

ವಿಜಯಪುರ: ನಗರದ ವಿವಿಧ ಬಡಾವಣೆ, ಕಾಲನಿಗಳಲ್ಲಿರುವ ಉದ್ಯಾನವನಗಳನ್ನು ಅಭಿವೃದ್ಧಿಪಡಿಸುವ ಜತೆಗೆ ವಾಕಿಂಗ್ ಟ್ರಾಕ್, ಓಪನ್ ಜಿಮ್ನಂತಹ ಅಭಿವೃದ್ಧಿ ಕೈಗೊಂಡಿರುವದರಿಂದ ಸಾರ್ವಜನಿಕರ ಆರೋಗ್ಯವೃದ್ಧಿಗೆ ಅವು ಸಹಕಾರಿಯಾಗಿವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರಾಭಿವೃದ್ದಿ ಪ್ರಾಧಿಕಾರದಿಂದ 2023 ನೇ ಸಾಲಿನಲ್ಲಿ ಕೈಗೊಂಡ ಕಾಮಗಾರಿಗಳಿಗೆ ಹಿಂದೇಯೇ ಮಂಜೂರಿಸಿದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರ ನಗರದ ವಿವಿಧೆಡೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಮಹಿಳೆಯರು, ವೃದ್ಧರು ನಿತ್ಯವೂ ನಿಯಮಿತವಾಗಿ ವಾಯು ವಿಹಾರ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಹಿಂದೆ ಗಾರ್ಡನ್ಗಳಲ್ಲಿ ಬೇರೆ ಏನನ್ನು ನಿರ್ಮಾಣ ಮಾಡಲು ಬರುತ್ತಿರಲಿಲ್ಲ. ಅದಕ್ಕೆ ತಿದ್ದುಪಡಿ ತಂದು ಉದ್ಯಾನದ ಶೇ. 10 ರಷ್ಟು ಜಾಗ ಬಳಸಿಕೊಳ್ಳುವ ಮೂಲಕ ಯೋಗಾ ಪ್ಲಾಟ್ಫಾಮ್, ಸಾಂಸತಿಕ ಭವನ ನಿರ್ಮಿಸಲು ಅವಕಾಶ ಕಲ್ಪಿಸಲಾಗಿದೆ. ಅದಕ್ಕೆ ಶಾಸಕರ ನಿಧಿಯಲ್ಲಿ ಅನುದಾನ ಮಂಜೂರಿಸಿ ಹಂತಹಂತವಾಗಿ ನಗರದ ಎಲ್ಲ ಉದ್ಯಾನಗಳಲ್ಲಿಯೂ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ಬೆಳಗ್ಗೆ ನಗರದ ವಾರ್ಡ್ ನಂ. 26 ರ ವ್ಯಾಪ್ತಿಯ ಸಾಸನೂರ ಆಸ್ಪತ್ರೆ ಹಿಂಭಾಗದಲ್ಲಿ 67.29 ಲ ರೂ. ಗಳ ಅನುದಾನದಲ್ಲಿ ಉದ್ಯಾನವನದ ಅಭಿವೃದ್ಧಿ, ವಿದ್ಯಾನಗರದ ಆಯುರ್ವೇದಿಕ ಮಹಾವಿದ್ಯಾಲಯದ ಹಾಸ್ಟೇಲ್ ಬಳಿ ಉದ್ಯಾನವನದ ಅಭಿವೃದ್ಧಿ, ಬಡಿಮಾನ್ ಹತ್ತಿರ, ಪರ್ಲ್ ಹೋಟೆಲ್ ಹತ್ತಿರ ಮತ್ತು ಬಂಜಾರ್ ಕ್ರಾಸ್ ಬಳಿ ಬಸ್ ಪ್ರಯಾಣಿಕರ ತಂಗುದಾಣಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ನಂತರ ವಾರ್ಡ್ ನಂ. 1 ರ ವ್ಯಾಪ್ತಿಯ ನೆಹರು ನಗರದ ಸಾಯಿಬಾಬಾ ಗುಡಿ ಬಳಿ 22.40 ಲ ರೂ. ಗಳ ಅನುದಾನದಲ್ಲಿ ಉದ್ಯಾನವನದ ತಡೆಗೋಡೆ ಮತ್ತು ವಾಕಿಂಗ್ ಟ್ರಾಕ್ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು. ಬಳಿಕ ದರ್ಗಾ ರಸ್ತೆಯ ಗಂಗಾಪುರಂ ಕಾಲನಿಯಲ್ಲಿ 65.69 ಲ ರೂ. ಗಳ ಅನುದಾನದಲ್ಲಿ ಉದ್ಯಾನವನಕ್ಕೆ ಚೈನ್ ಲಿಂಕ್ ಮೆಶ್, ಮಹಾಬಲೇಶ್ವರ ಕಾಲನಿ ಉದ್ಯಾನವನದ ಅಭಿವೃದ್ಧಿ ಮತ್ತು ಗಂಗಾಪುರಂ ಬಳಿಯ ಉದ್ಯಾನವನದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ಸಮಾರಂಭದ ಬಳಿಕ ವಿವಿಧೆಡೆ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ಶಾಸಕರು ಸ್ಥಳದಲ್ಲೆ ಹಲವು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದರು.