ಮದ್ಯದಂಗಡಿ ಬದಲು ಗ್ರಂಥಾಲಯ ತೆರೆಯಿರಿ

SDP MADYADANGADI
Published on

ಸಿದ್ದಾಪುರ: ಪಟ್ಟಣದ ಹೊಸೂರಿನಲ್ಲಿ ಮದ್ಯದಂಗಡಿ ಬೇಡ ಎಂದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಗಾಂಧೀಜಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಚೌಡಪ್ಪ ನಾಯ್ಕ ಅವರ ವೇಷ ಧರಿಸಿ ಬಂದ ವಿದ್ಯಾರ್ಥಿಗಳು ಸೊರಬ ರಸ್ತೆಯಿಂದ ಹೊಸೂರಗೆ ಸ್ಥಳಾಂತರಗೊಂಡ ಮದ್ಯದಂಗಡಿ ಎದುರು ಅಬಕಾರಿ ಅಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.

ಅಬಕಾರಿ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಶನಿವಾರವೇ ಹೊಸೂರು ಗ್ರಾಮಸ್ಥರು ತಾಲೂಕಾಡಳಿತ ಸೌಧದ ಎದುರು ನಡೆಸಿದ್ದ ಪ್ರತಿಭಟನೆಯಲ್ಲಿ ಆಗ್ರಹಿಸಿದ್ದರು. ಸೋಮವಾರ ಮನವಿ ಸ್ವೀಕರಿಸಿದ ಅಬಕಾರಿ ನಿರೀಕ್ಷಕ ವಿಶ್ವನಾಥ ಭಟ್ಟ, ನೀವು ಇಂದು ನೀಡಿದ ಮನವಿಯನ್ನು ಮೇಲಧಿಕಾರಿಗಳಿಗೆ ಕಳುಹಿಸುತ್ತೇನೆ ಹಾಗೂ ಇಲ್ಲಿಯ ಮಾಹಿತಿ ನೀಡುತ್ತೇನೆ ಎಂದು ಭರವಸೆ ನೀಡಿದರು.

ಹೋರಾಟದ ಪ್ರಮುಖ ತೋಟಪ್ಪ ನಾಯ್ಕ ಮಾತನಾಡಿ, ಯಾವುದೇ ಕಾರಣಕ್ಕೂ ಹೊಸೂರಿನಲ್ಲಿ ಮದ್ಯದಂಗಡಿ ಮುಂದುವರಿಯಲು ಬಿಡುವುದಿಲ್ಲ. ಅಗತ್ಯ ದಾಖಲೆ ಇಲ್ಲದೇ ಅಂಗಡಿ ತೆರೆದಿದ್ದಾರೆ. ಒಂದುವೇಳೆ ಮುಂದುವರಿಸಿದ್ದೇ ಆದರೆ, ನಾವು ಕಾನೂನು ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪಟ್ಟಣದ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಶಾಸಕ ಭೀಮಣ್ಣ ನಾಯ್ಕ ಅವರಿಗೆ ಗಾಂಧೀಜಿ ಹಾಗೂ ಚೌಡಪ್ಪ ನಾಯ್ಕ ವೇಷದಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಮನವಿ ಸಲ್ಲಿಸಿ ಮದ್ಯದ ಅಂಗಡಿ ನಮ್ಮೂರಲ್ಲಿ ಬೇಡ ಬೇಕಾದರೆ ಗ್ರಂಥಾಲಯ ತೆರೆಯಿರಿ ಎಂದು ಮನವಿ ಮಾಡಿದರು.

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ನಾನು ಕ್ಷೇತ್ರದ ಜನತೆಯ ಪರವಾಗಿರುತ್ತೇನೆ. ಏನು ಆಗಿದೆ ಎಂದು ನೋಡಿ ವಿಚಾರಿಸುತ್ತೇನೆ ಎಂದು ಹೇಳಿದರು.

ಮದ್ಯದಂಗಡಿ ಸ್ಥಳಾಂತರಿಸಲು ಒತ್ತಾಯಿಸಿ ತಹಸೀಲ್ದಾರ್, ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದ್ದೇವೆ. ನಮ್ಮ ಮನವಿಗೆ ಸ್ಪಂದನೆ ಸಿಗದಿದ್ದರೆ ಸಚಿವರ ಮತ್ತು ಅಬಕಾರಿ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ. ದಾಖಲೆಗಳು ಸರಿ ಇಲ್ಲದೇ ಇದ್ದರೂ ಸ್ಥಳೀಯ ಅಧಿಕಾರಿಗಳು ಒತ್ತಡಕ್ಕೆ ಮಣಿದು ಮದ್ಯದಂಗಡಿ ಸ್ಥಳಾಂತರಕ್ಕೆ ಅವಕಾಶ ಕೊಟ್ಟಿದ್ದಾರೆ. ಈ ಕುರಿತು ಸಂಬಂಧಪಟ್ಟ ದಾಖಲೆಗಳೊಂದಿಗೆ ಮುಂದಿನ ಹೋರಾಟ ಮಾಡುತ್ತೇವೆ.

| ತೋಟಪ್ಪ ನಾಯ್ಕ, ಹೋರಾಟದ ಪ್ರಮುಖರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net