

ಮೈಸೂರು: ಕೋಲ್ಕತ್ತಾದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಪ್ರಕರಣವನ್ನು ಖಂಡಿಸಿ ನಗರದಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯರು ಶನಿವಾರ ಮುಷ್ಕರ ನಡೆಸಿದರು. ಇದರಿಂದಾಗಿ ಖಾಸಗಿ ಆಸ್ಪತ್ರೆಯಲ್ಲಿ ಹೊರರೋಗಿಗಳ ಚಿಕಿತ್ಸಾ ಸೇವೆ(ಒಪಿಡಿ)ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದರಿಂದ ರೋಗಿಗಳು ಪರದಾಡಿದರು.
ಭಾರತೀಯ ವೈದ್ಯಕೀಯ ಸಂಘದ(ಐಎಂಎ)ಕರೆಗೆ ನಗರದಲ್ಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಖಾಸಗಿ ವೈದ್ಯರು ಸಹ ಮುಷ್ಕರದಲ್ಲಿ ಪಾಲ್ಗೊಳ್ಳುವ ಮೂಲಕ ಬೆಂಬಲ ಸೂಚಿಸಿದರು. ಐಎಂಎ ಸದಸ್ಯರಾದ ಸರ್ಕಾರಿ ವೈದ್ಯರು ಸಹ ಕರ್ತವ್ಯಕ್ಕೆ ಗೈರಾಗುವ ಮೂಲಕ ಮುಷ್ಕರಕ್ಕೆ ಸಹಕಾರ ನೀಡಿದರು.
ಬೆಳಗ್ಗೆ 6ರಿಂದ 24ಗಂಟೆ ಕಾಲ ಹೊರ ರೋಗಿಗಳ ಪಾಲಿಗೆ ಖಾಸಗಿ ಆಸ್ಪತ್ರೆಗಳ ವೈದ್ಯಕೀಯ ಸೇವೆ ಸ್ತಬ್ಧವಾಗಿತ್ತು. ಮುಷ್ಕರಕ್ಕೆ ನಗರದ ಎಲ್ಲ ಖಾಸಗಿ ಆಸ್ಪತ್ರೆಗಳು ಬೆಂಬಲ ಸೂಚಿಸಿದ್ದವು. ಸಣ್ಣ, ಮಧ್ಯಮ ಮತ್ತು ಬೃಹತ್ ಆಸ್ಪತ್ರೆಗಳು, ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಪಾಲ್ಗೊಂಡಿದ್ದವು. ಹೀಗಾಗಿ, ನಗರದ ಪ್ರಮುಖ ಆಸ್ಪತ್ರೆಗಳಾದ ಜೆಎಸ್‌ಎಸ್ ಆಸ್ಪತ್ರೆ, ಭಾರತ್ ಕ್ಯಾನ್ಸರ್ ಆಸ್ಪತ್ರೆ ಸೇರಿದಂತೆ ನಗರದ ಅಂದಾಜು 120 ಖಾಸಗಿ ಆಸ್ಪತ್ರೆಗಳ ಹೊರರೋಗಿಗಳ ಘಟಕ ಬಂದ್ ಆಗಿತ್ತು.
ಬಂದ್‌ನಿಂದಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ತಪಾಸಣೆ ಇರಲಿಲ್ಲ. ಆದರೆ, ಈ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಒಳರೋಗಿಗಳಿಗೆ ಎಂದಿನಂತೆ ವೈದ್ಯಕೀಯ ಉಪಚಾರ ಮತ್ತು ತುರ್ತು ಚಿಕಿತ್ಸಾ ಸೇವೆಗಳು ಮುಂದುವರಿಯಿತು.
ಪ್ರತಿಭಟನೆಯ ಕುರಿತು ಮಾಹಿತಿ ಅರಿಯದೆ ಖಾಸಗಿ ಆಸ್ಪತ್ರೆಗಳಿಗೆ ಬಂದ ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಣೆ ಮಾಡಲಾಯಿತು. ಕೆಲ ಆಸ್ಪತ್ರೆಯ ಎದುರು ಮುಷ್ಕರ ಕುರಿತು ಫಲಕ ಹಾಕಲಾಗಿತ್ತು.
ನಗರದ ಪ್ರಮುಖ ಸರ್ಕಾರಿ ಆಸ್ಪತ್ರೆಯಾದ ಕೆ.ಆರ್.ಆಸ್ಪತ್ರೆಯಲ್ಲೂ ಒಪಿಡಿ ಸೇವೆ ಬಂದ್ ಆಗಿತ್ತು. ಸದಾ ರೋಗಿಗಳು, ಸಾರ್ವಜನಿಕರಿಂದ ಗಿಜಿಗುಡುತ್ತಿದ್ದ ಹೊರರೋಗಿಗಳ ವಿಭಾಗ ಖಾಲಿ ಹೊಡೆಯುತ್ತಿತ್ತು. ಕೆಲ ರೋಗಿಗಳು ಬೆಂಚ್ ಮೇಲೆ ನಿದ್ದೆಗೆ ಜಾರಿದ್ದರು. ಉಳಿದಂತೆ ನೀರವ ಮೌನ ಅಲ್ಲಿ ಕವಿದಿತ್ತು.
ಮೈಸೂರು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭಟನೆ ಶನಿವಾರವೂ ಮುಂದುವರಿದ್ದು, ಮೃತ ವೈದ್ಯಕೀಯ ವಿದ್ಯಾರ್ಥಿನಿ ಕುಟುಂಬಕ್ಕೆ ನ್ಯಾಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾ ಸ್ಥಳಕ್ಕೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿ ಸಮಸ್ಯೆ ಆಗಲಿಸಿದರು. ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.