ರಕ್ಷಣಾ ವ್ಯವಸ್ಥೆಗೆ ಮುಕ್ತ ಸ್ವಾತಂತ್ರ್ಯ ಸ್ವಾಗತಾರ್ಹ

LXR Adarakatti
Published on

ಲಕ್ಷ್ಮೇಶ್ವರ: ಪಹಲ್ಗಾಮ್‌ನಲ್ಲಿ ಭಾರತೀಯರ ಮೇಲಿನ ಉಗ್ರರ ದಾಳಿಗೆ ಪ್ರತಿಯಾಗಿ ಬುಧವಾರ ಉಗ್ರರ ಅಡಗುದಾಣಗಳ ಮೇಲೆ ದಾಳಿ ಮಾಡಲು ರಕ್ಷಣಾ ವ್ಯವಸ್ಥೆಗೆ ಮುಕ್ತ ಸ್ವಾತಂತ್ರ್ಯ ನೀಡಿರುವ ಪ್ರಧಾನಮಂತ್ರಿಗಳ ಕ್ರಮ ಸ್ವಾಗತಾರ್ಹ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ತಾಲೂಕಿನ ಅಡರಕಟ್ಟಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಮೃತ ಮಹೋತ್ಸವವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ದೇಶದ ನಂದನವನ ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋದ ನಮ್ಮವರನ್ನು ಉಗ್ರರು ಅಮಾನವೀಯವಾಗಿ ಹತ್ಯೆ ಮಾಡಿ ಭಾರತೀಯರಲ್ಲಿ ಭಯ ಹುಟ್ಟಿಸಬೇಕೆಂಬ ಹುನ್ನಾರ ಮಾಡಿದ್ದರು. ಇದು ಭಾರತೀಯರ ಸ್ವಾಭಿಮಾನ ಕೆರಳಿಸಿತ್ತು. ಭಾರತೀಯ ಸೇನೆ ಅತ್ಯಂತ ಬಲಾಢ್ಯವಾಗಿದೆ. ದೇಶದ 140 ಕೋಟಿ ಭಾರತೀಯರು ಇನ್ನು ಮುಂದೆ ಪಾಕಿಸ್ತಾನದ ಉಗ್ರಗಾಮಿಗಳಿಗೆ ತಕ್ಕಶಾಸ್ತಿ ನೀಡಲು ಬದ್ಧರಾಗಿದ್ದೇವೆ ಎಂದರು.

ಅಡರಕಟ್ಟಿ ಪಿಕೆಪಿಎಸ್ ಸಂಘದ ಸಾಧನೆ ಶ್ಲಾಘನೀಯವಾಗಿದೆ. ಭಾರತೀಯ ಸಹಕಾರ ರಂಗದಲ್ಲಿ ಸಾಧನೆಯ ಮೈಲುಗಲ್ಲು ಮುಟ್ಟಿದ ಕೀರ್ತಿ ನಮ್ಮ ಜಿಲ್ಲೆಯದಾಗಿದೆ. ಸಹಕಾರಿ ಕ್ಷೇತ್ರ ಬೆಳೆಯಲು ಸಮುದಾಯಯದ ಪಾತ್ರ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಅಡರಕಟ್ಟಿ ಗ್ರಾಮದ ಸಹಕಾರಿ ಸಂಘ ಗ್ರಾಮೀಣರ ಆಧಾರ ಸ್ತಂಬವಾಗಿ ಅಮೃತ ಮಹೋತ್ಸವ ಸಂಭ್ರಮದಲ್ಲಿರುವುದು ಶ್ಲಾಘನೀಯ ಎಂದರು.

ಸಾನಿಧ್ಯ ವಹಿಸಿದ್ದ ಬಾಳೆಹೊನ್ನೂರು ರಂಭಾಪುರಿ ಶ್ರೀ ಡಾ. ವೀರಸೋಮೇಶ್ವರ ಜಗದ್ಗುರು ಆಶೀರ್ವಚನ ನೀಡಿ, ಗ್ರಾಮದ ಹಿರಿಯರ ಶ್ರಮ, ಸಾಧನೆಯಿಂದ ಸಂಘ 75 ವರ್ಷಗಳ ಸುದೀರ್ಘಸೇವೆ ಮಾಡಲು ಸಾಧ್ಯವಾಗಿದೆ. ಕೃಷಿಯನ್ನೇ ಬದುಕಾಗಿಸಿಕೊಂಡಿರುವ ಗ್ರಾಮೀಣ ಭಾಗದ ರೈತರನ್ನು ಕೃಷಿ ಜತೆಗೆ ಕೃಷಿ ಸಂಬಂಧಿತ ವೃತ್ತಿಗಳಲ್ಲಿ ತೊಡಗಿಸಿ ಅವರ ಆರ್ಥಿಕ ಸ್ಥಿತಿ, ಬದುಕಿನ ಗುಣಮಟ್ಟ ಹೆಚ್ಚಿಸುವಲ್ಲಿ ಸಹಕಾರಿ ಕ್ಷೇತ್ರದ ಪಾತ್ರ ಮಹತ್ವದ್ದಾಗಿದೆ. ಸಕಲ ಜೀವರಾಶಿಗಳಿಗೆ ಅನ್ನ ನೀಡುವ ರೈತನ ಬದುಕು ಹಸನಾಗಬೇಕು. ಅದಕ್ಕಾಗಿ ಸರ್ಕಾರ ರೈತರ ಹಿತ ಕಾಯುವ ಕೆಲಸ ಮಾಡಬೇಕು. ಯುವಕರು ಕೃಷಿಯಿಂದ ವಿಮುಖರಾಗಬಾರದು ಮತ್ತು ಭೂಮಿಯನ್ನು ಮಾರಾಟ ಮಾಡಿ ಪಟ್ಟಣ ಪ್ರದೇಶಗಳತ್ತ ವಲಸೆ ಹೋಗಬಾರದು. ಭವಿಷ್ಯದಲ್ಲಿ ಭೂಮಿಗೆ ಬಂಗಾರದ ಬೆಲೆ ಬರುತ್ತದೆ. ಬದುಕಲು ಚಿನ್ನಕ್ಕಿಂತ ಅನ್ನ ಮುಖ್ಯ ಎಂದರು.

ಮುಕ್ತಿಮಂದಿರ ಧರ್ಮಕ್ಷೇತ್ರ ಶ್ರೀವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು, ಗಂಜಿಗಟ್ಟಿಯ ಡಾ. ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯರು, ಬನ್ನಿಕೊಪ್ಪದ ಡಾ. ಸುಜ್ಞಾನದೇವ ಶಿವಾಚಾರ್ಯರು, ಸಂಕದಾಳದ ಹಾಲಸ್ವಾಮಿಗಳು ಉಪಸ್ಥಿತರಿದ್ದರು. ಅಡರಕಟ್ಟಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮಹಾಂತೇಶ ಬಸಪ್ಪ ಹವಳದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಎಸ್.ಎಸ್. ಪಾಟೀಲ, ಶಾಸಕ ಡಾ. ಚಂದ್ರು ಕೆ. ಲಮಾಣಿ, ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ಚನ್ನಪ್ಪ ಜಗಲಿ, ಎಸ್.ಪಿ. ಬಳಿಗಾರ, ಜಿ.ವಿ. ಪಾಟೀಲ ಸೇರಿ ಕೆಸಿಸಿ ಬ್ಯಾಂಕಿನ ನಿರ್ದೇಶಕರು, ಪಿಕೆಪಿಎಸ್ ಸಂಘದ ಆಡಳಿತ ಮಂಡಳಿ ಇತರರು ಪಾಲ್ಗೊಂಡಿದ್ದರು. ಚನ್ನಪ್ಪ ಹಳಮನಿ, ವಿ.ಎಂ. ಶಿಗ್ಲಿ, ನಿಂಗನಗೌಡ ಪಾಟೀಲ ಇತರರು ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net