ಹೆಣ್ಣಿನಿಂದಷ್ಟೇ ಲಿಂಗ ತಾರತಮ್ಯ ತೊಡೆಯಲು ಸಾಧ್ಯ

mysore
Published on

ಮೈಸೂರು: ಮಹಿಳೆಯರು ಇನ್ನಷ್ಟು ಶಕ್ತಿಯುತವಾಗಿ ಎಲ್ಲ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ವಿಭಾಗದ ಮುಖ್ಯಸ್ಥೆ ಡಾ.ಎಸ್.ಎಸ್.ಮಾಲಿನಿ ಹೇಳಿದರು.


ಒಡಿಪಿ ಸಂಸ್ಥೆ, ಮಹಿಳೋದಯ ಮಹಿಳಾ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು. ಇಂದಿಗೂ ಕುಟುಂಬದಲ್ಲೇ ಗಂಡು-ಹೆಣ್ಣು ಕುರಿತು ತಾರತಮ್ಯ ಇದೆ. ಈ ಭೇದಭಾವವನ್ನು ಹೆಣ್ಣಿನಿಂದ ಮಾತ್ರ ತೊಲಗಿಸಲು ಸಾಧ್ಯ ಎಂದರು.
ಮಹಿಳೆಯರು ವಿಶೇಷ ಶಕ್ತಿ ಹೊಂದಿದ್ದಾರೆ. ಸಮಾಜ, ಕುಟುಂಬದಲ್ಲಿ ಪುರುಷರಿಗಿಂತಲೂ ಹೆಚ್ಚಿನ ದಕ್ಷತೆಯಿಂದ ಸಮರ್ಥವಾಗಿ ಕೆಲಸ ನಿರ್ವಹಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾಳೆ ಎಂದರು.


ಪೊಲೀಸ್ ಇನ್‌ಸ್ಪೆಕ್ಟರ್ ಗೀತಾ ಮಾತನಾಡಿ, ಇಂದಿಗೂ ಮಹಿಳೆಯರು ಅನೇಕ ರೀತಿಯ ಶೋಷಣೆಯನ್ನು ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಎದುರಿಸುತ್ತಿದ್ದಾರೆ. ಇದೆಲ್ಲವನ್ನು ಧೈರ್ಯದಿಂದ ಎದುರಿಸಬೇಕು. ಮಹಿಳೆಯರ ರಕ್ಷಣೆಗೆ ಪೊಲೀಸ್ ವ್ಯವಸ್ಥೆ ಸದಾ ಇರುತ್ತದೆ.

ಯಾವುದೇ ತೊಂದರೆಗಳಿಗೆ 112 ಸಹಾಯವಾಣಿಗೆ ಕರೆ ಮಾಡುವ ಮೂಲಕ ಸೂಕ್ತ ರಕ್ಷಣೆ ಪಡೆಯಬಹುದು ಎಂದರು. ಸಾಮಾಜಿಕ ಕಾರ್ಯದಲ್ಲಿ ಸಾಧನೆ ಮಾಡಿದ 4 ಮಹಿಳೆಯರಿಗೆ ಪ್ರೇರಣಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.


ಒಡಿಪಿ ಸಂಸ್ಥೆ ಅಧ್ಯಕ್ಷ, ಮೈಸೂರು ಧರ್ಮಪ್ರಾಂತ್ಯದ ಆಡಳಿತಾಧಿಕಾರಿ ಡಾ.ಬರ್ನಾಡ್ ಮೊರಾಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಧರ್ಮಗುರು ಆಲ್ಫ್ರೆಡ್ ಜಾನ್ ಮೆಂಡೋನಾ, ಸಂಸ್ಥೆ ನಿರ್ದೇಶಕ ಅಲೆಕ್ಸ್ ಪ್ರಶಾಂತ್ ಸಿಕ್ವೇರ್, ಮಹಿಳೋದಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಲತಾಮಣಿ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net