

ಧಾರವಾಡ: ನಗರದ ಎಪಿಎಂಸಿ ವ್ಯಾಪ್ತಿಯ ಮಾಳಾಪುರದ ಜಾನುವಾರುಗಳ ಮಾರುಕಟ್ಟೆ ಪ್ರಾಂಗಣದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ವಿುಸಿರುವ ಮುಚ್ಚು ಹರಾಜು ಕಟ್ಟೆಗಳು ವರ್ಷವಾದರೂ ಉದ್ಘಾಟನೆ ಭಾಗ್ಯವಿಲ್ಲದೆ ಸೊರಗುವಂತಾಗಿದೆ.
ಸುಮಾರು 3 ದಶಕಗಳ ಇತಿಹಾಸ ಹೊಂದಿರುವ ಈ ಮಾರುಕಟ್ಟೆ ಅಂದಾಜು 11 ಎಕರೆ ಜಾಗ ಹೊಂದಿದೆ. ಇಲ್ಲಿನ ನಡೆಯುವ ಜಾನುವಾರು ಸಂತೆಯಲ್ಲಿ ಜಾನುವಾರುಗಳಿಗೆ ಬಿಸಿಲು, ಮಳೆಯಿಂದ ರಕ್ಷಣೆ ನೀಡಲು ಮೂರು ಮುಚ್ಚು ಹರಾಜು ಕಟ್ಟೆಗಳನ್ನು ನಿರ್ವಿುಸಿದ್ದು, ವರ್ಷ ಕಳೆದರೂ ಉದ್ಘಾಟನೆಯಾಗದೇ ರೈತರು ಬಯಲಿನಲ್ಲೇ ಬಿಸಿಲು, ಮಳೆ ಎನ್ನದೆ ಸಂತೆ ನಡೆಸುವಂತಾಗಿದೆ.
ವಿನಯ ಕುಲಕರ್ಣಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಮುಚ್ಚು ಹರಾಜು ಕಟ್ಟೆಗಳ ನಿರ್ವಣಕ್ಕೆ ಚಾಲನೆ ಸಿಕ್ಕಿತ್ತು. ಈ ಕಾರ್ಯಕ್ಕೆ
ನಬಾರ್ಡ್ನ ವಿವಿಧ ಯೋಜನೆಗಳ ಅಡಿ 1.50 ಕೋಟಿ ರೂ. ವೆಚ್ಚದಲ್ಲಿ ಒಂದು ಕಟ್ಟೆ ಹಾಗೂ 1 ಕೋಟಿ ರೂ. ವೆಚ್ಚದಲ್ಲಿ ತಲಾ 2 ಕಟ್ಟೆಗಳನ್ನು ನಿರ್ವಿುಸಲಾಗಿದೆ. ಕಟ್ಟೆ ಪಕ್ಕದಲ್ಲೇ ರೈತರ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ. ವಾಹನಗಳಿಂದ ಜಾನುವಾರು ಇಳಿಸಲು, ಜಾನುವಾರುಗಳಿಗೆ ಮೇವು, ನೀರಿನ ತೊಟ್ಟಿ, ರೈತರಿಗೆ ಶೌಚಗೃಹ ಹೀಗೆ ಸಕಲ ಸೌಲಭ್ಯ ನೀಡಿದ್ದರೂ, ಅವುಗಳು ಇದ್ದೂ ಇಲ್ಲದಂತಾಗಿದೆ. 2019ರ ಡಿಸೆಂಬರ್ ಅಂತ್ಯದಲ್ಲಿ ಕಟ್ಟೆಗಳು ಪೂರ್ಣಗೊಂಡಿದ್ದರೂ, ಉದ್ಘಾಟನೆಗೆ ಕಾಲ ಕೂಡಿ ಬಂದಿಲ್ಲ.
ಕರೊನಾ ಹಾವಳಿ ಬಳಿಕ ಚರ್ಮ ಗಂಟು ರೋಗದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಂತೆಗೆ ನಿಷೇಧ ಹೇರಿತ್ತು. ಇದೀಗ ಅಧಿಕೃತವಾಗಿ ನಿಷೇಧ ಹಿಂಪಡೆಯದಿದ್ದರೂ 2-3 ವಾರಗಳಿಂದ ಪ್ರತಿ ಮಂಗಳವಾರ ಜಾನುವಾರು ಸಂತೆ ಆರಂಭವಾಗಿದೆ. ಸದ್ಯದ ಸ್ಥಿತಿಯಲ್ಲಿ ಜಾನುವಾರು, ರೈತರಿಗೆ ಕುಡಿಯುವ ನೀರಿ ಸೇರಿ ಸೂಕ್ತ ಸೌಲಭ್ಯ ಇಲ್ಲವಾಗಿದೆ.
ಹೀಗೆ ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿರುವ ಸುಸಜ್ಜಿತ ಕಟ್ಟಡ ಉದ್ಘಾಟನೆಯಾದ ಹಿನ್ನೆಲೆಯಲ್ಲಿ ಒಂದೆಡೆ ರೈತರು ಮೂಲ ಸೌಕರ್ಯದ ಸಮಸ್ಯೆ ಎದುರಿಸುತ್ತಿದ್ದರೆ, ಕಟ್ಟಡದಲ್ಲಿ ಪುಂಡ-ಪೋಕರಿಗಳ ಹಾವಳಿ ಹೆಚ್ಚುತ್ತಿದೆ. ಹೀಗಾಗಿ ಶೀಘ್ರ ಕಟ್ಟೆಗಳ ಉದ್ಘಾಟನೆ ನಡೆಸಿ, ವ್ಯಾಪಾರ-ವಹಿವಾಟಿಗೆ ಮುಕ್ತಗೊಳಿಸಲಿ ಎನ್ನುವುದು ರೈತರ ಅಭಿಪ್ರಾಯ.
ವಿಧಾನ ಪರಿಷತ್, ಗ್ರಾಮ ಪಂಚಾಯಿತಿ ಚುನಾವಣೆಗಳು ನಿಗದಿಯಾದ ಹಿನ್ನೆಲೆಯಲ್ಲಿ ಉದ್ಘಾಟನೆ ಕಾರ್ಯ ವಿಳಂಬವಾಗಿದೆ. ಈ ತಿಂಗಳು ಅಂದರೆ ಫೆಬ್ರವರಿಯಲ್ಲಿ ಉದ್ಘಾಟನೆ ನಡೆಸುವ ಯೋಚನೆ ಮಾಡಲಾಗಿದೆ. ಸಚಿವರು, ಶಾಸಕರ ಸಮಯ ಪಡೆದು ದಿನಾಂಕ ನಿಗದಿ ಮಾಡಲಾಗುವುದು. | ಬಸವರಾಜ ಹೊಸೂರ ಎಪಿಎಂಸಿ ಅಧ್ಯಕ್ಷ