

ಮನೋಹರ್ ಬಳಂಜ ಬೆಳ್ತಂಗಡಿ ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯು ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ 35 ಕಿ.ಮೀ. ವ್ಯಾಪ್ತಿಯಲ್ಲಿ ಸಾಗುತ್ತಿದ್ದು, ಆದರೆ ನಗರ ಪ್ರದೇಶಗಳಲ್ಲಿ ಚರಂಡಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಬೆರಳೆಣಿಕೆ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ನಿರ್ಮಾಣ ಹಂತದಲ್ಲಿರುವ ಚರಂಡಿಗಳಲ್ಲಿ ಶೇಖರಣೆಯಾದ ನೀರಿನಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ. ಹೆದ್ದಾರಿ ಅಭಿವೃದ್ಧಿಗಾಗಿ ಹಲವೆಡೆ ಚರಂಡಿ ಕಾಮಗಾರಿಗಳು ಆರಂಭಗೊಂಡಿದ್ದು, ಇದುವರೆಗೆ ಯಾವುದೂ ಪೂರ್ಣಗೊಂಡಿಲ್ಲ. ಈ ಕಾರಣದಿಂದ ಅವಘಡಗಳು ಹೆಚ್ಚಾಗುವ ಸಾಧ್ಯತೆ ಇದ್ದು, ಇದುವರೆಗೆ ಮುಂಜಾಗರೂಕತೆ ಕ್ರಮಗಳನ್ನೂ ಕೈಗೊಳ್ಳಲಾಗಿಲ್ಲ. ಸ್ಥಳೀಯ ಹೋಟೆಲ್, ಫ್ಯಾಕ್ಟರಿಗಳ ಕೊಳಚೆ ನೀರು ಕೂಡ ಅಪೂರ್ಣ ಚರಂಡಿಗಳಿಗೆ ಹರಿಯುತ್ತಿವೆ. ಒಂದೆಡೆ ಗ್ರಾಮ ಪಂಚಾಯಿತಿಗಳು, ಜಿಲ್ಲಾಡಳಿತವು ತಾಲೂಕಾದ್ಯಂತ ಸಾಂಕ್ರಾಮಿಕ ರೋಗಗಳ ಕುರಿತು ಮುನ್ನೆಚ್ಚರಿಕೆ ಮಾಹಿತಿ ಕಾರ್ಯಕ್ರಮಗಳ ಆಯೋಜಿಸುತ್ತಿದ್ದು, ಇನ್ನೊಂದೆಡೆ ಅಪೂರ್ಣ ಚರಂಡಿಗಳಲ್ಲಿ ಸಂಗ್ರಹಗೊಂಡಿರುವ ಕೊಳಚೆ ಮಿಶ್ರಿತ ಮಳೆನೀರಿನ ಸಂಗ್ರಹ ಸ್ಥಳೀಯ ಪರಿಸರದಲ್ಲಿ ಸೊಳ್ಳೆಗಳ ಉತ್ಪತ್ತಿಗೆ, ಡೆಂಘೆ , ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳಿಗೆ ಮತ್ತಷ್ಟು ಉತ್ತೇಜನ ನೀಡುತ್ತಿದೆ. ಈಗಾಗಲೇ ತಾಲೂಕಿನ ಹಲವೆಡೆ ಡೆಂಘೆ , ಮಲೇರಿಯಾ ಪ್ರಕರಣಗಳು ಪತ್ತೆಯಾಗಿವೆ. ಓಪನ್ ಡ್ರೈನೇಜ್‌ನಿಂದ ಅಪಾಯ ಖಚಿತ ಅನೇಕ ಚರಂಡಿಗಳು ಇನ್ನೂ ತೆರೆದೇ ಇದ್ದು, ಮಳೆಗಾಲದಲ್ಲಿ ನೀರು ತುಂಬಿ ರಸ್ತೆ ಮೇಲೆ ಹರಿಯುವ ಅಪಾಯವಿದೆ. ಅಲ್ಲದೇ, ಚರಂಡಿ ಗೋಚರಿಸದೆ ಪಾದಚಾರಿಗಳು ಕೆಳಗೆ ಬೀಳುವ ಅಪಾಯವೂ ಇದೆ. ಕೆಲವು ಮುಖ್ಯರಸ್ತೆಗಳಲ್ಲಿ ನಿರ್ಮಾಣ ಹಂತದಲ್ಲಿರುವ ಚರಂಡಿಗಳು ತೆರೆದೇ ಇದ್ದು, ವಾಹನಗಳು ಇದರೊಳಗೆ ಬೀಳುವ ಸಂಭವವೂ ಹೆಚ್ಚು. ನಗರಗಳಲ್ಲಿ ಶೇ.25ರಿಂದ 30ರಷ್ಟು ಮಾತ್ರ ಕಾಮಗಾರಿ ಪೂರ್ಣಗೊಂಡಿದ್ದು, ಜತೆಗೆ ಮಳೆ ನೀರಿನ ಹರಿವಿಗೆ ಸೂಕ್ತ ವ್ಯವಸ್ಥೆಗಳೂ ಇಲ್ಲ. ಶೀಘ್ರವೇ ಎಲ್ಲ ಚರಂಡಿ ಕಾಮಗಾರಿಗಳನ್ನು ಕೊನೆಗಾಣಿಸಬೇಕು ಎಂದು ತಾಲೂಕಿನ ಜನತೆ ಒತ್ತಾಯಿಸಿದ್ದಾರೆ. ಅವೈಜ್ಞಾನಿಕ ಕಾಮಗಾರಿ ದುರಸ್ತಿಗೆ ಪಟ್ಟು ಉಜಿರೆ- ಬೆಳ್ತಂಗಡಿ ರಸ್ತೆ ಕಾಮಗಾರಿ ಬಹಳ ಹಿಂದೆ ಉಳಿದಿದ್ದು, ಶೀಘ್ರವೇ ಪೂರ್ಣಗೊಳ್ಳಬೇಕು. ಬಹುತೇಕ ರಸ್ತೆಗಳು, ಡ್ರೈನೇಜ್ ಅವೈಜ್ಞಾನಿಕವಾಗಿದ್ದು, ಎತ್ತರವಿರುವ ಚರಂಡಿಗಳನ್ನು ರಸ್ತೆಗೆ ಸಮಗೊಳಿಸಬೇಕು. ಈಗಾಗಲೇ ಅಗೆದು ಹಾಕಿರುವ ರಸ್ತೆಗಳನ್ನು ಕೂಡಲೇ ಮುಚ್ಚಬೇಕು ಎಂದು ಎರಡು ಭಾಗದ ಸ್ಥಳೀಯರು ಆಡಳಿತ ವರ್ಗವನ್ನು ಒತ್ತಾಯಿಸಿದ್ದಾರೆ.
ಮಳೆ ನೀರು ಚರಂಡಿಗಳಲ್ಲಿ ಸಂಗ್ರಹಗೊಂಡಿರುವ ಕುರಿತು ಆಯಾ ಪಂಚಾಯಿತಿಗಳು ಗಮನಹರಿಸಿ ಇಲಾಖೆಯ ಸಹಕಾರದೊಂದಿಗೆ ಅದನ್ನು ಸೂಕ್ತವಾಗಿ ನಿರ್ವಹಣೆ ಮಾಡುವಂತೆ ಸೂಚಿಸಲಾಗುವುದು. ಡಾ.ಸಂಜಾತ್, ಟಿಎಚ್‌ಒ ಬೆಳ್ತಂಗಡಿ ಪೇಟೆ ಪ್ರದೇಶದ ಚರಂಡಿಗಳಲ್ಲಿ ಮಳೆ ನೀರು ಶೇಖರಣೆಗೊಂಡಿದ್ದು, ಅಪಾಯಗಳಿಗೆ ಆಹ್ವಾನ ನೀಡುತ್ತಿವೆ. ಚರಂಡಿ ಕಾಮಗಾರಿಯನ್ನು ಮಳೆಗಾಲ ಆರಂಭಕ್ಕೆ ಮೊದಲೇ ಕೊನೆಗಾಣಿಸಬೇಕು. ಅಶೋಕ ಮೆಹೆಂದಳೆ ವಾಹನ ಸವಾರ https://www.vijayavani.net/dharma-shikshana-3 https://www.vijayavani.net/it-is-essential-to-spread-a-message-through-literature-says-writer-shantaram-shetty-after-releasing-his-work-qualu-sibir-chutukulas