

ಹಲಗೂರು : ಕೇವಲ ಅಂಕಗಳಿಂದ ಬದುಕಿನ ಬಾಗಿಲು ತೆರೆಯುವುದಿಲ್ಲ ಎಂದು ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಎಸ್.ಬಿ.ಶಂಕರೇಗೌಡ ಹೇಳಿದರು.
ದಳವಾಯಿ ಕೊಡಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 40ನೇ ವರ್ಷದ ಬೆಳ್ಳಿ ಹಬ್ಬದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಗುರು ಶಿಷ್ಯರ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಮಕ್ಕಳಿಗೆ ಅಂಕಗಳ ಜತೆಗೆ ಸಾಮಾಜಿಕ ಜೀವನವನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬ ಅರಿವು ಬರಬೇಕು. ಜೀವನದ ಎಲ್ಲ ಏರಿಳಿತಗಳ ಬಗ್ಗೆ ಅರಿವಿದ್ದಾಗ ಬದುಕಿನ ಬಾಗಿಲು ತೆರೆಯಲು ಸಾಧ್ಯ. ನಮ್ಮ ಮಗುವಿಗೆ ತನ್ನದೇ ಆದಂತಹ ಶಕ್ತಿ, ಅಭಿಪ್ರೇರಣೆ ಇದೆ ಎಂಬುದನ್ನು ಮರೆಯುತ್ತಿದ್ದೇವೆ. ಈ ಶಾಲೆಯ ಮಕ್ಕಳು ತುಂಬಾ ಯಶಸ್ವಿಯಾಗಿದ್ದಾರೆ ಎಂಬ ಹೆಮ್ಮೆ ಇದೆ ಎಂದರು.
ನಿವೃತ್ತಿ ಜಂಟಿ ನಿರ್ದೇಶಕ ಎಂ.ಶಿವಮಾದಪ್ಪ ಮಾತನಾಡಿ, ಮಹಾನ್ ವ್ಯಕ್ತಿಗಳೆಲ್ಲ ಹುಟ್ಟಿನಿಂದಲೇ ಶ್ರೀಮಂತರಲ್ಲ. ಎಲ್ಲರೂ ಬಡ ಹಾಗೂ ಸಾಮಾನ್ಯ ಕುಟುಂಬದವರೇ. ಅವರು ತಮ್ಮ ಪರಿಶ್ರಮದಿಂದ ಸಮಾಜದಲ್ಲಿ ಸಾಧಕರಾಗಿ ವಿಶ್ವದಲ್ಲೇ ವಿಶ್ವ ಮಾನವರಾಗಿ ಗುರುತಿಸಲ್ಪಟ್ಟವರು. ಅವರ ಬೆಳವಣಿಗೆ ಅವರಿಗೆ ಬೆನ್ನೆಲುಬಾಗಿ ನಿಂತು ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದ್ದು ಅವರ ಹಿಂದಿರುವ ಗುರುಶಕ್ತಿ ಎಂದರು.
ನಿವೃತ್ತ ಪ್ರಾಂಶುಪಾಲ ಮಾಯಪ್ಪ ಮಾತನಾಡಿ, ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಭಾವ ಕೋಶ ಕಟ್ಟಿಕೊಡುವ, ಹೆತ್ತವರನ್ನು ಪ್ರೀತಿಸುವ, ಆದರಿಸುವ ಹೃದಯವಂತಿಕೆಯನ್ನು ಬೆಳೆಸುವುದೇ ಸರ್ಕಾರಿ ಶಾಲೆಗಳು ಮಾತ್ರ ಎಂದು ಹೇಳಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಿಂದ ಎತ್ತಿನ ಗಾಡಿಗಳನ್ನು ಸಿಂಗರಿಸಿಕೊಂಡು ಅದರಲ್ಲಿ ಶಿಕ್ಷಕರನ್ನು ಕೂರಿಸಿಕೊಂಡು ಮೆರವಣಿಗೆ ಮುಖಾಂತರ ಶಾಲಾ ಆವರಣಕ್ಕೆ ಕರೆತರಲಾಯಿತು. ಡೋಳ್ಳು ಕುಣಿತ, ದೇವರ ಕುಣಿತದೊಡನೆ ವಿದ್ಯಾರ್ಥಿಗಳಿಂದ ಕುಂಭಮೇಳದೊಡನೆ ಪುಷ್ಪವನ್ನು ಚೆಲ್ಲುತ್ತ ಮೆರವಣಿಗೆಯಲ್ಲಿ ಸಾಗಿದರು.
ಇದೇ ಸಂದರ್ಭದಲ್ಲಿ ಇಲ್ಲಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡ ಸುಮಾರು 40ಕ್ಕೂ ಹೆಚ್ಚು ಶಿಕ್ಷಕರನ್ನು ಹಳೆಯ ವಿದ್ಯಾರ್ಥಿ ಸಂಘದ ಗುರು ಶಿಷ್ಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರವೀಶ, ತಮ್ಮಣ್ಣಗೌಡ, ಶ್ರೀನಿವಾಸ, ಸಿದ್ದಯ್ಯ, ಶಿವರಾಜು, ಸುರೇಂದ್ರ, ಬಸವಲಿಂಗೇಗೌಡ, ಡಿ.ಕೆ.ಮಹೇಶ್ ಇತರರು ಇದ್ದರು.