

ಮಡಿಕೇರಿ:
ಚೆಟ್ಟಳ್ಳಿಯಲ್ಲಿ ಮಂಗಳವಾರ ಪುತ್ತರಿ ಊರೊರ್ಮೆ ಕೂಟ ನಡೆಯಿತು. ಇದರ ಅಂಗವಾಗಿ ಚೆಟ್ಟಳ್ಳಿ ಕೊಡವ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತುಚಂಗಪ್ಪ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದೇ ವೇಳೆ ಕ್ರೀಡಾ ಸ್ಪರ್ಧೆ ವಿಜೇತರಿಗೆ, ಉಮ್ಮತಾಟ್, ಕೋಲಾಟ್ ಪ್ರದರ್ಶನ ನೀಡಿದ ಮಹಿಳಾ ತಂಡಕ್ಕೆ ಬಹುಮಾನ ನೀಡಲಾಯಿತು. ಈ ವೇಳೆ ಮಾತನಾಡಿದ ಮುಳ್ಳಂಡ ರತ್ತುಚಂಗಪ್ಪ, ಕೊಡವ ಜನಾಂಗದ ಮೂಲನೆಲೆಯಾದ ಐನ್‌ಮನೆಗಳಲ್ಲಿ ನಮ್ಮ ಮೂಲ ಸಂಸ್ಕçತಿ ಆಚಾರ ವಿಚಾರ, ಪದ್ಧತಿ ಪರಂಪರೆಗಳು ಉಳಿಯುವಂತಾಗಬೇಕು.ಆದರೆ ಕೊಡವ ಸಮಾಜಗಳ ಮೂಲಕ ಸಾಂಪ್ರದಾಯಿಕ ಆಚರಣೆಗಳನ್ನು ನಡೆಸಲಾಗುತ್ತಿದೆ ಎಂದರು.
ಇದಕ್ಕೂ ಮೊದಲು ತಳಿಯತಕ್ಕಿ ದೀಪ ಹಿಡಿದ ಮಹಿಳೆಯರು, ದುಡಿಕೊಟ್ಟ್ ಹಾಡಿನೊಂದಿಗೆ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತುಚಂಗಪ್ಪ ಕುತ್ತಿ ಹಿಡಿದು ಸಾಂಪ್ರದಾಯಿಕವಾಗಿ ಸಭಾಂಗಣಕ್ಕೆ ಬರುವಾಗ ಮುಳ್ಳಂಡ ಪ್ರೇಮಾ ಅಯ್ಯಪ್ಪ ಅಕ್ಕಿಹಾಕಿ ಸ್ವಾಗತಿಸಿದರು. ಸಮಾಜದ ಉಪಾದ್ಯಕ್ಷ ಬಿದ್ದಂಡ ಮಾದಯ್ಯ, ರಾಧಾ ಮಾದಯ್ಯ ದಂಪತಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಜೋಮಾಲೆ ಪೊಮ್ಮಕ್ಕಡ ಕೂಟದಿಂದ ಉಮ್ಮತಾಟ್, ಕೋಲಾಟ್ ಹಾಗೂ ವಾಲಗತಾಟ್ ಪ್ರದರ್ಶನ, ಕೊಡವ ಹಾಡುಗಾರಿಕೆ ನಡೆಯಿತು. ಪುರುಷರಿಗೆ ಮತ್ತು ಮಹಿಳೆಯರಿಗೆ ಒಳಾಂಗಣ ಕ್ರೀಡೆ ಏರ್ಪಡಿಸಲಾಗಿತ್ತು.
ಮಧ್ಯಾಹ್ನದ ಕಾರ್ಯಕ್ರಮದ ಅಂಗವಾಗಿ ಊರಿನ ಹಿರಿಯರೂ ಆದ ವಾಯುಪಡೆಯ ನಿವೃತ್ತ ಸೇನಾನಿ ಪುತ್ತರಿರ ಗಣೇಶ್ ಭೀಮಯ್ಯ ಗುರುಕಾರೋಣನಿಗೆ ಮೀದಿ ನೀರಿಟ್ಟು ಎಲ್ಲರಿಗೂ ಒಳಿತನ್ನು ಮಾಡಲೆಂದು ಬೇಡಿಕೊಂಡರು. ಊರೊರ್ಮೆ ಕೂಟದ ಅಂಗವಾಗಿ ತಂಬಿಟ್ಟು ಮತ್ತು ವಿಶೇಷ ಭೋಜನವನ್ನು ಏರ್ಪಡಿಸಲಾಗಿತ್ತು.
ಹಿರಿಯ ಸದಸ್ಯೆ ಐಚೆಟೀರ ಚೋಂದಮ್ಮ, ಉಪಾಧ್ಯಕ್ಷ ಬಿದ್ದಂಡ ಮಾದಯ್ಯ, ಖಜಾಂಜಿ ಕೆಚೇಟ್ಟೀರ ರತಿಕಾರ್ಯಪ್ಪ, ಕಾರ್ಯದರ್ಶಿ ಪುತ್ತರಿರ ಕರುಣ್‌ಕಾಳಯ್ಯ, ಸಮಾಜದ ನಿರ್ದೇಶಕಿ ಮುಳ್ಳಂಡ ಮಾಯಮ್ಮ ತಮ್ಮಯ್ಯ ಬಟ್ಟೀರ ರಕ್ಷುಕಾಳಪ್ಪ ಇದ್ದರು.
ಕೊಡಗಿನ ಪುತ್ತರಿ ನಮ್ಮೆಯ ಆಚರಣೆಗೆ ಸಂಬAಧಿಸಿದತೆ ಮಹಿಳೆಯರು ಗದ್ದೆಯಿಂದ ತಂದ ಭತ್ತವನ್ನು ಮರದ ಒನಕೆಯಿಂದ ಕುಟ್ಟಿ ಶುದ್ದಗೊಳಿಸುವಾಗ ಭತ್ತ ಕುಟ್ಟೋಣ ಬನ್ನಿ.. ಎಂಬ ಹಾಡಿನ ಮೂಲಕ ಪುರಾತನ ಆಚರಣೆಯನ್ನು ಅನಾವರಣಗೊಳಿಸಿದಲ್ಲದೆ ಮಹಿಳೆಯರು ಕಾಫಿ ಬೀಜವನ್ನು ಕುಟ್ಟಿಪುಡಿಗೊಳಿಸಿ ತಯಾರಿಸಿದ ಕೊಡಗಿನ ಬೆಲ್ಲದ ಕಾಫಿಯನ್ನು ಎಲ್ಲರಿಗೂ ನೀಡಿದ್ದು ಚೆಟ್ಟಳ್ಳಿ ಕೊಡವ ಸಮಾಜದ ವತಿಯಿಂದ ಚೆಟ್ಟಳ್ಳಿಯ ಮಂಗಳ ಸಭಾಂಗಣದಲ್ಲಿ ಮಂಗಳವಾರ ನಡೆದ ಪುತ್ತರಿ ನಮ್ಮೆ ಊರೊರ್ಮೆ ಕೂಟದ ವಿಶೇಷ ಆಕರ್ಷಣೆಯಾಗಿತ್ತು.