ಬೇಳ ಸರ್ಕಾರಿ ಐಟಿಐಯಲ್ಲಿ ಒಂದೇ ಕೋರ್ಸ್ !

Bela ITI
Published on

ವಿಜಯವಾಣಿ ಸುದ್ದಿಜಾಲ ಬದಿಯಡ್ಕ

ನೀರ್ಚಾಲು ಮೀಪದ ಬೇಳದಲ್ಲಿ ಪ.ಜಾತಿ ಮತ್ತು ವರ್ಗದ ಸರ್ಕಾರಿ ಐಟಿಐಗೆ ನೂತನ ಸುಸಜ್ಜಿತ ಕಟ್ಟಡ ನಿರ್ಮಾಣ ಪೂರ್ಣಗೊಂಡು ಕಳೆದ ಜ.11ರಂದು ಉದ್ಘಾಟನೆಗೊಂಡಿದೆ. ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡದಲ್ಲಿ ಏಕಮಾತ್ರ ಕೋರ್ಸ್ ನಡೆಯುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ಇಲ್ಲಿ ಇನ್ನಷ್ಟು ಹೆಚ್ಚಿನ ಬೋಧನಾ ತರಗತಿಗಳು ಬೇಕೆಂಬ ಬೇಡಿಕೆ ಕೇಳಿಬಂದಿದೆ. ಪ್ರಸ್ತುತ ಇಲ್ಲಿ ಕಟ್ಟಡದಲ್ಲಿ ವೆಲ್ಡರ್ ಕೋರ್ಸ್ ಮಾತ್ರ ಲಭ್ಯವಿದ್ದು, 40 ವಿದ್ಯಾರ್ಥಿಗಳಿಗೆ ಮಾತ್ರ ಕಲಿಕೆಗೆ ಅವಕಾಶವಿದೆ.

1959ರಲ್ಲೇ ಹರಿಜನ ಇಲಾಖೆ ಅಧೀನದಲ್ಲಿ ಇಲ್ಲಿ ತರಬೇತಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಮರ, ನೇಯ್ಗೆ ವೃತ್ತಿಗೆ ಆರಂಭದಲ್ಲಿ ತರಬೇತಿ ನೀಡಲಾಗುತ್ತಿತ್ತು. 1975ರಿಂದ ಪ್ರೊಡಕ್ಷನ್ ಕಂ ಟ್ರೈನಿಂಗ್ ಕೇಂದ್ರವಾಯಿತು. ಬಳಿಕ 2009ರಲ್ಲಿ ಐಟಿಸಿ ಕಾರ್ಯಾರಂಭಗೊಂಡು 2012ರಲ್ಲಿ ಐಟಿಐ ಆಗಿ ಮಾರ್ಪಾಡುಗೊಂಡಿತು. 2018ರಲ್ಲಿ ಮಾನ್ಯತೆ ಪಡೆದು ಎನ್.ಸಿ.ವಿ.ಟಿ. ತರಬೇತಿಗಳು ಆರಂಭಗೊಂಡಿತು. 2019ರಲ್ಲಿ ನಡೆದ ಅಖಿಲ ಭಾರತ ಟ್ರೇಡ್ ಸೈಟ್‌ನಲ್ಲಿ ಭಾಗವಹಿಸಿದ್ದ 29 ಟ್ರೈನಿಗಳು ತೇರ್ಗಡೆಯಾಗಿದ್ದರು.

ಈಗ ನಿರ್ಮಿಸಲಾಗಿರುವ ನೂತನ ಕಟ್ಟಡ ವಿಸ್ತರಿಸಿ ನೂತನ ಕೋರ್ಸ್‌ಗಳನ್ನು ಮಂಜೂರುಗೊಳಿಸಬೇಕೆಂಬ ಬೇಡಿಕೆಗಳು ವ್ಯಕ್ತವಾಗಿವೆ. ಪ.ಜಾತಿ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಮೂರು ತರಬೇತಿ ಸಂಸ್ಥೆಗಳಿದ್ದರೂ ಮಂಜೇಶ್ವರ, ಕಾಸರಗೋಡು ತಾಲೂಕಿನ ಪ.ಜಾತಿ, ವಿಭಾಗದವರಿಗೆ ಬೇಳದ ಕೇಂದ್ರವೊಂದೇ ಆಶ್ರಯ. ಪ್ರಸ್ತುತ ಇಲ್ಲಿ 29 ವಿದ್ಯಾರ್ಥಿಗಳು ವ್ಯಾಸಂಗ ನಡೆಸುತ್ತಿದ್ದಾರೆ.

ಬೇಳದ ಐಟಿಐ ಬಹಳಷ್ಟು ಸಾಧ್ಯತೆಗಳಿರುವ ತರಬೇತಿ ಕೇಂದ್ರವಾಗಿದೆ. ಈಗ ನಿರ್ಮಿಸಿರುವ ಕಟ್ಟಡದ ಮೇಲ್ಬದಿಯಲ್ಲಿ ಇನ್ನಷ್ಟು ತರಬೇತಿಗಳನ್ನು ಆರಂಭಿಸಲು ಸಾಧ್ಯ. ಆದರೆ ಈ ಪ್ರದೇಶದಲ್ಲಿ ಹೆಚ್ಚು ಬೇಡಿಕೆ ಇರುವ, ಹೆಚ್ಚು ಉದ್ಯೋಗ ಸಾಧ್ಯತೆ ಇರುವ ತರಬೇತಿಯ ಬಗ್ಗೆ ಸರ್ವೇ ನಡೆಸಿ ತರಬೇತಿ ನಿರ್ವಹಣೆಗೆ ಬೇಕಾದ ಪ್ರಾಕ್ಟಿಕಲ್ ತರಗತಿ ಮತ್ತಿತರ ಅಂದಾಜು ವೆಚ್ಚಗಳನ್ನು ಗುರುತಿಸಿ ಸರ್ಕಾರಕ್ಕೆ ಯೋಜನೆ ಸಲ್ಲಿಸಬೇಕು. ಬಳಿಕ ಕೊಠಡಿಗಳು ಮಂಜೂರುಗೊಂಡು ನಿರ್ಮಾಣ ಕಾರ್ಯ ನಡೆಸಿ ತರಗತಿ ಆರಂಭಿಸಬಹುದು. ರಾಜೇಶ್ ಬಾಬು, ಬೇಳ ಸರ್ಕಾರಿ ಐಟಿಐ ಪ್ರಾಂಶುಪಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net