ಊಟಿ ಮೂಲದ ಕೊಲೆ ಆರೋಪಿ ಬಂಧನ

26-FEB-GPT-1
ಗುಂಡ್ಲುಪೇಟೆ ಹೊರವಲಯದಲ್ಲಿ ಮೃತದೇಹ ಬಿಸಾಡಲು ಬಳಸಿದ್ದ ವಾಹನ ಸಿಸಿ ಟಿವಿಯಲ್ಲಿ ಸೆರೆಯಾಗಿರುವುದು.
Published on

ಗುಂಡ್ಲುಪೇಟೆ: ತಮಿಳುನಾಡಿನ ಊಟಿ ಮೂಲದ ದೇವರಾಜು ಕೊಲೆ ಪ್ರಕರಣದ ಆರೋಪಿಯನ್ನು ಪಟ್ಟಣ ಪೊಲೀಸರು ಬಂಧಿಸಿದ್ದಾರೆ.

ಊಟಿ ಮೂಲದ ಕುಮಾರ್(42) ಬಂಧಿತ ಆರೋಪಿ. ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ತಾಲೂಕಿನ ಬೆಟ್ಟಹಳ್ಳಿ ಸಮೀಪ ಕುಮಾರ್ ಮತ್ತು ದೇವರಾಜು ಜಮೀನು ಗುತ್ತಿಗೆ ಪಡೆದುಕೊಂಡು ವ್ಯವಸಾಯ ಮಾಡುತ್ತಿದ್ದರು. ಇಬ್ಬರಿಗೂ ಮಾತಿಗೆ ಮಾತು ಬೆಳೆದು ಕುಮಾರ್ ಹಲ್ಲೆ ನಡೆಸಿದ ಪರಿಣಾಮ ದೇವರಾಜು ತೀವ್ರ ಗಾಯಗೊಂಡಿದ್ದನು. ಗಾಯಾಳುವನ್ನು ಜೀಪಿನಲ್ಲಿ ಆಸ್ಪತ್ರೆಗೆ ಕರೆತರುವಾಗ ದಾರಿಯಲ್ಲಿ ಮೃತಪಟ್ಟಿದ್ದರಿಂದ ಶವವನ್ನು ಶಾಲೆಯ ಕಾಂಪೌಂಡ್ ಬಳಿ ಬಿಸಾಡಿ ಊಟಿಗೆ ಹೋಗಿದ್ದನು.

ಪಟ್ಟಣ ಹೊರವಲಯದ ಖಾಸಗಿ ಶಾಲೆ ಕಾಂಪೌಂಡ್ ಬಳಿಯಲ್ಲಿ ದೇವರಾಜುವಿನ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದ ವಾಹನಗಳು ಹಾಗೂ ಮೊಬೈಲ್ ಟವರ್ ಆಧರಿಸಿ ವಾಹನ ಹಾಗೂ ಆರೋಪಿಯನ್ನು ಪತ್ತೆ ಹಚ್ಚಿದರು. ಸಬ್‌ಇನ್‌ಸ್ಪೆಕ್ಟರ್ ಸಾಹೇಬಗೌಡ ಹಾಗೂ ದಫೇದಾರ್ ಸಿದ್ದೇಶ್ ಕುಮಾರ್ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net