ಪ್ರಯತ್ನಶೀಲತೆಯಿಂದ ಮಾತ್ರ ಬಾನೆತ್ತರದ ಸಾಧನೆ ಸಾಧ್ಯ

School Annualday Inagaration
Published on

ಗೋಕರ್ಣ: ಪರಿಶ್ರಮ ಮತ್ತು ಸತತ ಪ್ರಯತ್ನಶೀಲತೆಯಿಂದ ಎಂತವನೂ ಬಾನೆತ್ತರದ ಸಾಧನೆ ಮಾಡಬಹುದು. ಇದಕ್ಕೆ ಕಂಬಳಿಹುಳ ಸಾರ್ವಕಾಲಿಕ ನಿದರ್ಶನವಾಗಿದೆ ಎಂದು ಶ್ರೀಮಠದ ಪೀಠಾಧಿಪತಿಗಳಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

ಇಲ್ಲಿನ ಅಶೋಕೆಯ ಗುರುದೃಷ್ಟಿ ಸಭಾಂಗಣದಲ್ಲಿ ಎರಡು ದಿನ ಆಯೋಜಿಸಲಾದ ಗುರುಕುಲಮ್ ವಾರ್ಷಿಕೋತ್ಸವ ವಿದ್ಯಾಪರ್ವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಹುಟ್ಟಿನಿಂದ ಜಡವಾಗಿರುವ ಕಂಬಳಿಹುಳ ತನ್ನ ನಿರತರ ಪರಿಶ್ರಮ ಪ್ರಕ್ರಿಯೆಯಿಂದ ಚಿಟ್ಟೆಯಾಗಿ ರೂಪಾಂತರಗೊಂಡು ಬಾನೆತ್ತರಕ್ಕೆ ಹಾರಾಡುವ ಸಾಧನೆ ಮಾಡುತ್ತದೆ. ನಿಮ್ಮ ವಿದ್ಯಾರ್ಥಿ ಬದುಕು ಕೂಡ ಬಾಲ್ಯದ ಕಂಬಳಿ ಹುಳದಿಂದ ಚಿಟ್ಟೆಯಂತಾಗಬೇಕು. ಕಂಬಳಿಹುಳದ ಪರಿವರ್ತನಾ ಪ್ರಕ್ರಿಯೆಯನ್ನು ನೀವು ರೂಢಿಸಿಕೊಳ್ಳಬೇಕು. ಅದರಿಂದ ಜೀವನದಲ್ಲಿ ಬಾನೆತ್ತರದ ಮಹತ್ತರವಾದ ಸಾಧನೆ ನಿಮ್ಮದಾಗುತ್ತದೆ. ಇಲ್ಲವಾದಲ್ಲಿ ಕಂಬಳಿಹುಳದ ಜಡತ್ವದೊಂದಿಗೆ ಜೀವನ ಪೂರ್ತಿ ಇರಬೇಕಾಗುತ್ತದೆ. ಕಾರಣ ಸತತ ಸಾಧನಾಪರತೆ ನಿಮ್ಮದಾಗಲಿ ಎಂದು ಶ್ರೀಗಳು ಹರಸಿದರು.

ಮುಖ್ಯ ಅಭ್ಯಾಗತರಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ ಶ್ರೀಗುರುವರ್ಯರ ಸಾನ್ನಿಧ್ಯ ಮತ್ತು ಮಾರ್ಗದರ್ಶನವಿರುವ ಶೇಷ್ಠ ಪರಿಸರದಲ್ಲಿ ವಿದ್ಯಾರ್ಜನೆ ಮಾಡುವ ಸುಯೋಗ ನಿಮಗೆ ದೊರೆತಿದೆ. ಇವುಗಳನ್ನು ಸದ್ಬಳಕೆ ಮಾಡಿ ಉತ್ತಮ ಫಲಿತಾಂಶ ಪಡೆದು ಗುರುಕುಲಮ್ ಕೀರ್ತಿಯನ್ನು ಸಂವರ್ಧಿಸಿ ಎಂದು ಹಾರೈಸಿದರು.

ಚಿಂತಕ ಡಾ. ಕೆ.ಪಿ.ಪುತ್ತೂರಾಯ ‘ಪ್ರದರ್ಶಿನಿ’ ಉದ್ಘಾಟಿಸಿ ಭಾರತೀಯ ಸಂಸ್ಕೃತಿಯ ಪ್ರಾಚೀನತ್ವ ಮತ್ತು ಪರಂಪರೆಯನ್ನು ತಿಳಿಸಿಕೊಟ್ಟರು.

ಸಭೆಯಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆಡಳಿತಾಧಿಕಾರಿ ಡಾ.ಪ್ರಸನ್ನಕುಮಾರ,ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಆಡಳಿತ ಸಮಿತಿ ಅಧ್ಯಕ್ಷ ಅರುಣ ಹೆಗಡೆ, ಕಾರ್ಯದರ್ಶಿ ಅಶ್ವಿನಿ ಉಡುಚೆ, ವ್ಯವಸ್ಥಾಪರಿಷತ್ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net