

ಬಾಳೆಹೊನ್ನೂರು: ಜೀವನದಲ್ಲಿ ಮಾಡಿದ ಪಾಪ-ಪುಣ್ಯಗಳು ಮಾತ್ರ ನಮ್ಮನ್ನು ಹಿಂಬಾಲಿಸುತ್ತವೆ. ಆದರ್ಶ ವ್ಯಕ್ತಿತ್ವ ವಿಕಾಸಕ್ಕೆ ಧರ್ಮ, ಸಂಸ್ಕೃತಿ ಆಚರಣೆ ಅಗತ್ಯ ಬಹಳಷ್ಟಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಗುರುವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಜರುಗಿದ ಶ್ರಾವಣ ಮಾಸದ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಮಂಗಲ ಹಾಗೂ 32ನೇ ವರ್ಷದ ಶ್ರಾವಣ ಇಷ್ಟಲಿಂಗ ಪೂಜಾ ತಪೋನುಷ್ಠಾನ ಮಂಗಲ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಜನರಲ್ಲಿ ಅಪನಂಬಿಕೆ, ಅವಿಶ್ವಾಸ ಹುಟ್ಟಿಸುವವರ ಸಂಖ್ಯೆಹೆಚ್ಚಾಗಿದೆ. ಅಂಥವರ ಬಗೆಗೆ ಜನರು ಸದಾ ಜಾಗೃತರಾಗಿರಬೇಕೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ರೇಣುಕ ಗೀತೆಯಲ್ಲಿ ಬೋಧಿಸಿದ್ದಾರೆ. ಅವರ ಧಾರ್ಮಿಕ ಮತ್ತು ಸಾಮಾಜಿಕ ವಿಚಾರಧಾರೆಗಳು ಸರ್ವರ ಬಾಳಿಗೆ ಬೆಳಕು ಮೂಡಿಸುತ್ತವೆ ಎಂದು ನುಡಿದರು.
ಮಾದನ ಹಿಪ್ಪರಗಿ ಹಿರೇಮಠದ ಶಾಂತವೀರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ‘ಪ್ರವಚನಾಚಾರ್ಯ ಪ್ರಶಸ್ತಿ’ಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಪ್ರದಾನ ಮಾಡಿದರು.
ಪ್ರಶಸ್ತಿ ಪುರಸ್ಕೃತ ಶ್ರೀ ಶಾಂತವೀರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇದು ನಮ್ಮ ಜೀವನದ ಅಹೋಭಾಗ್ಯ. ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಬಲದಿಂದ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಮಾಡಿರುವುದನ್ನು ಗುರುತಿಸಿ ಪ್ರಶಸ್ತಿ ಅನುಗ್ರಹಿಸಿರುವುದು ಅವರ ದೂರ ದೃಷ್ಟಿ, ಶಿವಾಚಾರ್ಯ ಬಳಗದ ಮೇಲೆ ಇಟ್ಟ ವಾತ್ಸಲ್ಯ ಕಾರಣವೆಂದರೆ ತಪ್ಪಾಗದು. ಎಂದೆಂದಿಗೂ ನಾವೆಲ್ಲರೂ ಧರ್ಮ ಮಾರ್ಗದಿಂದ ನಡೆದು ಅರ್ಥಪೂರ್ಣ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸಬೇಕೆಂದರು.
ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಮಳಖೇಡದ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯ ಸ್ವಾಮೀಜಿ, ಗೋಗಿ ಜಯದೇವ ಸ್ವಾಮೀಜಿ, ಚಟ್ನಳ್ಳಿ ವಿಶ್ವಾರಾಧ್ಯ ಸ್ವಾಮೀಜಿ, ಲಕ್ಷ್ಮೇಶ್ವರದ ಮಾಜಿ ಶಾಸಕ ಜಿ.ಎಸ್.ಗಡ್ಡದ್ದೇವರಮಠ, ಪೀಠದ ಆಡಳಿತಾಧಿಕಾರಿ ಎಸ್.ಬಿ.ಹಿರೇಮಠ, ಸಂಪರ್ಕಾಧಿಕಾರಿ ಪ್ರಭುದೇವ ಕಲ್ಮಠ, ಮಲ್ಲಿಕಾರ್ಜುನಸ್ವಾಮಿ ಕಲ್ಮಠ, ಹರಪನಹಳ್ಳಿ ಎಂ.ಕೊಟ್ರೇಶಪ್ಪ, ಮಲೆಬೆನ್ನೂರು ವಾಗೀಶಸ್ವಾಮಿ, ಬಾಳಯ್ಯ ಇಂಡಿಮಠ, ಮಲೆಬೆನ್ನೂರು ಜಗದೀಶ ಸಹೋದರರು ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು.
ಶಿಕ್ಷಕ ವೀರೇಶ ಕುಲಕರ್ಣಿ, ಶಿವಮೊಗ್ಗದ ಶಾಂತಾ ಆನಂದ, ಉಟಗಿ ಶಿವಪ್ರಸಾದ ದೇವರು, ಬಬಲಾದ ದಾನಯ್ಯ ದೇವರು, ರೇವತಗಾಂವ ವಿಶ್ವನಾಥ ದೇವರ, ಗುರುಕುಲದ ಸಾಧಕರಿಗೆ ಗುರುರಕ್ಷೆ ನೀಡಿ ಶುಭ ಹಾರೈಸಿದರು. ಶ್ರಾವಣ ಮಾಸದ ನಿಮಿತ್ಯ ನಡೆದುಕೊಂಡು ಬಂದ ಪುರಾಣ ಪ್ರವಚನ ಹಾಗೂ ಜಗದ್ಗುರುಗಳು ಕೈಕೊಂಡ ಶ್ರಾವಣ ಮಾಸದ ಇಷ್ಟಲಿಂಗ ಪೂಜಾ ತಪೋನುಷ್ಠಾನ ಅಮವಾಸ್ಯೆ ಪರ್ವ ಕಾಲದಲ್ಲಿ ಮಹಾ ಮಂಗಲಗೊಂಡವು.