

ಪಾಂಡವಪುರ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಿಂದ ಪಟ್ಟಣದ ಕೆಆರ್‌ಎಸ್ ರಸ್ತೆಯಲ್ಲಿ ನಿರ್ಮಿಸಿರುವ ನೂತನ ವಾಣಿಜ್ಯ ಮಳಿಗೆಗಳನ್ನು ಸೆ.17 ರಂದು ಬಹಿರಂಗ ಹರಾಜು ಮಾಡಲಾಗುವುದು ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್ ತಿಳಿಸಿದರು.
ಟಿಎಪಿಸಿಎಂಎಸ್ ಕಲ್ಯಾಣ ಮಂಟಪದ ಮುಂಭಾಗ ನಿರ್ಮಿಸಿರುವ 16 ವಾಣಿಜ್ಯ ಮಳಿಗೆಗಳ ಪೈಕಿ 14 ವಾಣಿಜ್ಯ ಮಳಿಗೆಗಳನ್ನು ಹರಾಜು ಮಾಡಲಾಗುತ್ತಿದ್ದು, ಆಸಕ್ತರು ಸೆ.17 ರಂದು ಬೆಳಗ್ಗೆ 10.30 ಗಂಟೆಯೊಳಗೆ ಮುಂಗಡ ಹಣ ಒಂದು ಲಕ್ಷ ರೂ.ಗಳನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಹೆಸರಿನಲ್ಲಿ ಡಿಡಿ ಅಥವಾ ನಗದು ರೂಪದಲ್ಲಿ ಸಂಘಕ್ಕೆ ಹಣ ಪಾವತಿಸಿ ರಶೀದಿ ಪಡೆಯತಕ್ಕದ್ದು. ಬಿಡ್ಡುದಾರರು ಪೂರ್ಣ ಪ್ರಮಾಣದ ಹಣವನ್ನು ಹರಾಜು ನಡೆದ ದಿನದ ಸಂಜೆ 5 ಗಂಟೆಯೊಳಗೆ ಹರಾಜಿನ ಪೂರ್ಣ ಮೊತ್ತವನ್ನು ಪಾವತಿಸಬೇಕು. ಹರಾಜಿನಲ್ಲಿ ಭಾಗವಹಿಸುವ ಬಿಡ್ಡುದಾರರು 5 ಸಾವಿರಕ್ಕೆ ಮೇಲ್ಪಟ್ಟ ಮೊತ್ತಕ್ಕೆ ಹರಾಜು ಕೂಗಬೇಕು. ಹೆಚ್ಚು ಮೊತ್ತದ ಬಿಡ್ಡುದಾರರನ್ನು ಬಾಡಿಗೆದಾರರೆಂದು ಅಂತಿಮಗೊಳಿಸಲಾಗುವುದು. ಬಿಡ್ಡನ್ನು ಅಂಗೀಕರಿಸುವ, ಮುಂದೂಡುವ ಅಥವಾ ತಿರಸ್ಕರಿಸುವ ಅಧಿಕಾರ ಆಡಳಿತ ಮಂಡಳಿಗೆ ಒಳಪಟ್ಟಿರುತ್ತದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಸೆ.20ರಂದು ವಾರ್ಷಿಕ ಮಹಾಸಭೆ: ಟಿಎಪಿಸಿಎಂಎಸ್ ಷೇರುದಾರ ಸದಸ್ಯರ ವಾರ್ಷಿಕ ಮಹಾಸಭೆ ಸೆ.20ರಂದು ಬೆಳಗ್ಗೆ 11.30 ಗಂಟೆಗೆ ಸಂಸ್ಥೆಯ ರೈತ ಸಭಾಂಗಣದಲ್ಲಿ ನಡೆಯಲಿದ್ದು, ಸಂಘದ 2ಸಾವಿರ ಷೇರುದಾರರಿಗೆ ಸಭೆಯ ಆಹ್ವಾನ ಪತ್ರಿಕೆ ತಲುಪಿಸಲಾಗಿದೆ. ಜತೆಗೆ ಆಟೋ ಮೂಲಕ ಪ್ರಚಾರ ಮಾಡಲಾಗುವುದು. ಷೇರುದಾರರು ತಪ್ಪದೇ ವಾರ್ಷಿಕ ಮಹಾಸಭೆಗೆ ಹಾಜರಾಗಬೇಕು ಎಂದು ಮನವಿ ಮಾಡಿದರಲ್ಲದೆ, ಸಂಸ್ಥೆ ಪ್ರತಿವರ್ಷದಂತೆ 2023-24ನೇ ಸಾಲಿನಲ್ಲೂ 11.79 ಲಕ್ಷ ರೂ.ಲಾಭ ಗಳಿಸಿದೆ. ಸಂಸ್ಥೆಯ ಎಲ್ಲ 12 ಶಾಖೆಗಳು ಲಾಭದಾಯಕವಾಗಿದೆ. ಸಂಸ್ಥೆ ಸ್ಥಾಪನೆಯಾಗಿ 75 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಅಮೃತ ಮಹೋತ್ಸವ ಆಚರಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷೆ ತಿಬ್ಬಮ್ಮ, ನಿರ್ದೇಶಕರಾದ ಎಸ್.ದಯಾನಂದ್, ರಾಮಕೃಷ್ಣೇಗೌಡ, ಗುರುಸ್ವಾಮಿ, ಹರಳಹಳ್ಳಿ ಎಚ್.ಎನ್.ಚಿಟ್ಟಿಬಾಬು, ಮಾಲತಿ, ನರಸಿಂಹನಾಯಕ, ಕಾರ್ಯನಿರ್ವಹಣಾಧಿಕಾರಿ ನವೀನ್ ಇತರರು ಇದ್ದರು.