

ಮಡಿಕೇರಿ: ೭೫ನೇ ಸ್ವಾತಂತ್ರ್ಯ ದಿನ (ಅಮೃತಮಹೋತ್ಸವದ) ಪ್ರಯುಕ್ತ ಗಾಂಧಿ ಯುವಕ ಸಂಘ ಕಂಡಕರೆ ವತಿಯಿಂದ ಕಂಡಕರೆಯ ಬ್ರೈಟ್ ಸ್ಫೋರ್ಟ್ಸ್ ಕ್ಲಬ್ ಷಟಲ್ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣದಲ್ಲಿ ಮೊದಲನೇ ವರ್ಷದ ಜಿಲ್ಲಾಮಟ್ಟದ ಮುಕ್ತ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಆ೧೪ ಮತ್ತು ೧೫ ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಸಲಹೆಗಾರ ಟಿ.ಎಂ.ಮೊಹಮ್ಮದ್ ರಫಿ ತಿಳಿಸಿದರು.
ಅಂದು ಬೆಳಿಗ್ಗೆ ೧೦ ಗಂಟೆಗೆ ಪಂದ್ಯಾವಳಿ ಪ್ರಾರಂಭವಾಗಲಿದೆ. ಪಂದ್ಯಾವಳಿಯಲ್ಲಿ ಭಾಗವಹಿಸಲು ಜಿಲ್ಲೆಯ ೫೦ ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಆಸಕ್ತರು ಆ೧೨ ರಂದು ಬೆಳಿಗ್ಗೆ ೧೦ ಗಂಟೆಯೊಳಗೆ ಮೈದಾನ ಶುಲ್ಕ ರೂ೧೦೦೦ ನೀಡಿ ತಂಡದ ಹೆಸರು ನೊಂದಾಯಿಸಿಕೊಳ್ಳಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ೭೦೦೦ ರೂ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ೩೫೦೦ ರೂ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಅಲ್ಲದೆ ಸೆಮಿಫೈನಲ್ ಪ್ರವೇಶಿಸಿದ ಎರಡು ತಂಡಗಳಿಗೆ ವಿಶೇಷ ಟ್ರೋಫಿ ಹಾಗೂ ವೈಯುಕ್ತಿಕ ಬಹುಮಾನಗಳನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ೯೭೩೧೬ ೮೭೫೯೮, ೯೫೯೧೬ ೯೨೪೬೭ ಸಂಪರ್ಕಿಸುವಂತೆ ತಿಳಿಸಿದರು.
ಸಂಘದ ಅಧ್ಯಕ್ಷ ಕೆ.ಎಂ.ಇಸ್ಮಾಯಿಲ್ ಮಾತನಾಡಿ, ಆ೧೫ ರಂದು ಸಂಜೆ ೭ ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ವಿವಿಧ ರಾಜೀಯ ಪಕ್ಷದ ಮುಖಂಡರು ಹಾಗೂ ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಸಾಧಕರಿಗೆ ಸನ್ಮಾನ: ಸಮಾರೋಪ ಸಮಾರಂಭದಲ್ಲಿ ಸಮಾಜ ಸೇವಕ, ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಪ್ರಧಾನ ಕಾರ್ಯದರ್ಶಿ ಕಂಡಕರೆಯ ಶಶಿಕುಮಾರ್, ಕಂಡಕರೆ ಗ್ರಾ.ಪಂ ಮಾಜಿ ಸದಸ್ಯ ಹಾಗೂ ಗಾಂಧಿ ಯುವಕ ಸಂಘದ ಸಲಹೆಗಾರ ಮೊಹಮ್ಮದ್ ರಫಿ, ಚೆಟ್ಟಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ವತ್ಸಲ, ಚೆಟ್ಟಳ್ಳಿಯ ೩ ಲೈನ್ ಮ್ಯಾನ್, ಗಾಂಧಿ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಎಂ.ಬಿ.ಎ ಪದವಿ ಪಡೆದಿರುವ ಪಿ.ಎಂ.ಷರೀಫ್, ಬ್ರೈಟ್ ಸ್ಫೋರ್ಟ್ಸ್ ಕ್ಲಬ್ ಪ್ರಮುಖರಾದ ಮನ್ಸೂರ್ ಹಾಗೂ ನೌಷಾದ್ ಅವರನ್ನು ಸಂಘದಿಂದ ಸನ್ಮಾನಿಸಿ ಗೌರವಿಸಲಾಗುವುದೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿ ಓ.ಎಸ್.ಸುಹೈಲ್, ಉಪಾಧ್ಯಕ್ಷ ಕೆ.ಎಂ.ಉನೈಸ್ ಉಪಸ್ಥಿತರಿದ್ದರು.