ಮುಂಡರಗಿ ಪಟ್ಟಣದಲ್ಲಿ ಬಯಲೇ ಶೌಚಗೃಹ

10 MDG-1
Published on

ಮುಂಡರಗಿ: ಪಟ್ಟಣಕ್ಕೆ ಬೇರೆ ಊರುಗಳಿಂದ ಬರುವ ಜನರು ಮೂತ್ರವಿಸರ್ಜನೆ ಹಾಗೂ ಶೌಚಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಿದೆ.

ಪಟ್ಟಣಕ್ಕೆ ತಾಲೂಕಿನ ವಿವಿಧ ಗ್ರಾಮಗಳಿಂದ, ಬೇರೆ ತಾಲೂಕುಗಳಿಂದ, ಗಡಿ ಜಿಲ್ಲೆಗಳಾದ ಕೊಪ್ಪಳ, ವಿಜಯನಗರ ಭಾಗದ ಗ್ರಾಮಗಳಿಂದ ವ್ಯಾಪಾರ ವಹಿವಾಟು, ಶಾಲಾ ಕಾಲೇಜು ಮೊದಲಾದ ಕಾರ್ಯಗಳಿಗೆ ಸಾವಿರಾರು ಜನ ಪ್ರತಿದಿನ ಬರುತ್ತಾರೆ. ಪಟ್ಟಣದ ಹೇಮರಡ್ಡಿ ಮಲ್ಲಮ್ಮ ವೃತ್ತ, ಕನಕದಾಸ ವೃತ್ತ, ಕನ್ನಿಕಾಪರಮೇಶ್ವರಿ ದೇವಸ್ಥಾನ ಭಾಗದಲ್ಲಿ ಮಾತ್ರ ಶೌಚಗೃಹಗಳಿದ್ದು, ಅತಿ ಹೆಚ್ಚು ಜನಸಂದಣಿಯ ಕೊಪ್ಪಳ ಸರ್ಕಲ್ ಸೇರಿ ಮತ್ತಿತರ ಪ್ರಮುಖ ಭಾಗದಲ್ಲಿ ಶೌಚಗೃಹ ಇಲ್ಲ. ಬಂಡಾಯ ಭೀಮರಾಯ ವೃತ್ತ (ಕೊಪ್ಪಳ ಸರ್ಕಲ್), ಹೆಸರೂರು ಸರ್ಕಲ್, ಎಪಿಎಂಸಿ ಭಾಗ, ಮುಖ್ಯಬಜಾರ್ ಭಾಗದಲ್ಲಿ ಶೌಚಗೃಹ ನಿರ್ಮಿಸುವ ಅಗತ್ಯವಿದೆ.

ಪಟ್ಟಣದ ಕೊಪ್ಪಳ ಸರ್ಕಲ್ ಹೆಚ್ಚು ಜನಸಂದಣಿ ಇರುವ ಸ್ಥಳ. ಈ ಭಾಗದಲ್ಲಿರುವ ವ್ಯಾಪಾರಸ್ಥರು, ಸಾರ್ವಜನಿಕರು ಮೂತ್ರ ವಿಸರ್ಜನೆಗೆ ಬಸ್ ನಿಲ್ದಾಣ, ಊರಿನ ಹೊರಗಡೆ ಹೋಗುವ ಪರಿಸ್ಥಿತಿ ಇದೆ. ಬಹುತೇಕರು ಖಾಲಿ ಜಾಗ ಅವಲಂಬಿಸುತ್ತಿದ್ದು, ಇದರಿಂದ ಗಲೀಜು, ಮಾಲಿನ್ಯ ಸೃಷ್ಟಿಯಾಗುತ್ತಿದೆ. ಈಗಿರುವ ಶೌಚಗೃಹಗಳಿಗೆ ಸಮರ್ಪಕವಾಗಿ ನೀರಿನ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ. ನೀರಿನ ವ್ಯವಸ್ಥೆ ಹಾಗೂ ಸರಿಯಾಗಿ ನಿರ್ವಹಣೆ ಮಾಡಿದರೆ ಗಬ್ಬು ವಾಸನೆಯನ್ನಾದರೂ ತಡೆಗಟ್ಟಬಹುದು.

ಬೇರೆ ಊರುಗಳಿಂದ ಬರುವ ಜನರು ತೀವ್ರ ತೊಂದರೆ ಅನುಭವಿಸುತ್ತಾರೆ. ಪುರುಷರು ರಸ್ತೆಬದಿಯಲ್ಲಿ ನಿಂತು ಮೂತ್ರ ವಿಸರ್ಜಿಸುವಾಗ ಅದೇ ಮಾರ್ಗದಲ್ಲಿ ಸಾಗುವ ಮಹಿಳೆಯರು ಮುಜುಗರ ಪಡುವಂತಾಗಿದೆ. ಕೊಪ್ಪಳ ಸರ್ಕಲ್ ಸೇರಿ ಪ್ರಮುಖ ಪ್ರದೇಶಗಳಲ್ಲಿ ನೀರಿನ ಅನುಕೂಲ ಕಲ್ಪಿಸಿ, ಸುಸಜ್ಜಿತ ಶೌಚಗೃಹ, ಮೂತ್ರಾಲಯಗಳ ನಿರ್ಮಾಣಕ್ಕೂ ಪುರಸಭೆ ಅಧಿಕಾರಿಗಳು ಮುಂದಾಗಬೇಕು ಎನ್ನುವುದು ಸಾರ್ವಜನಿಕರು ಒತ್ತಾಯವಾಗಿದೆ.

ಹಳೇ ಎಪಿಎಂಸಿ ಭಾಗದಲ್ಲಿ ಹೈಟೆಕ್ ಶೌಚಗೃಹ ನಿರ್ಮಾಣಕ್ಕೆ ಕ್ರಮ ವಹಿಸಿದ್ದೇವೆ. ಖಾಸಗಿ ಸಂಸ್ಥೆಯೊಂದಕ್ಕೆ 20 ವರ್ಷ ಜಾಗ ಉಚಿತವಾಗಿ ನೀಡುತ್ತಿದ್ದೇವೆ. ಬಳಕೆದಾರರಿಗೆ ದರ ನಿಗದಿ ಪಡಿಸುತ್ತಾರೆ. ಬರುವ ಹಣದಲ್ಲಿ ನಿರ್ವಹಣೆ ಮಾಡಿಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿಅಗತ್ಯವಿರುವ ಕಡೆ ಜಾಗದ ಅನುಕೂಲ ನೋಡಿಕೊಂಡು ಹೈಟೆಕ್ ಶೌಚಗೃಹಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು.-ಎಂ.ಎ. ನೂರುಲ್ಲಾಖಾನ್ ಪುರಸಭೆ ಮುಖ್ಯಾಧಿಕಾರಿ ಮುಂಡರಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net