ನಂದಿಗಿರಿ ಪ್ರವಾಸಿಗರಿಗೆ ಮುಕ್ತ : ಇಂದಿನಿಂದಲೇ ಪ್ರವೇಶಕ್ಕೆ ಅವಕಾಶ, ವಾರಾಂತ್ಯ ನಿರ್ಬಂಧ ಮುಂದುವರಿಕೆ

30CBP1b
Published on
ಚಿಕ್ಕಬಳ್ಳಾಪುರ: ಮುಂಗಾರು ಮಳೆಯ ಸಮಯದಲ್ಲಿ ಬೆಟ್ಟ ಕುಸಿದು ರಸ್ತೆ ಸಂಪರ್ಕ ಕಡಿತಗೊಂಡು ತಿಂಗಳುಗಟ್ಟಲೇ ಬಂದ್ ಆಗಿದ್ದ ‘ಕರ್ನಾಟಕದ ಊಟಿ’ ನಂದಿ ಗಿರಿಧಾಮ ಪ್ರವೇಶಕ್ಕೆ ಬುಧವಾರದಿಂದ ಪ್ರವಾಸಿಗರಿಗೆ ಅವಕಾಶ ಸಿಗಲಿದೆ.
ಧಾರಾಕಾರ ಮಳೆಯಿಂದಾಗಿ ಬೆಟ್ಟಕ್ಕೆ ಹೊಂದಿಕೊಂಡಿರುವ ಬ್ರಹ್ಮಗಿರಿಯಲ್ಲಿ ಆಗಸ್ಟ್ 25ರಂದು ದೊಡ್ಡ ದೊಡ್ಡ ಬಂಡೆಗಳು ಉರುಳಿದ್ದರ ಜತೆಗೆ ಭೂ ಕುಸಿತ ಉಂಟಾಗಿ ಡಾಂಬರು ರಸ್ತೆ ಕೊಚ್ಚಿ ಹೋಗಿತ್ತು. ಜತೆಗೆ ರಾಶಿ ರಾಶಿ ಮಣ್ಣು ಅಡ್ಡಲಾಗಿ ಬಿದ್ದಿದ್ದರಿಂದ ರಸ್ತೆ ಮಾರ್ಗ ಬಂದ್ ಆಗಿತ್ತು. ತ್ವರಿತ ಕಾರ್ಯಾಚರಣೆ ಕೈಗೊಂಡು ಕಲ್ಲು, ಬಂಡೆ, ಮಣ್ಣನ್ನು ತೆರವುಗೊಳಿಸಿ, ತಾತ್ಕಾಲಿಕವಾಗಿ ರಸ್ತೆ ನಿರ್ಮಿಸಲಾಗಿತ್ತಾದರೂ ಅದೂ ಸಹ ಒಂದೆರಡು ದಿನದಲ್ಲಿ ಮತ್ತೆ ಮಳೆಗೆ ಸಂಪೂರ್ಣವಾಗಿ ಕಿತ್ತು ಹೋಗಿತ್ತು. ಇದರಿಂದ ಮುಂಜಾಗ್ರತಾ ಕ್ರಮವಾಗಿ ನಂದಿಬೆಟ್ಟಕ್ಕೆ ವಾಹನ ಮತ್ತು ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿತ್ತು.
80 ಲಕ್ಷ ರೂ. ವೆಚ್ಚದ ಕಾಮಗಾರಿ: ನಂದಿ ಗಿರಿಧಾಮದ ರಸ್ತೆಯ ಸರಪಳಿ 2.5 ಕಿ.ಮೀ.ನ ತಿರುವಿನ 8ರಲ್ಲಿ ಪ್ರಾಕೃತಿಕ ವಿಕೋಪದಿಂದ ಕೊಚ್ಚಿ ಹೋಗಿರುವ ರಸ್ತೆ ಮತ್ತು ಮೋರಿ, ತಡೆಗೋಡೆಯನ್ನು 80 ಲಕ್ಷ ರೂ. ವೆಚ್ಚದಲ್ಲಿ ಮರು ನಿರ್ಮಿಸಲಾಗಿದೆ. ರಸ್ತೆ ಕಾಮಗಾರಿಗೆ ಲೋಕೋಪಯೋಗಿ ಇಲಾಖೆ ಸರ್ಕಾರಕ್ಕೆ ಕ್ರಿಯಾ ಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸಿತ್ತು. ಮೂರು ತಿಂಗಳ ಬಳಿಕ ರಸ್ತೆ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸಂಚಾರಕ್ಕೆ ಯೋಗ್ಯವಾಗಿರುವುದರ ಬಗ್ಗೆ ದೃಢೀಕರಣ ನೀಡಿದ್ದಾರೆ.
ವಾರಾಂತ್ಯ ಎಂದಿನಂತೆ ನಿರ್ಬಂಧ: ಕರೊನಾ ಸೋಂಕು ಇನ್ನೂ ದೂರವಾಗಿಲ್ಲ, ಜತೆಗೆ ಹೊಸ ತಳಿಯ ಆತಂಕ ಬೇರೆ ಕಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಎಂದಿನಂತೆ ವಾರಾಂತ್ಯದ ಶನಿವಾರ ಮತ್ತು ಭಾನುವಾರ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಪ್ರವಾಸಿ ತಾಣಕ್ಕೆ ರಜೆ ದಿನಗಳಂದು ಸಾವಿರಾರು ಪ್ರವಾಸಿಗರು ಆಗಮಿಸುವುದರಿಂದ ಜನದಟ್ಟಣೆ ಹೆಚ್ಚಾಗಿರಲಿದ್ದು ಜನ ಗುಂಪು ಸೇರುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಈ ಹಿನ್ನೆಲೆಯಲ್ಲಿ ತಜ್ಞರ ಸಲಹೆಯಂತೆ ಜಿಲ್ಲಾಡಳಿತ ವಾರದಲ್ಲಿ ಎರಡು ದಿನದ ನಿರ್ಬಂಧ ಮುಂದುವರಿಸಿದೆ. ಗಿರಿಧಾಮದ ಹೋಟೆಲ್ ಮತ್ತು ವಸತಿ ಗೃಹಗಳಲ್ಲಿ ಮುಂಗಡವಾಗಿ ಕೊಠಡಿಗಳನ್ನು ಕಾಯ್ದಿರಿಸಿದವರಿಗೆ ಮಾತ್ರ ವಾರಾಂತ್ಯದ ದಿನಗಳಂದು ಪ್ರವೇಶವಿರಲಿದ್ದು ಕೊಠಡಿಗಳಲ್ಲಿ ತಂಗಬಹುದಾಗಿದೆ.
ಗಿರಿಧಾಮದ ನಿಸರ್ಗ ಕಾಪಾಡಿ: ಪ್ರವಾಸಿಗರ ಆಗಮನವಿಲ್ಲದೆ ಬಿಕೋ ಎನ್ನುತ್ತಿದ್ದ ಗಿರಿಧಾಮದಲ್ಲಿ ಮಾನವ ಚಟುವಟಿಕೆಗೆ ಸಂಪೂರ್ಣ ಕಡಿವಾಣ ಬಿದ್ದಿತ್ತು. ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಜನರ ಅಲೆದಾಟ, ತ್ಯಾಜ್ಯ ಕಿರಿಕಿರಿ ತಪ್ಪಿದ್ದರಿಂದ ಪ್ರಾಕೃತಿಕ ಸೊಬಗಿನಲ್ಲಿ ಪ್ರಾಣಿ-ಪಕ್ಷಿಗಳು ಅಡೆತಡೆ ಇಲ್ಲದೆ ಇದ್ದವು. ಇದೀಗ ಪ್ರವಾಸಿಗರ ಪ್ರವೇಶಕ್ಕೆ ಮತ್ತೆ ಅವಕಾಶ ಸಿಗುತ್ತಿದ್ದಂತೆ ನೈಸರ್ಗಿಕ ವಾತಾವರಣದಲ್ಲಿ ಏರುಪೇರಾಗುತ್ತದೆ ಎಂಬ ಚಿಂತೆ ಕಾಡುತ್ತಿದ್ದು ಪ್ರಕೃತಿಯ ರಮಣೀಯತೆ ಮತ್ತು ಸಸ್ಯಗಳು ಹಾಗೂ ಜೀವವೈವಿಧ್ಯದ ಕಾರಣದಿಂದ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದು ವಿಶಿಷ್ಟವಾಗಿ ಗುರುತಿಸಿಕೊಂಡಿರುವ ನಂದಿಗಿರಿಧಾಮದಲ್ಲಿ ಸ್ವಚ್ಛತೆ, ನಿಸರ್ಗವನ್ನು ಕಾಪಾಡಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ.
ಪ್ರವಾಸಿಗರ ಖುಷಿ : ಹಲವು ತಿಂಗಳುಗಳ ಬಳಿಕ ನಂದಿಗಿರಿಗೆ ಪ್ರವೇಶ ಸಿಗುತ್ತಿರುವುದು ಪ್ರವಾಸಿಗರ ಸಂತಸಕ್ಕೆ ಕಾರಣವಾಗಿದೆ. ಈ ಹಿಂದೆ ನಿಷೇಧದ ನಡುವೆಯೂ ಹಲವರು ಎಂದಿನಂತೆ ನಂದಿಬೆಟ್ಟ ವೀಕ್ಷಿಸಲು ಆಗಮಿಸುತ್ತಿದ್ದರು. ಆಗ ಪೊಲೀಸರು ಎಚ್ಚರಿಕೆ ನೀಡಿ ವಾಪಸ್ ಕಳುಹಿಸುತ್ತಿದ್ದರು, ಇದೀಗ ಗಿರಿಧಾಮದಲ್ಲಿ ಅಡ್ಡಾಡಲು ಅವಕಾಶ ಸಿಗುತ್ತಿರುವುದರಿಂದ ಸಂತಸ ವ್ಯಕ್ತವಾಗಿದೆ.
ವಾಹನಗಳಿಗೆ ಮಿತಿ: ಪ್ರವೇಶದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕೆಯ ಕೈಗೊಂಡಿದೆ. ವಾಹನಗಗಳ ಸಂಖ್ಯೆಗೆ ಮಿತಿ ಹೇರಿದ್ದು ಗಿರಿಧಾಮದ ವಾಹನ ನಿಲುಗಡೆ ಪ್ರದೇಶದಲ್ಲಿನ ಸ್ಥಳಾವಕಾಶಕ್ಕೆ ಅನುಗುಣವಾಗಿ 350 ನಾಲ್ಕು ಚಕ್ರಗಳ ಲಘು ಮೋಟಾರು ವಾಹನಗಳು ಮತ್ತು 1,500 ದ್ವಿಚಕ್ರವಾಹನಗಳಿಗೆ ಪಾಸ್ ನೀಡಿ, ಬಿಡಲಾಗುತ್ತದೆ.  ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಪಾಸ್ ಪಡೆಯಬಹುದಾಗಿದೆ.
ಸಾರಿಗೆ ಸಂಸ್ಥೆ ಬಸ್ ಸೇವೆ : ನಂದಿ ಗಿರಿಧಾಮ ಸಂಪರ್ಕಿಸುವ ರಸ್ತೆ ಕಾಮಗಾರಿ ಪೂರ್ಣಗೊಂಡಿರುವುದರಿಂದ ಎಂದಿನಂತೆ ಗಿರಿಧಾಮಕ್ಕೆ ಬುಧವಾರದಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಸಂಚರಿಸಲಿದ್ದು ಪ್ರವಾಸಿಗರು ಸದ್ವಿನಿಯೋಗಪಡಿಸಿಕೊಳ್ಳಬೇಕು ಎಂದು ನಿಗಮದ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ನಂದಿ ಗಿರಿಧಾಮದ ಪ್ರವೇಶಕ್ಕೆ ಹಲವು ಷರತ್ತಿಗೊಳಪಟ್ಟು ಬುಧವಾರದಿಂದ ಅವಕಾಶ ಸಿಗಲಿದೆ. ಪ್ರತಿಯೊಬ್ಬರೂ ಸುರಕ್ಷತೆ, ಸ್ವಚ್ಛತೆ, ಸಂರಕ್ಷಣೆಯ ನಿಯಮಗಳನ್ನು ಪಾಲಿಸಿ ಪ್ರವಾಸಿತಾಣ ವೀಕ್ಷಿಸಬಹುದು.   ಆರ್.ಲತಾ, ಜಿಲ್ಲಾಧಿಕಾರಿ ನಂದಿಗಿರಿ ಧಾಮದಲ್ಲಿ ನಿಗಾವಹಿಸಲು ಪೊಲೀಸ್ ಸಿಬ್ಬಂದಿ ನಿಯೋಜಿಸಿದ್ದು ಕರೊನಾ ನಿಯಂತ್ರಣ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತದೆ. ಬೆಟ್ಟದ ತಪ್ಪಲಿನ ಪ್ರವೇಶ ದ್ವಾರ ಸಮೀಪದ ಚೆಕ್ ಪೋಸ್ಟ್ ನಲ್ಲಿ ಎಂದಿನಂತೆ ವಾಹನಗಳ ತಪಾಸಣೆ ನಡೆಯಲಿದೆ.   ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net