

ಬೆಂಗಳೂರು: ಬಿಎಂಟಿಸಿ ವ್ಯಪಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ ಅವರ ಆಡಳಿತ ವೈಖರಿ ಖಂಡಿಸಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ನೌಕರರ ಸಂಘಟನೆ ಅಧ್ಯಕ್ಷ ಎಚ್.ವಿ. ಅನಂತ ಸುಬ್ಬರಾವ್ ಬಹಿರಂಗ ಪತ್ರ ಬರೆದಿದ್ದಾರೆ.
ನೌಕರರ ಸಮಸ್ಯೆಗಳಿಗೆ ವ್ಯಪಸ್ಥಾಪಕ ನಿರ್ದೇಶಕಿ(ಎಂ.ಡಿ) ಸತ್ಯವತಿ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಎಂಡಿಯಾಗಿ ಬಂದ ಬಳಿಕ ಬಿಎಂಟಿಸಿಯಲ್ಲಿ ದರ್ಬಾರ್ ಮಾಡುತ್ತಿದ್ದಾರೆ. ಅಧಿಕಾರಿ ವರ್ಗ ಬಿಟ್ಟು ಬೇರೆ ಸಿಬ್ಬಂದಿಯನ್ನು ಕಚೇರಿಗೆ ಸೇರಿಸುತ್ತಿಲ್ಲ. ಡಿಪೋ ಮ್ಯಾನೇಜರ್ ಸೇರಿ ಇತರೆ ಅಧಿಕಾರಿಗಳನ್ನು ನಿಂದಿಸುತ್ತಿದ್ದಾರೆ. ಇವರ ವರ್ತನೆಗೆ ನಮ್ಮ ಧಿಕ್ಕಾರವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪತ್ರದಲ್ಲಿ ಏನಿದೆ?
ವಿಧಾನಸೌಧದ ಪೂರ್ವದ್ವಾರದ ಮುಂಭಾಗ ನೂರು ವಿದ್ಯುತ್ ಚಾಲಿತ ಬಸ್‌ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಹಾಜರಾಗಲು ನಮ್ಮ ಫೆಡರೇಷನ್‌ಗೆ ತಾವು ಆಹ್ವಾನ ಪತ್ರಿಕೆ ಕಳುಹಿಸಿದ್ದೀರಿ, ಅದಕ್ಕಾಗಿ ತಮಗೆ ಧನ್ಯವಾದಗಳು. ಆದರೆ ನಮ್ಮ ಫೆಡರೇಷನ್ ವತಿಯಿಂದ ಕೆಳಕಂಡ ಕಾರಣಗಳಿಂದ ನಾವು ಭಾಗವಹಿಸುತ್ತಿಲ್ಲ. ಮೊದಲನೆಯದಾಗಿ ತಾವು ವ್ಯವಸ್ಥಾಪಕ ನಿರ್ದೇಶಕರಾಗಿ ಜವಾಬ್ದಾರಿ ತೆಗೆದುಕೊಂಡ ನಂತರ ಈವರೆಗೂ ಒಮ್ಮೆಯಾದರೂ ಕಾರ್ಮಿಕ ಸಂಘಟನೆಗಳ ಜತೆ ನೌಕರರ ಸಮಸ್ಯೆಗಳ ಬಗ್ಗೆ ಚರ್ಚಿಸಿಲ್ಲ. ಸಂಘ ವಿರೋಧಿಯಾದ ನಿಮಗೆ ನಾವು ಬೇಡದಿರುವುದರಿಂದ ನಿಮ್ಮ ಕಾರ್ಯಕ್ರಮಗಳೂ ನಮಗೆ ಬೇಡ.
ಕಾರ್ಮಿಕರಿಗೆ-ಸಂಘಟನೆಗಳಿಗೆ ಗೌರವವಿಲ್ಲ:
ನಿಮ್ಮ ಕಚೇರಿಗೆ ಯಾವುದೇ ನೌಕರರನ್ನು ಒಳಗೆ ಕರೆದು ಅವರ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳಲು ಅವಕಾಶ ಕೊಟ್ಟಿಲ್ಲ. ಈವರೆಗೆ ಕಾರ್ಮಿಕ ಸಂಘಟನೆಗಳೊಡನೆ ಮಾತುಕತೆ ನಡೆಸುವುದಾಗಲಿ ಅಥವಾ ನಾವು ಬರೆದಿರುವ ಪತ್ರಗಳಿಗೆ ಜವಾಬು ಕೊಡುವ ಅಭ್ಯಾಸವಾಗಲಿ ನಿಮ್ಮಲ್ಲಿಲ್ಲ. ನಿಮ್ಮ ಆಡಳಿತ ವೈಖರಿಯಲ್ಲಿ ಕಾರ್ಮಿಕರಿಗಾಲಿ ಅವರ ಸಂಘಟನೆಗಳಿಗಾಲಿ ಗೌರವವನ್ನೂ ಕೊಟ್ಟಿಲ್ಲ. ನಿಮಗೆ ಕಾರ್ಮಿಕ ಸಂಘಗಳೊಡನೆ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸಿ ಕೈಗಾರಿಕಾ ಶಾಂತಿ ಕಾಪಾಡಬೇಕೆನ್ನುವ ಮನೋಭಾವನೆ ಇಲ್ಲ ಎನ್ನುವುದು ನಮ್ಮ ಅನುಭವವಾಗಿದೆ.
ನೀವು ಎಂಡಿಯಾಗಿ ಬಂದ ನಂತರ ನಿಮ್ಮ ಆಡಳಿತ ದರ್ಪವನ್ನು ಬಿಟ್ಟು ನೌಕರರ ಬೇರಾವುದೇ ಸಮಸ್ಯೆಗಳಿಗೂ ಸ್ಪಂದಿಸಿಲ್ಲ. ನಿಮ್ಮ ಕೆಲವು ಸಮೀಪವರ್ತಿ ಅಧಿಕಾರಿಗಳನ್ನು ಬಿಟ್ಟರೆ ಬೇರೆಲ್ಲರೂ ಆಸಮಾಧಾನದಿಂದ ನಿಮ್ಮ ಕಾರ್ಯಕ್ಷಮತೆಯ ಬಗ್ಗೆ ಕುದಿಯುತ್ತಿದ್ದಾರೆ. ಡಿಪೋ ಮ್ಯಾನೇಜರ್‌ಗಳಿಂದ ಹಿಡಿದು ಎಲ್ಲ ಅಧಿಕಾರಿಗಳು ಮನಸೋಇಚ್ಚೆ ಕೀಳು ಮತ್ತು ಕೆಟ್ಟ ಭಾಷೆಯಲ್ಲಿ ನೀವು ಸಂಬೋಧಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ನಿಮ್ಮ ಇಂತಹ ವರ್ತನೆಗೆ ನಮ್ಮ ಧಿಕ್ಕಾರವಿರಲಿ!