ಮಹಿಳಾ ಸ್ವಾಸ್ಥ್ಯ ಕ್ಲಿನಿಕ್‌ಗೆ ಮೈಸೂರಿನಲ್ಲಿ ಉತ್ತಮ ಪ್ರತಿಕ್ರಿಯೆ

wellness clinic (2)
Published on

ಅವಿನಾಶ್ ಜೈನಹಳ್ಳಿ ಮೈಸೂರು
ಮಹಿಳೆಯರ ಆರೋಗ್ಯ ಸುಧಾರಣೆಗಾಗಿ ಮತ್ತು ಆರೋಗ್ಯ ಸಮಸ್ಯೆಗಳ ಕುರಿತು ಮುಕ್ತವಾಗಿ ಚರ್ಚಿಸಲು ರಾಜ್ಯ ಸರ್ಕಾರ, ರಾಷ್ಟ್ರಿಯ ಆರೋಗ್ಯ ಅಭಿಯಾನದಡಿ ಆರಂಭಿಸಿರುವ ಮಹಿಳಾ ಸ್ವಾಸ್ಥ್ಯ ಕ್ಲಿನಿಕ್ (ವುಮೆನ್ಸ್ ವೆಲ್‌ನೆಸ್ ಕ್ಲಿನಿಕ್)ಗಳಿಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸ್ವಾಸ್ಥ್ಯ ಕ್ಲಿನಿಕ್‌ನಲ್ಲಿ ಮಹಿಳೆಯರು ತಮ್ಮ ಆರೋಗ್ಯ ಸಮಸ್ಯೆ ಕುರಿತು ಮುಕ್ತವಾಗಿ ಚರ್ಚಿಸುತ್ತಿದ್ದಾರೆ. ಹದಿಹರೆಯದವರಿಗೆ ದೈಹಿಕ ಬದಲಾವಣೆ, ವೈಯಕ್ತಿಕ ಶುಚಿತ್ವ ಮತ್ತು ಸಂತಾನೋತ್ಪತ್ತಿ ಕುರಿತು ಅರಿವು ಮೂಡಿಸಲಾಗುತ್ತಿದೆ. 30 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಕ್ಯಾನ್ಸರ್ ಮತ್ತಿತರ ಗಂಭೀರ ಕಾಯಿಲೆಗಳ ಬಗ್ಗೆ ತಪಾಸಣೆ ನಡೆಸಲಾಗುತ್ತಿದೆ. ಮಹಿಳೆಯರು ಇದರ ಉಪಯೋಗ ಪಡೆಯುತ್ತಿರುವುದು ವಿಶೇಷವಾಗಿದೆ.

ಮಹಿಳೆಯರು ನಾಚಿಕೆ, ಹಿಂಜರಿಕೆ ಸ್ವಭಾವ ಬಿಟ್ಟು ಸ್ವಾಸ್ಥ್ಯ ಕ್ಲಿನಿಕ್‌ಗಳಿಗೆ ಹೋಗಿ ಮುಕ್ತವಾಗಿ ತಮ್ಮ ಆರೋಗ್ಯ ಸಮಸ್ಯೆಗಳನ್ನು ಚರ್ಚಿಸಿ, ಅಗತ್ಯ ಚಿಕಿತ್ಸೆ ಪಡೆಯುವಲ್ಲಿ ಮುಂದಾಗಿದ್ದಾರೆ. ನಗರದಲ್ಲಿ ಪೈಲಟ್ ಯೋಜನೆಯಾಗಿ 10 ತಿಂಗಳಿಂದ ಈ ಕೇಂದ್ರಗಳು ಸೇವೆ ನೀಡುತ್ತಿವೆ. ಮೈಸೂರಿನಲ್ಲಿ ಸದ್ಯ 10 ಮಹಿಳಾ ಸ್ವಾಸ್ಥ್ಯ ಕ್ಲಿನಿಕ್ ಆರಂಭವಾಗಿದ್ದು, ಇತ್ತೀಚೆಗೆ ತಜ್ಞವೈದ್ಯರ ಉಚಿತ ಸೇವೆಯೂ ಚಾಲನೆಗೊಂಡಿದೆ. ಇದಕ್ಕಾಗಿ ಮಹಿಳೆಯರಿಂದ ಉತ್ತಮ ಸ್ಪಂದನೆಯೂ ವ್ಯಕ್ತವಾಗಿದೆ.

ಹೆಚ್ಚು ಮಹಿಳೆಯರು ಕ್ಲಿನಿಕ್‌ಗಳಿಗೆ ಆಗಮಿಸಿ ಆರೋಗ್ಯ ತಪಾಸಣೆಗೆ ಮುಂದಾಗಿರುವುದರ ಫಲವಾಗಿ ಪೈಲಟ್ ಯೋಜನೆ ಯಶ ಕಂಡಿದ್ದು, ಈ ಸಾಲಿನಲ್ಲಿ ರಾಜ್ಯಾದ್ಯಂತ ಈ ಮಾದರಿಯ ಕ್ಲಿನಿಕ್‌ಗಳನ್ನು ಆರೋಗ್ಯ ಇಲಾಖೆ ಆರಂಭಿಸುವ ನಿರೀಕ್ಷೆ ಇದೆ.

ಹಣ ಸುರಿಯುವುದು ತಪ್ಪುತ್ತಿದೆ

ವೆಲ್‌ನೆಸ್ ಕ್ಲಿನಿಕ್‌ಗಳಲ್ಲಿ ಮಹಿಳೆಯರ ಆರೋಗ್ಯ ಸುಧಾರಣೆ ಮತ್ತು ಆರೋಗ್ಯ ಸಮಸ್ಯೆಗಳ ಕುರಿತು ಮುಕ್ತವಾಗಿ ಚರ್ಚಿಸಿ, ವಿಶೇಷ ವೈದ್ಯಕೀಯ ಸೇವೆಗಳನ್ನು ಒದಗಿಸಲಾಗುತ್ತಿದೆ. ಸಮಾಲೋಚನೆ, ಪರೀಕ್ಷೆ, ಔಷಧ ಉಚಿತವಾಗಿ ದೊರೆಯುತ್ತಿದೆ. ಬಡಾವಣೆಗಳ ಹಂತದಲ್ಲಿಯೇ ವಿಶೇಷ ಸೇವೆ ದೊರೆಯುತ್ತಿರುವುದರಿಂದ ಮಹಿಳೆಯರು ತಜ್ಞವೈದ್ಯರ ಸೇವೆಗೆ ಜಿಲ್ಲಾ ಮಟ್ಟದ ಆಸ್ಪತ್ರೆಗಳಿಗೆ ಅಲೆಯುವುದು ತಪ್ಪಿದೆ. ಜಿಲ್ಲಾಸ್ಪತ್ರೆಗಳ ಮೇಲೆ ಒತ್ತಡವೂ ಕಡಿಮೆಯಾಗುತ್ತಿದೆ. ಕ್ಯಾನ್ಸರ್, ಕಿಡ್ನಿ ಸೇರಿದಂತೆ ವಿವಿಧ ಕಾಯಿಲೆಗಳನ್ನು ಮೊದಲ ಹಂತದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿದೆ. ಇದರಿಂದ ಕಾಯಿಲೆ ಪೀಡಿತ ಮಹಿಳೆಯರು ಖಾಸಗಿ ಕ್ಲಿನಿಕ್‌ಗಳಿಗೆ ಹಣ ಸುರಿಯುವುದು ತಪ್ಪುತ್ತಿದೆ.

ವಿವಿಧ ರೀತಿಯ ಪರೀಕ್ಷೆ

ಮಹಿಳಾ ಸ್ವಾಸ್ಥ್ಯ ಕ್ಲಿನಿಕ್‌ನಲ್ಲಿ ಸಾಮಾನ್ಯ ಪಿಎಚ್‌ಸಿಗಳಂತೆ ಜನರಲ್ ಒಪಿಡಿ (ಹೊರ ರೋಗಿಗಳ ವಿಭಾಗ) ಇರುತ್ತದೆ. ಇದರ ಜತೆಗೆ, ವಿಶೇಷ ತಜ್ಞರ ಸೇವೆಯೂ ಲಭ್ಯ. ಇವರ ಬಳಿ ಸಮಾಲೋಚನೆಗೆ ಮಹಿಳೆಯರಿಗೆ ಮೊದಲ ಆದ್ಯತೆ, ವಯೋವೃದ್ಧರು ಹಾಗೂ ಇತರರಿಗೆ ನಂತರದ ಆದ್ಯತೆ ನೀಡಲಾಗುತ್ತದೆ. ಎಲ್ಲ ರೀತಿಯ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುತ್ತದೆ. ಮಾತ್ರವಲ್ಲದೆ, ಉಚಿತ ಸಮಾಲೋಚನೆ ಹಾಗೂ ಚಿಕಿತ್ಸೆ ದೊರೆಯುತ್ತದೆ. ಬಳಿಕ ಉನ್ನತ ಮಟ್ಟದ ಚಿಕಿತ್ಸೆಗೆ ಜಿಲ್ಲಾ ಮಟ್ಟದ ಸರ್ಕಾರಿ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸಿಕೊಡಲಾಗುತ್ತದೆ. ಕ್ಷೇಮ ಚಟುವಟಿಕೆಗಳಾದ ಯೋಗ, ಧ್ಯಾನ, ಆಹಾರ ಪದ್ಧತಿ ಮತ್ತು ಉತ್ತಮ ಜೀವನ ಶೈಲಿ ಪಾಲನೆ ಕುರಿತು ತರಬೇತಿ ನೀಡಲಾಗುತ್ತಿದೆ. ಹದಿಹರೆಯದವರು ಮತ್ತು ಮಕ್ಕಳ ಆರೋಗ್ಯ ಮಟ್ಟ ಸುಧಾರಣೆ, ಮಹಿಳಾ ಸಂಬಂಧಿತ ಇತರ ರಾಷ್ಟ್ರಿಯ ಕಾರ್ಯಕ್ರಮಗಳನ್ನು ಈ ಕ್ಲಿನಿಕ್‌ಗಳ ಮೂಲಕ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಪ್ರಯತ್ನಿಸಲಾಗುತ್ತಿದೆ.
ನಗರದಲ್ಲಿ ಒಟ್ಟು 21 ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ)ಗಳಿವೆ. ಇವುಗಳಲ್ಲಿ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೊಂದರಂತೆ 10 ಪಿಎಚ್‌ಸಿಗಳಲ್ಲಿ ಮಹಿಳಾ ಸ್ವಾಸ್ಥ್ಯ ಕ್ಲಿನಿಕ್ ತೆರೆಯಲಾಗಿದೆ. ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಸುಮಾರು ಹತ್ತು ವಿಭಾಗಗಳ ವಿಶೇಷ ತಜ್ಞ ವೈದ್ಯರ ಉಚಿತ ಸೇವೆ ಶುರು ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಯಾವ್ಯಾವ ತಜ್ಞ ವೈದ್ಯರ ಸೇವೆ?

ಮಹಿಳಾ ಸ್ವಾಸ್ಥ್ಯ ಕ್ಲಿನಿಕ್‌ನಲ್ಲಿ ಸೀರೋಗ ತಜ್ಞರು, ಮೂಳೆ ತಜ್ಞರು, ಫಿಜಿಷಿಯನ್, ಮನೋರೋಗ, ಶಸಚಿಕಿತ್ಸೆ, ಚರ್ಮರೋಗ, ಒಬಿಜಿ, ಇಎನ್‌ಟಿ ಮತ್ತು ಮಕ್ಕಳ ತಜ್ಞರು ಲಭ್ಯವಿದ್ದಾರೆ. ಇದಕ್ಕಾಗಿ ಒಟ್ಟು 10 ತಜ್ಞ ವೈದ್ಯರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ನಿತ್ಯವೂ ಈ ವೈದ್ಯರು ರೊಟೇಷನ್‌ನಲ್ಲಿ ನಗರದ 10 ಪಿಎಚ್‌ಸಿಗಳಲ್ಲಿ ತಿಂಗಳು ಪೂರ್ತಿ ಕೆಲಸ ಮಾಡುತ್ತಿದ್ದಾರೆ. ಯಾವ ದಿನ ಯಾವ ತಜ್ಞ ವೈದ್ಯರು ಸೇವೆಗೆ ಲಭ್ಯ ಇರುತ್ತಾರೆ ಎಂಬ ಮಾಹಿತಿ ಫಲಕವನ್ನು ಎಲ್ಲ ವೆಲ್‌ನೆಸ್ ಕ್ಲಿನಿಕ್‌ಗಳ ಮುಂಭಾಗದಲ್ಲಿ ಹಾಕಲಾಗಿದೆ.

ನಗರದಲ್ಲಿ 10 ಮಹಿಳಾ ಸ್ವಾಸ್ಥ್ಯ ಕ್ಲಿನಿಕ್ (ವುಮೆನ್ಸ್ ವೆಲ್‌ನೆಸ್ ಕ್ಲಿನಿಕ್)ಗಳನ್ನು ತೆರೆಯಲಾಗಿದೆ. ಅವುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಹಿಳೆಯರು ಸಂಕುಚಿತ ಮನೋಭಾವದಿಂದ ಕೆಲ ಆರೋಗ್ಯ ಸೇವೆಗಳಿಂದ ವಂಚಿತರಾಗಿದ್ದಾರೆ. ಇದರಿಂದ ಹೆಚ್ಚಾಗಿ ಹೃದಯ ರಕ್ತನಾಳ, ಸ್ತನ, ಬಾಯಿ, ಗರ್ಭಕಂಠದ ಕ್ಯಾನ್ಸರ್ ಕಡೇ ಹಂತದಲ್ಲಿ ಪತ್ತೆಯಾಗುತ್ತಿದೆ. ಮಹಿಳಾ ವೆಲ್‌ನೆಸ್ ಕ್ಲಿನಿಕ್‌ಗಳಿಂದ ಈ ಸಮಸ್ಯೆ ದೂರವಾಗಲಿದೆ.ಡಾ.ಪಿ.ಸಿ.ಕುಮಾರಸ್ವಾಮಿಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net