

ಅರಕೇರಾ: ಜನರು ಜಾಗೃತಿಯೊಂದಿಗೆ ಬದುಕಬೇಕು. ನಮಗೆ ನೀಡಿದ ಹಕ್ಕುಗಳನ್ನು ಪರಿಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಗುರುಲಿಂಗಮ್ಮ ಹೇಳಿದರು.
ಪಟ್ಟಣದ ಹಿರೇಮಠದ ಅಂಗಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ.ಸಿ ಟ್ರಸ್ಟ್‌ನಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಶನಿವಾರ ಏರ್ಪಡಿಸಿದ್ದ ಸಾಮಾಜಿಕ ಬೀದಿ ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಲಿಯುವ ಮತ್ತು ನಲಿಯುವ ವಯಸ್ಸಿನ ಮಕ್ಕಳನ್ನು ಶಾಲೆಗೆ ಕಳಿಸಬೇಕು. ಬಾಲ್ಯ ವಿವಾಹದಿಂದ ದೈಹಿಕ ಮತ್ತು ಮಾನಸಿಕವಾಗಿ ಅಡ್ಡಪರಿಣಾಮಗಳಾಗುತ್ತವೆ. ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಅಸ್ವಚ್ಛತೆಯಿಂದ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ವೈಯಕ್ತಿಕ ಶೌಚಗೃಹಗಳನ್ನು ನಿರ್ಮಿಸಿಕೊಳ್ಳಬೇಕು. ಬಹಿರ್ದೆಸೆಗೆ ಅವಕಾಶ ಕೊಡಬಾರದು. ಅನವಶ್ಯವಾಗಿ ನೀರನ್ನು ಹೊರ ಬಿಡಬಾರದು ಎಂದು ಗುರುಲಿಂಗಮ್ಮ ಕೋರಿದರು.
ಜನಧ್ವನಿ ಕಲಾತಂಡದಿಂದ ಬೀದಿ ನಾಟಕದ ಮೂಲಕ ಬಾಲ್ಯವಿವಾಹ, ಸ್ವಚ್ಛತೆ, ಶೌಚಗೃಹ, ನೀರನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಎಸ್‌ಕೆಡಿಆರ್‌ಡಿಪಿ ವಲಯ ಮೇಲ್ವಿಚಾರಕ ಅಮಿತ್, ಮುಖಂಡ ಮೃತ್ಯುಂಜಯ್ಯ ಸ್ವಾಮಿ ಹಿರೇಮಠ, ಸೇವಾ ಪ್ರತಿನಿಧಿಗಳಾದ ಶಾರದಮ್ಮ, ಬಸ್ಸಮ್ಮ ಇತರರಿದ್ದರು.