'ಅಭಿವೃದ್ಧಿ ಕೆಲಸಗಳ ಬಹಿರಂಗ ಚರ್ಚೆ' ಪಂಥಾಹ್ವಾನ ಸ್ವೀಕರಿಸಿದ ಮಾಜಿ ಶಾಸಕ ಬಿ.ಆರ್. ಯಾವಗಲ್

Challenge Accept
Published on

ನರಗುಂದ: ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳ ಕುರಿತು ಬಹಿರಂಗ ಚರ್ಚೆಗೆ ಶಾಸಕ ಸಿ.ಸಿ. ಪಾಟೀಲ ಅವರು ನೀಡಿದ್ದ ಪಂಥಾಹ್ವಾನವನ್ನು ಮಾಜಿ ಶಾಸಕ ಬಿ.ಆರ್. ಯಾವಗಲ್ ಸ್ವೀಕರಿಸಿದ್ದಾರೆ.

ಪಟ್ಟಣದ ಮಲಪ್ರಭಾ ಕೋಮಲ್ ಆಯಿಲ್ ಮಿಲ್ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಭಿವೃದ್ಧಿ ವಿಷಯಗಳ ಕುರಿತು ಬಹಿರಂಗ ವೇದಿಕೆಯ ಚರ್ಚೆಗೆ ಬರಲು ಸಿದ್ಧನಿದ್ದೇನೆ ಎಂದರು.

ನಕಾರಾತ್ಮಕವಾಗಿ ನಾನು ಯಾವುದೇ ಕೆಲಸಗಳಿಗೆ ಅಡೆತಡೆ ಮಾಡಿಲ್ಲ. ಆಕಸ್ಮಾತ್ ನೀವು ಕೆಲಸ ಮಾಡದೆ, ಇದ್ದರೆ ನಿಮ್ಮ ವಿರುದ್ಧ ಹೇಳಿಕೆ ಕೊಡುತ್ತೇವೆ. ಅಭಿವೃದ್ಧಿ ವಿಚಾರವಾಗಿ ಯಾವುದೇ ಸವಾಲುಗಳಿಗೆ ನಾನು ಸದಾ ಸಿದ್ಧನಿದ್ದೇನೆ ಎಂದರು.

ಬಸ್ ನಿಲ್ದಾಣ, ಡಿಪೋ, ಕೋರ್ಟ್, ಜಿಲ್ಲಾ ಪಂಚಾಯಿತಿ, ಪಿಡಬ್ಲುೃಡಿ, ರಾಷ್ಟ್ರೀಯ ಹೆದ್ದಾರಿ ಕಚೇರಿ, ಶಾಲೆಗಳು ಸೇರಿದಂತೆ ಮತಕ್ಷೇತ್ರದ ಎಲ್ಲ ಗ್ರಾಮಗಳಿಗೂ ರಸ್ತೆ ಸಂಪರ್ಕದ ಜತೆಗೆ ಅವಶ್ಯಕ ಮೂಲಸೌಕರ್ಯ ಒದಗಿಸಿಕೊಟ್ಟಿದ್ದೇನೆ. ನರಗುಂದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದಾಗ ಕೆಂಪಗೇರಿಗೆ ಮಲಪ್ರಭಾ ಕೋಮಲ್ ಆಯಿಲ್ ಮಿಲ್‌ನಿಂದ 20 ಲಕ್ಷ ರೂ. ನೆರವು ಕೊಟ್ಟು ಸಮಸ್ಯೆ ಬಗೆಹರಿಸಿದ್ದೇನೆ. ನರಗುಂದ ವಿಧಾನಸಭಾ ಮತಕ್ಷೇತ್ರ ಬೇರೆ ವ್ಯಾಪ್ತಿಗೆ ಸೇರಿಸಿದಾಗ ಕಾನೂನಾತ್ಮಕ ಹೋರಾಟದಿಂದ ಉಳಿಸಿಕೊಂಡಿದ್ದೇನೆ. ನೀವು 10 ವರ್ಷ ಮಂತ್ರಿಗಿರಿ ಮಾಡಿ ಕ್ಷೇತ್ರದಲ್ಲಿ ಯಾವ ಗಣನೀಯ ಸಾಧನೆ ಮಾಡಿದ್ದೀರಿ ಎಂಬುದನ್ನು ಸಾರ್ವಜನಿಕವಾಗಿ ಹೇಳಬೇಕು ಎಂದು ಸವಾಲೆಸೆದರು.

ಶಾಸಕ ಸಿ.ಸಿ. ಪಾಟೀಲರದು ಇಬ್ಬಗಿಯ ನೀತಿ, ರಾಜಕೀಯ ದುರುದ್ದೇಶ, ಜಾರಿಕೊಳ್ಳುವ ಜಾಯಮಾನದ ತಂತ್ರಗಾರಿಕೆ. ನರಗುಂದ ಪುರಸಭೆ ನೂತನ ಕಟ್ಟಡ ನಿರ್ಮಾಣಕ್ಕೆ ಅಡೆತಡೆ ಮಾಡಿದರು. ಜಿಟಿಟಿಸಿ ಕಾಲೇಜ್‌ಗೆ ಬಿಡುಗಡೆಯಾಗಿದ್ದ 3 ಕೋಟಿ ರೂ, ಅನುದಾನ ಮಂಜೂರಾತಿ ತಡೆ ಹಿಡಿದರು. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 2 ಸಾವಿರ ಆಶ್ರಯ ಮನೆಗಳ ನಿರ್ಮಾಣಕ್ಕೆ 110 ಕೋಟಿ ರೂ. ಮಂಜೂರು ಮಾಡಿಸಿ ಕರೆದಿದ್ದ ಟೆಂಡರ್ ತಡೆ ಹಿಡಿದರು ಎಂದು ಆರೋಪಿಸಿದರು.

ಶಾಸಕ ಸಿ.ಸಿ. ಪಾಟೀಲ ಮಾಡುವ ಯಾವುದೇ ಅಭಿವೃದ್ಧಿ ಕೆಲಸಗಳಿಗೆ ನಾನು ಇದುವರೆಗೆ ಅಡೆತಡೆ ಮಾಡಿಲ್ಲ. ರಸ್ತೆಗಳಲ್ಲಿ ಹಂಪ್ಸ್‌ಗಳಿರುವುದು ಸಹಜ. ಹಾಗಂತ ನಿಂತಲ್ಲೇ ನಿಲ್ಲೋದಕ್ಕಾಗುತ್ತಾ. 2 ವರ್ಷವಾದರೂ ನೀರಿಕ್ಷಿತ ಅಭಿವೃದ್ಧಿ ಕೆಲಸಗಳಾಗಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಅನುದಾನವಿಲ್ಲವೆಂಬ ಕುಂಟುನೆಪ ಹೇಳುತ್ತ ನಿಲ್ಲುವುದಕ್ಕಿಂತ ಜನ ಕೊಟ್ಟಿರುವ ಅಧಿಕಾರ ಬಳಸಿಕೊಂಡು ವಿಧಾನಸೌಧದಲ್ಲಿ ಹೋರಾಟ ಮಾಡುವುದರ ಮೂಲಕ ಅಭಿವೃದ್ಧಿಗೆ ಮುಂದಾಗಬೇಕು. ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದಾಗ ಕೊನೆಯ ಅವಧಿಯಲ್ಲಿ ಸಾಕಷ್ಟು ಹಣ ತಂದು ಸುರಿದಿರುವುದು ನಿಜ. ಆದರೆ, ಇದರಲ್ಲಿ ನಿಮ್ಮ ಹಿಂಬಾಲಕರನ್ನೇ ಬೆಳೆಸಿದ್ದೀರಿ. ನೀವು ಎಲ್ಲರ ಜತೆಗೆ ಹೊಂದಾಣಿಕೆಯಿಂದ ಇದ್ದು ಅಂತಹದ್ದೇನು ಗಣನೀಯ ಸಾಧನೆ ಮಾಡಿದ್ದಿರೆಂದು ಕ್ಷೇತ್ರದ ಜನರಿಗೆ ತಿಳಿಸಿ ಎಂದರು.

ಎಂ.ಎಸ್. ಪಾಟೀಲ, ಅಪ್ಪಣಗೌಡ ನಾಯ್ಕರ, ಪ್ರವೀಣ ಯಾವಗಲ್, ವಿವೇಕ ಯಾವಗಲ್, ಉದಯ ಮುಧೋಳೆ, ಗುರುಪಾದಪ್ಪ ಕುರಹಟ್ಟಿ, ವಿಜಯ ತೋಟರ, ಆರ್.ಎನ್. ಪಾಟೀಲ, ವೀರೇಶ ಚುಳಕಿ, ಎಂ.ಎಸ್. ಮದಗನವರ, ಎಂ.ಆರ್. ಕೊಣ್ಣೂರ, ವಿಷ್ಣು ಸಾಠೆ, ದೇವರಾಜ ನಾಗನೂರ, ಹನುಮಂತ ರಾಮಣ್ಣವರ, ಜಗದೀಶ ಕಗಧಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net