ಕಾಲೇಜಿನಲ್ಲಿ ಲಲಿತಕಲಾ ವಿಭಾಗ ತೆರೆಯಿರಿ

1
Published on

ಕ್ರೀಡೆ ಮತ್ತು ಸಾಂಸ್ಕೃತಿಕ ಪ್ರತಿಭೆ ಎಲ್ಲರಲ್ಲೂ ಇರುವುದಿಲ್ಲ. ಯಾರಿಗೆ ಯಾವುದರಲ್ಲಿ ಆಸಕ್ತಿಯಿದೆ ಎಂಬುದನ್ನು ಗುರುತಿಸಿ ಅಂಥವರನ್ನು ಪ್ರೋತ್ಸಾಹಿಸಬೇಕು. ಈ ಕೆಲಸವನ್ನು ಅಧ್ಯಾಪಕರು ಮಾಡಬೇಕು. ಕ್ರೀಡಾಸ್ಪರ್ಧಿಗಳಿಗೆ ಮತ್ತು ಸಾಂಸ್ಕೃತಿಕ ಕಲಾವಿದರಿಗೆ ಪ್ರೋತ್ಸಾಹ ಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್.ಹೆಗ್ಡೆ ಹೇಳಿದರು.

ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪದವಿ ವಿಭಾಗದ ವತಿಯಿಂದ ಗುರುವಾರ ಆಯೋಜಿಸಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕಾಲೇಜಿನಲ್ಲಿ ಲಲಿತಕಲಾ ವಿಭಾಗವೊಂದನ್ನು ತೆರೆಯಬೇಕು. ಏಕೆಂದರೆ ಕ್ರೀಡಾ ಸ್ಪರ್ಧಿಗಳಿಗೆ ಮತ್ತು ಸಾಂಸ್ಕೃತಿಕ ಕಲಾವಿದರಿಗೆ ಪ್ರೋತ್ಸಾಹ ಬೇಕಾಗುತ್ತದೆ. ದೇಶಕ್ಕೆ ವಿಜ್ಞಾನಿಗಳು, ವಾಣಿಜ್ಯೋದ್ಯಮಿಗಳು, ವೈದ್ಯರು, ಲಾಯರುಗಳು ಬೇಕಾಗಿರುವಂತೆಯೇ ಕವಿಗಳು, ಕಲಾವಿದರು, ಕ್ರೀಡಾಪಟುಗಳೂ ಬೇಕಾಗಿದ್ದಾರೆ. ಭಾರತೀಯರು ಯಾವುದಕ್ಕೂ ಕಡಿಮೆಯಿಲ್ಲ. ವಿಜ್ಞಾನ, ತಂತ್ರಜ್ಞಾನ, ಸಾಂಸ್ಕೃತಿಕ ಕಲೆಗಳಲ್ಲಿ ಉತ್ತಮರಾಗಿದ್ದಾರೆ ಎಂದರು.

ರವೀಂದ್ರನಾಥ ಟ್ಯಾಗೋರ್ ಮತ್ತು ಸರ್.ಸಿ.ವಿ.ರಾಮನ್ ಅವರು ನಮ್ಮ ದೇಶಕ್ಕೆ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟಿದ್ದಾರೆ. ಆದ್ದರಿಂದ ಯುವಕರಿಗೆ, ಯುವಶಕ್ತಿಯ ಪ್ರತಿಭೆಗೆ ಪ್ರೋತ್ಸಾಹ ಬೇಕು. ಆಗ ಮಾತ್ರ ಪ್ರತಿಭೆ ಪ್ರಕಾಶಿಸುತ್ತದೆ. ವಿದ್ಯಾರ್ಥಿಗಳಿಗೆ ಪಠ್ಯದಷ್ಟೇ ಕ್ರೀಡೆಯೂ ಮುಖ್ಯ. ಇಂದು ಓದಿನಲ್ಲಿ, ಕ್ರೀಡೆಗಳಲ್ಲಿ ಸವಾಲುಗಳು ಮತ್ತು ಸ್ಪರ್ಧೆಗಳು ಬಹಳ ಇವೆ. ಸವಾಲುಗಳನ್ನು ಸ್ವೀಕರಿಸುವ ಮನೋಭಾವ ಕ್ರೀಡೆಯಿಂದ ಮಾತ್ರ ಸಿಗುತ್ತದೆ.

ಅನೇಕರು ಹಿಮಾಲಯವನ್ನು ಕಷ್ಟಪಟ್ಟು ಹತ್ತಲು ಮುಖ್ಯ ಕಾರಣ ಅವರಲ್ಲಿ ಇರುವ ಸವಾಲನ್ನು ಎದುರಿಸುವ ಗುಣವೇ ಆಗಿರುತ್ತದೆ. ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ದೃಢತೆ ಉಂಟಾಗುತ್ತದೆ. ಒತ್ತಡದಿಂದ ಮುಕ್ತರಾಗಲು ಮಾತ್ರವಲ್ಲದೆ, ನಮ್ಮ ಮುಂದಿನ ಆರೋಗ್ಯದ ಜೀವನಕ್ಕೂ ಕಾರಣವಾಗುತ್ತದೆ. ಪಠ್ಯ ಮತ್ತು ಓದು ನಮಗೆ ವೃತ್ತಿಯನ್ನು ಕಲ್ಪಿಸಬಹುದಾದರೂ ವ್ಯಕ್ತಿಗೆ ಪ್ರವೃತ್ತಿಯೂ ಅಷ್ಟೇ ಮುಖ್ಯ. ಅಮೆರಿಕದಂಥ ರಾಷ್ಟ್ರದಲ್ಲಿ ವೃತ್ತಿಗಿಂತ ಪ್ರವೃತ್ತಿಗೆ ಪ್ರಾಮುಖ್ಯವನ್ನು ನೀಡುತ್ತಾರೆ. ಪ್ರವೃತ್ತಿಯನ್ನೇ ನಂಬಿ ಅದರಲ್ಲೇ ಸಾಧನೆ ಮಾಡಿದವರು ಬಹಳ ಜನ ಇದ್ದಾರೆ. ದೌರ್ಬಲ್ಯಗಳು ಎಲ್ಲರಲ್ಲೂ ಇರುತ್ತದೆ. ಅದನ್ನು ಮೀರಿ ಸಾಧಸುವ ಗುರಿ ವಿದ್ಯಾರ್ಥಿಗಳಲ್ಲಿ ಇರಬೇಕು ಎಂದು ಹೇಳಿದರು.


ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಕೇವಲ ಪದವಿ ನೀಡುವ ಕಾರ್ಖಾನೆಗಳಾಗದೆ ಅವರ ವ್ಯಕ್ತಿತ್ವವನ್ನೂ ನಿರ್ಮಿಸುವಲ್ಲಿ ಸಫಲವಾಗಬೇಕು. ಅದಕ್ಕಾಗಿ ಪಠ್ಯ ಮತ್ತು ಪೂರಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗುವಂತೆ ಮಾಡಬೇಕು. ಕಾಲೇಜಿನಲ್ಲಿಯೂ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆಗಳನ್ನು ನಿರ್ಮಿಸಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವ, ಪ್ರೋತ್ಸಾಹಿಸುವ ಕೆಲಸವನ್ನು ಮಾಡಲಾಗುತ್ತಿದೆ. ಕೌಶಲಾಧಾರಿತ ಶಿಕ್ಷಣಕ್ಕೆ ಇಂದು ಹೆಚ್ಚು ಬೇಡಿಕೆ ಇರುವುದರಿಂದ ಶಿಕ್ಷಣದ ಜತೆಗೆ ಕೌಶಲದ ಕಡೆಗೆ ಹೆಚ್ಚು ಗಮನ ನೀಡಬೇಕು. ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ ಮುಖ್ಯವೇ ಹೊರತು ಬಹುಮಾನ ಗಳಿಸುವುದಲ್ಲ.

ಬಹುಮಾನ ಕೆಲವರಿಗೆ ದೊರೆತರೂ ಭಾಗವಹಿಸಿದವರೆಲ್ಲಾ ವಿಜೇತರೇ ಆಗಿದ್ದಾರೆ ಎಂದು ತಿಳಿಸಿದರು.
ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ಪ್ರಾಂಶುಪಾಲ ಪ್ರೊ.ಎಂ.ಪಿ.ವಿಜಯೇಂದ್ರಕುಮಾರ್, ಸಾಂಸ್ಕೃತಿಕ ವೇದಿಕೆಯ ಸಂಚಾಲಕರಾದ ಡಾ.ಸಿ.ಆರ್.ಮಧುಸೂದನ್, ಕ್ರೀಡಾ ವೇದಿಕೆಯ ಸಂಚಾಲಕ ಎಂ.ಕಾರ್ತಿಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net