ಗಾಂಜಾ ಪತ್ತೆಗೆ ಕೂಂಬಿಂಗ್, ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯಿಂದ ಸರ್ಚ್ ಆಪರೇಷನ್

IMG-20200929-WA0018
Published on

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ಜಿಲ್ಲೆಯಲ್ಲಿ ಗಾಂಜಾ ಮಾಫಿಯಾ ಬೆನ್ನು ಬಿದ್ದಿರುವ ಜಿಲ್ಲಾ ಅಬಕಾರಿ ಇಲಾಖೆ ‘ಸರ್ಚ್ ಆಪರೇಷನ್’ ಹೆಸರಿನಡಿ ವಿಶೇಷ ಕಾರ್ಯಾಚರಣೆ ರೂಪಿಸಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಡ್ರಗ್ಸ್ ಮಾಫಿಯಾ ನಡುವೆಯೇ ತಳಮಟ್ಟದಿಂದ ಗಾಂಜಾ ಬೇರು ಪತ್ತೆಗೆ ಅಬಕಾರಿ ಇಲಾಖೆ ವಿಶೇಷ ಕೂಂಬಿಂಗ್ ಆರಂಭಿಸಿದೆ. ಜಿಲ್ಲೆಯ ಜನವಸತಿ ರಹಿತ ಪ್ರದೇಶ (ರಿಮೋಟ್ ಏರಿಯಾ)ಗಳಲ್ಲಿ ಗಾಂಜಾ ಬೆಳೆಯುತ್ತಿರುವುದು ಬೆಳಕಿಗೆ ಬಂದಿದೆ. ಗುಡ್ಡಗಾಡು ಪ್ರದೇಶ, ಹೊರವಲಯಗಳಲ್ಲಿ ಸಸಿ ಬೆಳೆಸಲಾಗುತ್ತಿದೆ. ನಿರ್ಜನ ಪ್ರದೇಶಗಳು ದಂಧೆಕೋರರ ಹಾಟ್‌ಸ್ಪಾಟ್ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಂಡಾಗಳ ಬಳಿ ಕಣ್ಣು: ದಂಧೆಕೋರರು ಕೆಲವು ತಾಂಡಾ ವಾಸಿಗಳನ್ನು ಬಳಸಿಕೊಂಡು ಗಾಂಜಾ ಬೆಳೆಸುವ ಹುನ್ನಾರ ನಡೆಸುತ್ತಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅಂಥ ಪ್ರದೇಶಗಳಲ್ಲಿ ಇಲಾಖೆ ಆಪರೇಷನ್ ಆರಂಭಿಸಿದೆ.

ಮಾಹಿತಿ ಮೇರೆಗೆ ಕಾರ್ಯಾಚರಣೆ: ಅಬಕಾರಿ ಇಲಾಖೆ ನಡೆಸುತ್ತಿರುವ ಕಾರ‌್ಯಾಚರಣೆ ಬಗ್ಗೆ ಸಾಕಷ್ಟು ಪ್ರಚಾರ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಇಲಾಖೆಗೆ ಮಾಹಿತಿ ನೀಡುತ್ತಿದ್ದಾರೆ. ಮಾಹಿತಿದಾರರ ವಿಷಯವನ್ನು ಗೌಪ್ಯವಾಗಿಟ್ಟು ಇಲಾಖೆ ಕಾರ್ಯಾಚರಣೆಗೆ ಇಳಿಯಲಿದೆ. ಜಿಲ್ಲೆಯಲ್ಲಿ ಎಲ್ಲಿಯಾದರೂ ಗಾಂಜಾ ಮಾಹಿತಿ ಇದ್ದರೆ ಕೂಡಲೇ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಅಬಕಾರಿ ಇಲಾಖೆ ಡಿಸಿ ರವೀಂದ್ರ ಮನವಿ ಮಾಡಿದ್ದಾರೆ. ಜೋಳ ಬೆಳೆಯುವ ಜಮೀನುಗಳಲ್ಲೇ ಹೆಚ್ಚು ಮಂದಿ ಬೆಳೆಯುತ್ತಿರುವುದು ಕಂಡುಬಂದಿದೆ.

ವಾರದಲ್ಲಿ 2 ಪ್ರಕರಣ: ಕಳೆದೊಂದು ವಾರದಲ್ಲಿ ಸರ್ಚ್ ಆಪರೇಷನ್‌ನಲ್ಲಿ 2 ಪ್ರಕರಣ ದಾಖಲಾಗಿದೆ. ನೆಲಮಂಗಲ ವ್ಯಾಪ್ತಿಯಲ್ಲಿ 600 ಗ್ರಾಂ ಗಾಂಜಾ ಜಪ್ತಿ ಮಾಡಿದ್ದ ಇಲಾಖೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದೆ. ಸೆ.29ರಂದು ದೊಡ್ಡಬಳ್ಳಾಪುರ ತಾಲೂಕು ಸಾಸಲು ಹೋಬಳಿ ಚೆನ್ನವೀರನಹಳ್ಳಿಯಲ್ಲಿ 7.5 ಕೆಜಿ ಗಾಂಜಾ ಜಪ್ತಿ ಮಾಡಿದ್ದು, ಮಾಲೀಕ ಕೃಷ್ಣಪ್ಪ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸೀರೆ ಕಟ್ಟಿ ದಂಧೆ: ಸಾಸಲು ಹೋಬಳಿಯಲ್ಲಿ ಗಾಂಜಾ ಬೆಳೆದಿದ್ದ ಮಾಲೀಕ ಸುತ್ತಲು ಸೀರೆ ಕಟ್ಟಿದ್ದ, ಸ್ಥಳೀಯರಿಗೆ ಪಕ್ಷಿಗಳನ್ನು ಬೆದರಿಸಲು ಕಟ್ಟಿರುವುದಾಗಿ ಕಥೆ ಕಟ್ಟಿದ್ದ. ಜನವಸತಿ ಪ್ರದೇಶದಿಂದ ದೂರವಿದ್ದ ಹಾಗೂ ಸುತ್ತಗುಡ್ಡಗಾಡು ಪ್ರದೇಶವಾಗಿದ್ದರಿಂದ ಸ್ಥಳೀಯರಿಗೂ ಅನುಮಾನ ಬಂದಿರಲಿಲ್ಲ. ಕಾರ್ಯಾಚರಣೆಯಲ್ಲಿ ಗಾಂಜಾ ಬೆಳೆದಿರುವುದು ಕಂಡುಬಂದಿದೆ ಎಂದು ಅಬಕಾರಿ ಡಿಸಿ ರವೀಂದ್ರ ‘ವಿಜಯವಾಣಿ‘ಗೆ ತಿಳಿಸಿದ್ದಾರೆ.

ಇಲಾಖೆಯಿಂದ ನಾಲ್ಕೂ ತಾಲೂಕುಗಳಲ್ಲೂ ಸರ್ಚ್ ಆಪರೇಷನ್ ಹೆಸರಿನಲ್ಲಿ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ. ಗಾಂಜಾ ಸುಳಿವು ಹಿಡಿದು ಕಾರ್ಯಾಚರಣೆ ನಡೆಯಲಿದೆ. ರವೀಂದ್ರ, ಅಬಕಾರಿ ಇಲಾಖೆ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net