೇಲೆ ದೇವರ ಮೂರ್ತಿಯನ್ನು ಹೊತ್ತುಕೊಂಡು ಕುಣಿಯುವ ಪೂಜಾ ಕುಣಿತವನ್ನು ಎಲ್ಲರು ಬೆರಗಾಗಿ ನೋಡಿದರು.
ಕಾಡು ಜನರ ನೃತ್ಯ, ವೇಷಭೂಷಣ, ಕುಣಿತ, ನಾದಕ್ಕೆ ತಕ್ಕ ಹೆಜ್ಜೆ, ಕಾಡುಜನರ ಸಂಸ್ಕೃತಿ ಯುವಜನೋತ್ಸವದಲ್ಲಿ ಪರಿಚಯವಾಯಿತು.

ಕಣ್ಮನ ಸೆಳೆದ ಜಾನಪದ ವೈಭವ
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕಲಾತಂಡಗಳು ಜಾನಪದ ವೈಭವವನ್ನೇ ಸೃಷ್ಟಿಸಿದವು. ಚಾಮರಾಜ ನಗರ ಜಿಲ್ಲೆಯ ತಂಡದ ಡೊಳ್ಳು ಕುಣಿತ, ಹಾವೇರಿ ಜಿಲ್ಲೆಯ ಗೊರವ, ಪೂಜಾ ಕುಣಿತ, ವೀರಾಗಾಸೆ, ಮಂಡದ ಜಾತ್ರೆ ಉತ್ಸವದ ನೃತ್ಯ, ನವಿಲು ಕುಣಿತ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡೊಳ್ಳು ಕುಣಿತ, ಮೈಸೂರು ಜಿಲ್ಲೆಯ ಕಂಸಾಳೆ ನೃತ್ಯ, ರಾಮನಗರದ ಕರಗ, ದೇವಿ ಕುಣಿತ, ಸೋಮನ ಕುಣಿತ, ಉಡುಪಿ ಜಿಲ್ಲೆಯ ತಂಡದ ಕಂಗಿಲು ಕುಣಿತ ಎಲ್ಲರ ಮನಸೂರೆಗೊಳಿಸಿದವು.

ತುಳುನಾಡಿನ ಕಂಗಿಲು ಪ್ರದರ್ಶನ
ತುಳುನಾಡಿನಲ್ಲಿ ಕಂಡು ಬರುವ ಪ್ರದರ್ಶನ ಕಲೆಗಳಲ್ಲಿ ಕಂಗಿಲು ಕೂಡ ಒಂದು. ಕಂಗಿಲು ಕುಣಿತ ಮಾರಿ ಓಡಿಸುವ ಆಶಯವನ್ನು ಹೊಂದಿರುವ ಒಂದು ಜನಪದ ಕುಣಿತ. ಕರಾವಳಿ ಕರ್ನಾಟಕ ಭಾಗದಲ್ಲಿ ಈ ಕುಣಿತವನ್ನು ಒಂದು ನಿರ್ದಿಷ್ಟ ಜನಾಂಗದವರು ನಡೆಸುತ್ತಾರೆ. ಮುಖ್ಯವಾಗಿ ಮುಂಡಾಲ ಜನಾಂಗದವರು ಕಂಗಿಲು ಕುಣಿತವನ್ನು ಒಂದು ಆರಾಧನಾ ಪ್ರಕಾರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಗೊಡ್ಡ ಹಾಗೂ ಮುಂಡಾಲ ಜನಾಂಗದವರು ತಮ್ಮ ಮಾತೃ ಭಾಷೆಯಾದ ತುಳುವನ್ನು ಬಳಸಿಕೊಂಡು ಈ ಪ್ರಕಾರದ ಆಚರಣೆ ಮಾಡುತ್ತಾರೆ. ಕಂಗಿಲು ಕುಣಿತದ ಪಾತ್ರಧಾರಿಗಳು ತಮ್ಮ ಉಡುಪು ಹಾಗೂ ತಲೆಯ ಮೇಲೆ ತೆಂಗಿನ ತಿರಿಯನ್ನು ಲಂಗದ ರೀತಿಯಲ್ಲಿ ಬಳಸುತ್ತಾರೆ. ಇಂತಹ ಕಂಗಿಲು ಕುಣಿತ ಯುವನೋತ್ಸವದಲ್ಲಿ ಎಲ್ಲರ ಗಮನ ಸೆಳೆಯಿತು.

ಎಂಟು ವಿಭಾಗದಲ್ಲಿ ಸ್ಪರ್ಧೆ
ರಾಜ್ಯಮಟ್ಟದ ಯುವಜನೋತ್ಸವದ ಕಾರ್ಯಕ್ರಮದಲ್ಲಿ ಎಂಟು ವಿವಿಧ ವಿಭಾಗದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಶ್ರೀಮಹರ್ಷಿ ವಾಲ್ಮೀಕಿ ಭವನದಲ್ಲಿ ಜನಪದ ನೃತ್ಯ ಗುಂಪು ಸ್ಪರ್ಧೆ, ಎಂಆರ್‌ಕೆ ಫಂಕ್ಷನ್ ಹಾಲ್ನಲ್ಲಿ ಜನಪದ ನೃತ್ಯ ವೈಯಕ್ತಿಕ, ವಾಲ್ಮೀಕಿ ಭವನದಲ್ಲಿ ಜನಪದ ಗೀತೆ ಗುಂಪು, ಗುರು ಫಂಕ್ಷನ್ ಹಾಲ್‌ನಲ್ಲಿ ಜನಪದ ಗೀತೆ ವೈಯಕ್ತಿಕ, ಕರ್ನಾಟಕ ಫಂಕ್ಷನ್‌ಹಾಲ್ನಲ್ಲಿ ಭಿತ್ತಿ ಪತ್ರ ರಚನೆ (ಪೋಸ್ಟರ್ ಮೇಕಿಂಗ್), ಬಿಡಿಎಎ ಫುಟ್ಬಾಲ್ ಮೈದಾನದ ಸಭಾಭವನದಲ್ಲಿ ಘೋಷಣೆ (ವೈಯಕ್ತಿಕ) ಮತ್ತು ಕಥೆ ಬರೆಯುವುದು (ವೈಯಕ್ತಿಕ), ಜಿಲ್ಲಾ ಕ್ರೀಡಾಂಗಣದಲ್ಲಿ ಫೋಟೋಗ್ರಫಿ (ಛಾಯಾಚಿತ್ರಣ) (ವೈಯಕ್ತಿಕ) ಸ್ಪರ್ಧೆಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net