ಮಳೆ ಅಭಾವ, ಮೋಡ ಬಿರುಗಾಳಿಯದ್ದು ಮಾತ್ರ ಪ್ರಭಾವ

0001
Published on

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹೆಚ್ಚಿನ ಅವಧಿ ಮೋಡ ಮುಸುಕಿದ ವಾತಾವರಣ ಕಂಡು ಬರುತ್ತಿದ್ದರೂ ನಿರೀೆಗೆ ಅನುಗುಣವಾಗಿ ಮಳೆ ಮಾತ್ರ ಬೀಳುತ್ತಿಲ್ಲ. ಇದು ಬಿತ್ತನೆ ಚಟುವಟಿಕೆಯ ಬಿರುಸಿಗೆ ತೊಡಕಾಗಿದೆ.

ಪ್ರಸಕ್ತ ಮುಂಗಾರಿಗೆ 1,28,495 ಹೆಕ್ಟೇರ್​ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು ಇಲ್ಲಿಯವರೆಗೂ 74,276 ಹೆಕ್ಟೇರ್​ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಶೇ.51.80 ರಷ್ಟು ಸಾಧನೆಯಾಗಿದೆ. ಆಗಸ್ಟ್​ನಲ್ಲಿ ಉತ್ತಮ ಮಳೆ ಸುರಿದರೆ ಮಾತ್ರ ಕೃಷಿ ಚಟುವಟಿಕೆ ಬಿರುಸುಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಿಲ್ಲೆಯ ಕಳೆದ 25 ದಿನಗಳಿಂದಲೂ ಮೋಡ ಮುಸುಕಿದ ವಾತಾವರಣವೇ ಇದೆ. ಆಗಾಗ ಮಳೆಯ ಸಿಂಚನವಾಗುತ್ತಿದೆ. ಇನ್ನೂ ಕೆಲವೆಡೆ ಸುರಿದರೂ ಕೆಲ ನಿಮಿಷಗಳಷ್ಟೇ. ಇದು ಕೃಷಿ ಚಟುವಟಿಕೆಗೆ ಸಾಕಾಗುತ್ತಿಲ್ಲ. ಮತ್ತೊಂದೆಡೆ ಅಂತರ್ಜಲ ಮಟ್ಟ ಸುಧಾರಣೆಯೂ ಕಂಡು ಬರುತ್ತಿಲ್ಲ.

*ಮುಗಿಯುತ್ತಿರುವ ಅವಧಿ

ಕಳೆದ ವರ್ಷ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಬಹುತೇಕ ಬೆಳೆಗಳು ನಾಶವಾಗಿದ್ದು ರೈತರು ಕೋಟ್ಯಂತರ ರೂ ನಷ್ಟ ಅನುಭವಿಸಿದ್ದರು. ಪ್ರಸ್ತುತ ಈ ಬಾರಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಇದರ ನಡುವೆ ಮಳೆ ಬಾರದೇ ಬೆಳೆಗಳ ಬಿತ್ತನೆ ಅವಧಿಯು ಮುಗಿಯುತ್ತಿರುವುದು ಸಾಧನೆಯಲ್ಲಿ ಕುಸಿತಕ್ಕೆ ಕಾರಣವಾಗಿದೆ. ಇನ್ನೂ ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಭತ್ತ, ನೆಲಗಡಲೆ, ಅವರೆ ಬಿತ್ತನೆ ಗುರಿ ಮತ್ತು ಸಾಧನೆಯು ಕುಸಿಯುತ್ತಿದೆ.

ಕಳೆದ ವರ್ಷ ಮೊದಲು ಮುಂಗಾರು ಅವಧಿಗೆ 1.57 ಲಕ್ಷ ಹೆಕ್ಟೇರ್​ ಪ್ರದೇಶ ಗುರಿ ಹೊಂದಲಾಗಿತ್ತು. ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ 1.42 ಲಕ್ಷ ಹೆಕ್ಟೇರ್​ಗೆ ಇಳಿಸಿದ್ದು ಈ ಬಾರಿ ಇದಕ್ಕಿಂತಲೂ ಗುರಿ ಪ್ರಮಾಣ (1.27 ಲಕ್ಷ ಹೆಕ್ಟೇರ್​ ಪ್ರದೇಶ) ಇದೆ.

*ಅಂಕಿಗಳಲ್ಲಿ ಮಾತ್ರ ಉತ್ತಮ

ಮೇನಲ್ಲಿ 67 ಮಿ.ಮೀ ಮಳೆಗೆ 95 ಮಿ.ಮೀ, ಜೂನ್​ನಲ್ಲಿ 64 ಮಿ.ಮೀಗೆ 122 ಮಿ.ಮೀ, ಜುಲೈನಲ್ಲಿ (ಜು.19 ಕ್ಕೆ) 48 ಮಿ.ಮೀ ವಾಡಿಕೆ ಮಳೆಗೆ 39( ಶೇ.&19) ಮಳೆ ಸುರಿದಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ. ಆದರೆ, ಕೆಲ ಪ್ರದೇಶಗಳಲ್ಲಿ ಮಳೆ ಸುರಿದು, ಹಲವೆಡೆ ಅಭಾವ ಇರುವುದರಿಂದ ಅಂಕಿ ಅಂಶಗಳಲ್ಲಿ ಮಾತ್ರ ಉತ್ತಮ ಎನ್ನುವಂತಾಗಿದೆ. ಕಳೆದ 25 ದಿನಗಳಿಂದಲೂ ಬಿರುಗಾಳಿ ಹೆಚ್ಚಾಗಿದೆ. ಮುಂಗಾರು ಪೂರ್ವ ಮತ್ತು ಪ್ರಾರಂಭದ ಹಂತದಲ್ಲಿ ಉತ್ತಮ ಮಳೆ ಸುರಿದ್ದು ಭೂ ಹದ ಕಾರ್ಯ, ಮೊದಲ ಹಂತದ ಬಿತ್ತನೆ ಚಟುವಟಿಕೆ ಸಾಗಿತು. ಆದರೆ, ಬಳಿಕ ಮಳೆ ಕೊರತೆಗೆ ಪ್ರಕ್ರಿಯೆ ಮುಂದುವರೆಸಿಕೊಂಡು ಹೋಗುವಲ್ಲಿ ಹಿನ್ನಡೆಯಾಗಿದೆ.

*ಇಲ್ಲಿಯವರೆಗೆ ಕಡಿಮೆ ಬಿತ್ತನೆ?

ಇಷ್ಟೊತ್ತಿಗಾಗಲೇ ಕನಿಷ್ಠ ಶೇ.65 ರಷ್ಟು ಬಿತ್ತನೆ ಪ್ರಮಾಣ ಆಗಬೇಕಾಗಿತ್ತು. ಆದರೆ, ಕಡಿಮೆ ಸಾಧನೆಯಾಗಿದೆ. ನೆಲಗಡಲೆ, ಆವರೆ ಬಿತ್ತನೆ ತೃಪ್ತಿದಾಯಕವಾಗಿಲ್ಲ. 42,630 ಹೆಕ್ಟೇರ್​ ಪ್ರದೇಶದಲ್ಲಿ ರಾಗಿ ಬಿತ್ತನೆಗೆ ಇಲ್ಲಿಯವೆರಗೂ 16,443 ಹೆ.ಪ್ರದೇಶ (ಶೇ.38), 55,571 ಹೆಕ್ಟೇರ್​ ಪ್ರದೇಶದಲ್ಲಿ ಹೈಬ್ರಿಡ್​ ಮುಸುಕಿನ ಜೋಳ ಬಿತ್ತನೆಯ ಗುರಿ ಪೈಕಿ 39,705 ಹೆಕ್ಟೇರ್​ ಪ್ರದೇಶ (ಶೇ.71 ರಷ್ಟು), 2756 ಹೆಕ್ಟೇರ್​ ಪ್ರದೇಶದಲ್ಲಿ ತೊಗರಿ ಬಿತ್ತನೆ ಗುರಿ ಪೈಕಿ 2290 ಹೆಕ್ಟೇರ್​ ಪ್ರದೇಶ (ಶೇ.83 ರಷ್ಟು), 20,433 ಹೆಕ್ಟೇರ್​ ಪ್ರದೇಶದಲ್ಲಿ ನೆಲಗಡಲೆ ಬಿತ್ತನೆ ಗುರಿ ಪೈಕಿ 14,041 ಹೆಕ್ಟೇರ್​ ಪ್ರದೇಶ ಶೇ.69 ರಷ್ಟು ಬಿತ್ತನೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net